CONNECT WITH US  

50 ಸಾವಿರ ಎಚ್‌ಐವಿ ಪೀಡಿತರು ಚಿಕಿತ್ಸೆಯಿಂದ ದೂರ!

ಬೆಂಗಳೂರು: ಕರ್ನಾಟಕ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆಯ ನೀಡಿದ ಎಚ್‌ಐವಿ ಪೀಡಿತರ ಅಂಕಿ-ಅಂಶಕ್ಕೂ ಹಾಗೂ ವಾಸ್ತವವಾಗಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿದ್ದು, ಸುಮಾರು 50 ಸಾವಿರ ಎಚ್‌ಐವಿ ಪೀಡಿತರ ಚಿಕಿತ್ಸೆಯಿಂದ ದೂರ ಉಳಿದಿದ್ದಾರೆ. ಅಷ್ಟೇ ಅಲ್ಲ, ಹೀಗೆ ದೂರ ಉಳಿದವರ ಮಾಹಿತಿಯೂ ಇಲ್ಲ!

- ಏಡ್ಸ್‌ ಪೀಡಿತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ ಈ ಗಂಭೀರ ಆರೋಪ ಮಾಡಿದ್ದು, ಈ ವಿಚಾರವು ಏಡ್ಸ್‌ ನಿಯಂತ್ರಣ ಕುರಿತು ಚರ್ಚಿಸಲು ಆರೋಗ್ಯ ಸಚಿವ ಯು.ಟಿ. ಖಾದರ್‌ ಅವರು ಮಂಗಳವಾರ ಸಭೆಯಲ್ಲಿ ಪ್ರಸ್ತಾಪವಾಗಲಿದೆ ಎಂದು ವೇದಿಕೆ ತಿಳಿಸಿದೆ.

ವಾಸ್ತವವಾಗಿ ರಾಜ್ಯದಲ್ಲಿ ಎಷ್ಟು ಮಂದಿ ಏಡ್ಸ್‌ ಪೀಡಿತರಿದ್ದಾರೆ. ಈ ಪೈಕಿ ಎಷ್ಟು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಬಗೆಗಿನ ಅಂಕಿ ಅಂಶಗಳಲ್ಲಿ ವ್ಯಾಪಕಗೊಂದಲವಿದೆ. ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಮಂಡಳಿ (ನ್ಯಾಕೊ) ನೀಡಿದ ಅಂಕಿ-ಅಂಶಗಳು ಮತ್ತು ಕರ್ನಾಟ ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆಯ ಅಂಕಿ-ಸಂಖ್ಯೆಯು ತಾಳೆಯಾಗುತ್ತಿಲ್ಲ. ಜತೆಗೆ, ಈ ಎರಡು ಸಂಸ್ಥೆಯು ನೀಡುತ್ತಿರುವ ಅಂಕಿ ಅಂಶಗಳಿಗೂ ಹಾಗೂ ವಾಸ್ತವವಾಗಿ ಏಡ್ಸ್‌ ಚಿಕಿತ್ಸೆ ಪಡೆಯುತ್ತಿರುವವರ ಅಂಕಿ-ಅಂಶಕ್ಕೂ ವ್ಯತ್ಯಾಸವಿದೆ. ಈ ಎರಡು ಅಂಕಿ ಅಂಶಗಳು ಸಮರ್ಪಕವಾಗಿವೆ ಎಂದು ಭಾವಿಸುವುದಾದರೇ ರಾಜ್ಯದ ಏಡ್ಸ್‌ ಪೀಡಿತರ ಪೈಕಿ ಸುಮಾರು 50 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಬೇಕಾಗುತ್ತದೆ ಎಂಬುದು ವೇದಿಕೆಯ ವಾದ.

ನ್ಯಾಕೊ ಅಂಕಿ-ಅಂಶಗಳ ಪ್ರಕಾರ 2013ಧಿ-14ರ ಅವಧಿಗೆ ಸೋಂಕಿತರ ಸಂಖ್ಯೆ ಸುಮಾರು 2.43 ಲಕ್ಷ. ರಾಜ್ಯ ಏಡ್ಸ್‌ ನಿಯಂತ್ರಣ ಸಂಸ್ಥೆ ಪ್ರಕಾರ 2.66 ಲಕ್ಷ ಎಚ್‌ಐವಿ ಸೋಂಕಿತರಿದ್ದಾರೆ ಎಂದು ಹೇಳಲಾಗಿದೆ. ಆದರೆ, ವಾಸ್ತವವಾಗಿ ಇಷ್ಟು ಎಚ್‌ಐವಿ ಪೀಡಿತರು ಇಲ್ಲವೇ ಇಲ್ಲ ಎಂದು ವೇದಿಕೆ ಹೇಳಿದೆ.

ಒಂದು ವೇಳೆ ಇವರೆಲ್ಲರನ್ನು ಚಿಕಿತ್ಸೆಗಾಗಿ ಒಂದು ವೇದಿಕೆಯಡಿ ತರದಿದ್ದರೆ, ಸೋಂಕಿತರ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ಸರ್ಕಾರ ಹೆಚ್ಚಿನ ಕ್ರಮಕೈಗೊಂಡು ಸೋಂಕಿತರ ಚಿಕಿತ್ಸೆ ಮತ್ತು ಅವರ ಚಿಕಿತ್ಸೆ ದಾಖಲೆ ಫಾಲೋಅಪ್‌ ಮಾಡದಿದ್ದರೆ ಮುಂದಾಗುವ ಅನರ್ಥಕ್ಕೆ ಹೊಣೆ ಹೊರಬೇಕಾದೀತು ಎಂಬ ಎಚ್ಚರಿಕೆ ಗಂಟೆ ಸರ್ಕಾರದ ಕಿವಿಗೆ ಬೀಳಬೇಕಿದೆ ಎಂಬ ಎಚ್ಚರಿಕೆಯನ್ನೂ ಅದು ನೀಡಿದೆ. ವೇದಿಕೆಯ ಈ ವಾದದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರು ವಾಸ್ತವ ಅರಿಯಲು ಸಭೆಯೊಂದನ್ನು ಆಯೋಜಿಸಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಜಿಲ್ಲಾವಾರು ಸೋಂಕಿತರ ವಿವರ
ಕರ್ನಾಟಕ ಏಡ್ಸ್‌ ನಿಯಂತ್ರಣ ಸಂಸ್ಥೆಯ 2015ರ ದಾಖಲೆಗಳ ಪ್ರಕಾರ ಪುರುಷರು 1.26 ಲಕ್ಷ ಮಂದಿ, ಮಹಿಳೆಯರು 1.22 ಲಕ್ಷ ಸೇರಿ ಸುಮಾರು 2,66,237 ಮಂದಿಗೆ ಎಚ್‌ಐವಿ ಸೋಂಕಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿ ಹೆಚ್ಚು ಸೋಂಕಿತರಿದ್ದು ಪ್ರಥಮ ಸ್ಥಾನದಲ್ಲಿದೆ (29,421). ಬೆಳಗಾವಿ (28,953), ಬಾಗಲಕೋಟೆ(24,439), ವಿಜಯಪುರ(16,562), ಮೈಸೂರು (15,557) ಹಾಗೂ ಧಾರವಾಡ (15,390) ಕ್ರಮವಾಗಿ ನಂತರ ಸ್ಥಾನದಲ್ಲಿವೆ. ರಾಮನಗರ(1936) ಮತ್ತು ಕೊಡಗು (1172) ಜಿಲ್ಲೆಗಳು ಕಡೆಯ ಎರಡು ಸ್ಥಾನದಲ್ಲಿವೆ.

ಚಿಕಿತ್ಸಾ ಕೇಂದ್ರಗಳ ಕೊರತೆ
ವರ್ಷದಿಂದ ವರ್ಷಕ್ಕೆ ಸೋಂಕಿತರ ಪ್ರಮಾಣ ಹೆಚ್ಚುತ್ತಲೇ ಇದೆ. ಆದರೆ ಚಿಕಿತ್ಸಾ ಕೇಂದ್ರ ಮತ್ತು ಸಿಬ್ಬಂದಿಗಳ ಕೊರತೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ನ್ಯಾಕೊ ದಾಖಲೆಯಂತೆ ರಾಜ್ಯಾದ್ಯಂತ ಆ್ಯಂಟಿ ರೆಟ್ರೋವೈರಲ್‌ ಚಿಕಿತ್ಸೆ(ಎಆರ್‌ಟಿ) ಕೇಂದ್ರಗಳು ಇರುವುದು 59 ಮಾತ್ರ. ಸುಮಾರು 179 ಕೇಂದ್ರಗಳು ಎಆರ್‌ಟಿ ಕೇಂದ್ರಗಳೊಂದಿಗೆ ಸಂಪರ್ಕ ಹೊಂದಿದ್ದು, ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿವೆ. 27 ಕಮ್ಯುನಿಟಿ ಸರ್ವೀಸ್‌ ಸೆಂಟರ್‌ಗಳು ಕೂಡ ಸೋಂಕಿತರಿಗೆ ಚಿಕಿತ್ಸೆ ಒದಗಿಸುತ್ತಿವೆ. ಸರ್ಕಾರಿ ಆಸ್ಪತ್ರೆಗಳು, ಐಸಿಟಿಸಿ ಕೇಂದ್ರಗಳು ಸೋಂಕಿತರ ಪರ ಕೆಲಸ ಮಾಡುತ್ತಿವೆ. ಆದರೂ ಅದು ಸಮರ್ಪಕವಾಗಿಲ್ಲ ಎಂಬ ದೂರಿದೆ.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಸೋಂಕಿತರಿಗೆ ಕೇವಲ ಮಾತ್ರೆಗಳನ್ನು ಮಾತ್ರ ಸರಬರಾಜು ಮಾಡುತ್ತದೆ. ಉಳಿದ ಇತರ ವೆಚ್ಚಗಳನ್ನು ರಾಜ್ಯ ಸರ್ಕಾರವೇ ನೋಡಿಕೊಳ್ಳಬೇಕೆಂಬ ಸಂದೇಶ ರವಾನಿಸಿ ಕೈತೊಳೆದುಕೊಂಡಿದೆ. ಇದರಿಂದ ಸೋಂಕಿತರ ಸೇವೆ, ಕಾಂಡಮ್‌ ಸರಬರಾಜು, ಗುಪ್ತರೋಗ ಚಿಕಿತ್ಸೆ, ಕ್ಷಯ(ಟಿ.ಬಿ), ಸೋಂಕಿತರು ತೆಗೆದುಕೊಳ್ಳವ ಮಾತ್ರೆಗಳಿಂದ ಆಗುವ ಅಡ್ಡಪರಿಣಾಮದ ಚಿಕಿತ್ಸೆ, ಕಮ್ಯುನಿಟಿಕೇರ್‌ ಸೆಂಟರ್‌ ಇತ್ಯಾದಿ ಎಲ್ಲದಕ್ಕೂ ರಾಜ್ಯ ಸರ್ಕಾರವೇ ಹಣ ಭರಿಸಬೇಕಾಗುತ್ತದೆ. ಅದಕ್ಕಾಗಿ ರಾಜ್ಯ ಆರೋಗ್ಯ ಮಂತ್ರಿಗಳನ್ನು ಸಂಪರ್ಕಿಸಿದ್ದು, ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಹಣ ಮೀಸಲಿಡುವ ಆಶ್ವಾಸನೆ ನೀಡಿದ್ದಾರೆ
- ಮಲ್ಲಪ್ಪ, ರಾಜ್ಯ ಸಂಚಾಲಕ, ಕರ್ನಾಟಕ ಲೈಂಗಿಕ ಅಲ್ಪಸಂಖ್ಯಾತರ ವೇದಿಕೆ

ಸಂಪತ್‌ ತರೀಕೆರೆ

Trending videos

Back to Top