CONNECT WITH US  

ಸಂವಿಧಾನದ ಪ್ರತಿ ಸುಟ್ಟವರನ್ನು ಗಲ್ಲಿಗೇರಿಸಿ

ದೇವನಹಳ್ಳಿ: ದೆಹಲಿಯ ಜಂತರ್‌ ಮಂತರ್‌ನಲ್ಲಿ ಭಾರತದ ಸಂವಿಧಾನವನ್ನು ಸುಟ್ಟ ದೇಶ ದ್ರೋಹಿಗಳನ್ನು ಗಡಿಪಾರು ಎಂದು ಒತ್ತಾಯಿಸಿ ಜನಪರ ಸಂಘಟನೆಗಳು ನಗರದ ಮಿನಿ ವಿಧಾನ ಸೌಧ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಡಾ. ಬಾಬ ಸಾಹೇಬ್‌ ಅಂಬೇಡ್ಕರ್‌ ಬರೆದ ಸಂವಿಧಾನ ಹಾಗೂ ಅಂಬೇಡ್ಕರ್‌ ಅವರ ಬಗ್ಗೆ ಅವಹೇಳನಕಾರಿಯಾಗಿ ಘೋಷಣೆ ಕೂಗಿದರೂ ಅವರನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ವಿಫ‌ಲರಾಗಿದ್ದಾರೆ. ಸಂವಿಧಾನವನ್ನು ಸುಡುವಂತಹ ಹೀನ ಕೃತ್ಯ ದೆಹಲಿಯ ಜಂತರ್‌ ಮಂತರ್‌ನಲ್ಲಿ ನಡೆಯುತ್ತಿದ್ದರೂ ದೆಹಲಿ ಸರ್ಕಾರ, ಕೇಂದ್ರ ಸರ್ಕಾರ ಮೌನ ವಹಿಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಜಿಲ್ಲಾ ಕಾಂಗ್ರೆಸ್‌ ಎಸ್ಸಿ ವಿಭಾಗದ ಅಧ್ಯಕ್ಷ ಎಂ.ಲೋಕೇಶ್‌, ಕೆಲವು ದುಷ್ಟ ವ್ಯಕ್ತಿಗಳು, ಸಂವಿಧಾನದ ಪ್ರತಿಯನ್ನು ಸುಟ್ಟಿದ್ದಾರೆ. ಅಂಬೇಡ್ಕರ್‌ರ ವಿರುದ್ಧ ಮತ್ತು ಮೀಸಲಾತಿ ವಿರುದ್ಧ ಘೋಷಣೆ ಕೂಗಿ ದೃಶ್ಯಾವಳಿಯನ್ನು ವೀಡಿಯೋ ಮಾಡಿ ಅದನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದಾರೆಂದು ಆಕ್ರೋಶ ವ್ಯಕ್ತ ಪಡಿಸಿದರು. 

ಮಾದಿಗ ದಂಡೋರ ರಾಜ್ಯ ಉಪಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ, ಸಂವಿಧಾನ ಸುಟ್ಟರೆ ಅದು ಎಲ್ಲಾ ನಾಗರಿಕರ ಎದೆಗೆ ಬೆಂಕಿ ಇಟ್ಟಂತೆ. ಸಂವಿಧಾನದ ಪ್ರತಿಯೊಂದು ಪದ, ಭಾಗ, ಪರಿಚ್ಛೇದ, ಕಾನೂನು ಇವೆಲ್ಲಾ ಅಖಂಡ ಭಾರತೀಯರ ಮಾನವ ಹಕ್ಕುಗಳನ್ನು ಸಂರಕ್ಷಿಸುವುದಕ್ಕಾಗಿಯೇ ಇದೆ ಎಂದು ಎಂದು ಹೇಳಿದರು.

ತಾಪಂ ಸದಸ್ಯ ಕಾರಹಳ್ಳಿ ಶ್ರೀನಿವಾಸ್‌, ಮಾದಿಗ ದಂಡೋರ ತಾಲೂಕು ಅಧ್ಯಕ್ಷ ಮಾರಪ್ಪ, ಪ್ರಧಾನ ಕಾರ್ಯದರ್ಶಿ ಎಲ್‌.ಮುನಿರಾಜು, ವಕೀಲ ಸಿದ್ದಾರ್ಥ, ಎಚ್‌.ಕೆ ವೆಂಕಟೇಶಪ್ಪ, ಜಿಲ್ಲಾ ಡಿಎಸ್‌ಎಸ್‌ ಸಂಘಟನಾ ಸಂಚಾಲಕ ತಿಮ್ಮರಾಯಪ್ಪ, ಡಿಎಸ್‌ಎಸ್‌ ತಾಲೂಕು ಸಂಚಾಲಕ ಅತ್ತಿಬೆಲೆ ನರಸಪ್ಪ, ಗ್ರಾಪಂ ಸದಸ್ಯ ಸೋಮಶೇಖರ್‌ ಇದ್ದರು.

Trending videos

Back to Top