CONNECT WITH US  

ಜಿಲ್ಲೆಯಲ್ಲಿ ಸಂಭ್ರಮದ ನಾಗರ ಪಂಚಮಿ

ದೊಡ್ಡಬಳ್ಳಾಪುರ: ಸುಡು ಬಿಸಿಲು ಮತ್ತು ಬರಗಾಲದ ಮಧ್ಯೆಯೂ ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿಯನ್ನು ಮಹಿಳೆಯರು ತಾಲೂಕಿನಲ್ಲಿ ಶ್ರದ್ಧಾ-ಭಕ್ತಿಯಿಂದ ಆಚರಿಸಿದರು.

ಜನಪದರಲ್ಲಿ ಅಣ್ಣ ತಂಗಿಯರ ಬಾಂಧವ್ಯದ ಬೆಸುಗೆಯಾಗಿ ಆಚರಿಸಲ್ಪಡುವ ಈ ಹಬ್ಬದಲ್ಲಿ ನಾಗಪೂಜೆ ಪ್ರಮುಖವಾಗಿದೆ. ತಾಲೂಕಿನ ವಿವಿಧ ನಾಗ ದೇವಾಲಯಗಳಲ್ಲಿ ನಾಗರಪಂಚಮಿ ಹಬ್ಬ ಅಂಗವಾಗಿ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಏರ್ಪಡಿಸಲಾಗಿತ್ತು.

ಮಹಿಳೆಯರಂತೂ ಮನೆಯನ್ನು ಮಾವಿನ ತೋರಣ ಹಾಗೂ ಹತ್ತಿಅರಳೆಯಿಂದ ಮಾಡಿದ ಬತ್ತಿಯಿಂದ ಶೃಂಗರಿಸಿದ್ದರು. ಮನೆಯ ಆವರಣದಲ್ಲಿ ನಾಗರಐಹಾವುಗಳ ರೂಪದ ರಂಗೋಲಿ ಬಿಡಿಸಿದ ಮಹಿಳೆಯರು ವಿವಿಧ ಬಗೆ ಉಂಡಿಗಳನ್ನು ತಯಾರಿಸಿ ನಾಗರ ಮೂರ್ತಿಗಳಿಗೆ ನೈವೇದ್ಯ ಮಾಡಿ, ಹಾಲೆರೆದು ಭಕ್ತಿಯಿಂದ ಪೂಜಿಸಿದರು.

ಘಾಟಿ ಪುಣ್ಯ ಕ್ಷೇತ್ರದಲ್ಲಿ ನಾಗ ವೈಭವ: ನಾಗರ ಪಂಚಮಿ ಅಂಗವಾಗಿ ತಾಲೂಕಿನ ಘಾಟಿ ಪುಣ್ಯ ಕ್ಷೇತ್ರದಲ್ಲಿನ ನಾಗರಕಲ್ಲುಗಳಿಗೆ ಸಹಸ್ರಾರು ಭಕ್ತಾದಿಗಳು ಹಾಲೆರೆದು ವಿಶೇಷ ಪೂಜೆ ಸಲ್ಲಿಸಿದರು. ನಗರದ ನೆಲದಾಂಜನೇಯಸ್ವಾಮಿ ದೇವಾಲಯ ಮೊದಲಾಗಿ, ವಿವಿಧ ದೇವಾಲಯದಲ್ಲಿನ ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮದುವೆಯಾದ ಹೆಣ್ಣು ಮಕ್ಕಳನ್ನು ತವರು ಮನೆಗೆ ಕರೆಸಿಕೊಂಡು ಅವರಿಗೆ ಉಡಿ ತುಂಬುವುದು, ಅವರು ತಮ್ಮ ತವರು ಮನೆಗೆ ಒಳಿತಾಗಲಿ ಎಂದು ಹಾರೈಸುವುದು ಈ ಹಬ್ಬದ ವಿಶೇಷತೆ. ವರ್ಷಪೂರ್ತಿ ಕೆಲಸ ಮಾಡುವ ರೈತಾಪಿ ಜನರಿಗೆ ಹಾವು ಕಚ್ಚಬಾರದು ಎನ್ನುವ ನಂಬಿಕೆಯಿಂದ ಹಾಲು ಎರೆದು ಪೂಜಿಸುವುದು ಹಬ್ಬದ ಮತ್ತೂಂದು ವಿಶೇಷತೆ.

ಮಹಿಳೆಯರು ನಾಗ ಪ್ರತಿಷ್ಠಾಪನೆಯಾಗಿರುವ ದೇವಾಲಯಗಳಿಗೆ ತೆರಳಿ ನಾಗರ ಕಲ್ಲಿಗೆ ಹಾಲು ಎರೆದು ಪೂಜೆ ಸಲ್ಲಿಸುವ ದೃಶ್ಯ ಸಾಮಾನ್ಯವಾಗಿತ್ತು. ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು.

ಮಕ್ಕಳು ಕೊಬ್ಬರಿ ಬಟ್ಟಲು ಹಿಡಿದು ಅಜ್ಜನ ಪಾಲು, ಅಮ್ಮನ ಪಾಲು, ಅಕ್ಕನ, ಅಣ್ಣರ ಪಾಲು ಎಂದು ನಾಗದೇವತೆಗೆ ಕಡಲೆ ಕಾಳು, ಹೂರಕ್ಕಿ, ಅಳ್ಳು ಹಾಕಿ ಹಾಲು ಎರೆದರು. ಕಡಲೆ ಕಾಳು, ಮಡಕಿ ಕಾಳು ಉಸುಳಿ, ಶೇಂಗಾ, ಕಡ್ಡಿ, ಎಳ್ಳು, ಗುಳ್ಳಡಕಿ, ಮಂಡಕ್ಕಿ ಮುಂತಾದ ಬಗೆ ಬಗೆಯ ಸಿಹಿ ಉಂಡಿಗಳನ್ನು ಸವಿದರು.
 

Trending videos

Back to Top