CONNECT WITH US  

ರೇಷ್ಮೆ ಸೀರೆಗಾಗಿ ಮುಗಿಬಿದ್ದ ಮಹಿಳೆಯರು

ಬೆಂಗಳೂರು: ಕರ್ನಾಟಕ ರೇಷ್ಮೆ ಉದ್ದಿಮೆಗಳ ನಿಗಮ(ಕೆಎಸ್‌ಐಸಿ)ವು ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ನೀಡಬೇಕಾದ ಮೈಸೂರು ಸಿಲ್ಕ್ ಸೀರೆಗಳನ್ನು ಗೌರಿ ಹಬ್ಬಕ್ಕೆ ನೀಡಿದ್ದು, ನಗರದಲ್ಲಿ ಮಂಗಳವಾರ ಸೀರೆ ಪಡೆಯಲು ನೂಕು ನುಗ್ಗಲು ಉಂಟಾಯಿತು.

ವರಮಹಾಲಕ್ಷ್ಮಿ ಹಬ್ಬಕ್ಕೆ ರಿಯಾಯಿತಿ ದರದಲ್ಲಿ ಮೈಸೂರು ಸಿಲ್ಕ್ ಸೀರೆಗಳನ್ನು ನೀಡುವುದಾಗಿ ರೇಷ್ಮೆ ಸಚಿವ ಸಾ.ರಾ.ಮಹೇಶ ಘೋಷಣೆ ಮಾಡಿದ್ದರು. ಆದರೆ ಚುನಾವಣಾ ನೀತಿ ಸಂಹಿತಿಯಿಂದಾಗಿ ರಿಯಾಯಿತಿ ದರದಲ್ಲಿ ಸೀರೆಗಳನ್ನು ಮಾರಾಟ ಮಾಡಿರಲ್ಲಿಲ್ಲ. ಹೀಗಾಗಿ ಗೌರಿ ಹಬ್ಬಕ್ಕೆ ಮಹಿಳೆಯರಿಗೆ ಸೀರೆ ಮಾರಾಟ ಮಾಡುವುದಾಗಿ ತಿಳಿಸಲಾಗಿತ್ತು.

ನಗರದ ಕೆಜಿ ರಸ್ತೆಯಲ್ಲಿರುವ ಎಫ್ಕೆಸಿಸಿಐ ಸಭಾಂಗಣದಲ್ಲಿ 14,470 ರಿಂದ 15,750 ರೂ.ಗಳ ಬೆಲೆ ಸೀರೆಗಳನ್ನು ಕೇವಲ 4,500 ರೂ.ಗಳಿಗೆ ಮಾರಾಟ ಮಾಡಲಾಯಿತು. 4,500 ಹಾಗೂ ಶೇ.5ರಷ್ಟು ಜಿಎಸ್‌ಟಿ ಸೇರಿ ಒಟ್ಟು 4,725 ರೂ.ಗಳಿಗೆ ಸೀರೆ ಮಾರಾಟ ಮಾಡುವುದಾಗಿ ತಿಳಿಸಲಾಗಿತ್ತು. ಈ ಮಾಹಿತಿ ತಿಳಿದ ಮಹಿಳೆಯರು ಹಬ್ಬದ ತಯಾರಿ ಕೈಬಿಟ್ಟು ಬೆಳಗ್ಗೆ 9ಕ್ಕೆ ಎಫ್ಕೆಸಿಸಿಐ ಬಳಿ ಸಾಲುಗಟ್ಟಿ ನಿಂತಿದ್ದರು.

ಆಧಾರ್‌ ಕಾರ್ಡ್‌ ಹಾಗೂ ಜೆರಾಕ್ಸ್‌ ಪ್ರತಿ ಹೊಂದಿದ ಮಹಿಳೆಯರಿಗೆ ಲಕ್ಕಿ ಡ್ರಾ ಮೂಲಕ ಸೀರೆ ನೀಡಲಾಗುವುದು ಎಂದು ಕೆಎಸ್‌ಐಸಿ ಮೊದಲಿಗೆ ತಿಳಿಸಿತ್ತು. ಇದಕ್ಕೆ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದರಿಂದ ಲಕ್ಕಿ ಡಿಪ್‌ ಯೋಜನೆ ಕೈಬಿಟ್ಟು ಕೆಎಸ್‌ಐಸಿ ಸಿಬ್ಬಂದಿ ಬೆಳಗ್ಗೆ 11ಕ್ಕೆ ಎಲ್ಲರಿಗೂ ಟೋಕನ್‌ ವಿತರಣೆ ಮಾಡಿದರು. ಒಟ್ಟು 1200 ಮಂದಿಗೆ ಟೊಕನ್‌ ನೀಡಲಾಯಿತು. 1,500 ಸೀರೆಗಳನ್ನು ಮಾರಾಟಕ್ಕೆ ಇಡಲಾಗಿತ್ತು.

ಸಂಜೆ 4ಕ್ಕೆ ರಿಯಾಯತಿ ದರದ ಸೀರೆ ಮಾರಾಟಕ್ಕೆ ಚಾಲನೆ ನೀಡಲಾಯಿತು. ಸುಮಾರು 30-40 ಮಹಿಳೆಯರನ್ನು ಸೀರೆ ಖರೀದಿಗೆ ಸಭಾಂಗಣದೊಳಗೆ ಬಿಡಲಾಯಿತು. ಆದರೆ ಸೀರೆ ಖರೀದಿಗೆ ಒಳ ಹೋದ ಮಹಿಳೆಯರು ಸೀರೆ ಬಣ್ಣ, ಜರಿ ಆಯ್ಕೆಯಲ್ಲಿಯೇ ಕಾಲ ಕಳೆದರು. ಇದರಿಂದ ಹೊರಗಿದ್ದ ಮಹಿಳೆಯರು ಕುಪಿತಗೊಂಡು ಒಮ್ಮೆಲೆ ಹೆಚ್ಚಿನ ಸಂಖ್ಯೆಯಲ್ಲಿ ಸಭಾಂಗಣದೊಳಗೆ ಬಂದಿದ್ದರಿಂದ ನೂಕು ನುಗ್ಗಲು ಉಂಟಾಯಿತು. 

 ಈ ಸಂದರ್ಭದಲ್ಲಿ ಸೀರೆ ಬಣ್ಣ ಮತ್ತು ಜರಿಗಾಗಿಯೇ ಹಲವು ಮಹಿಳೆಯರ ಮಧ್ಯೆ ವಾಗ್ವಾದ ನಡೆಯಿತು. ಮಧ್ಯ ಪ್ರವೇಶಿಸಿದ ಪೊಲೀಸರು ಕೆಲಕಾಲ ವ್ಯಾಪಾರ ನಿಲ್ಲಿಸುವಂತೆ ಹೇಳಿ ಪರಿಸ್ಥಿತಿ ಹತೋಟಿಗೆ ತಂದರು.

ಬಡ ಮಹಿಳೆಯರಿಗಿಲ್ಲ ಸೀರೆ: ಮಧ್ಯಮ ವರ್ಗದ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ದೊರೆಯಲಿ ಎಂಬ ಉದ್ದೇಶಕ್ಕಾಗಿ ಕೆಎಸ್‌ಐಸಿ ರಿಯಾಯಿತಿ ದರದಲ್ಲಿ ಸೀರೆ ಮಾರಾಟ ಮಾಡುತ್ತಿದೆ. ಆದರೆ ರಿಯಾಯಿತಿ ಮಾರಾಟದ ಬಹುತೇಕ ಸೀರೆಗಳು ಶ್ರೀಮಂತ ಮಹಿಳೆಯರ ಕೈಸೇರಿವೆ ಎಂಬ ಆರೋಪವೂ ಕೇಳಿಬಂದಿತು.

ಆಧಾರ್‌ ಕಾರ್ಡ್‌ ಬದಲಿಗೆ ಬಿಪಿಎಲ್‌ ಕಾರ್ಡ್‌ ಕಡ್ಡಾಯಗೊಳಿಸಿದರೆ ಮಧ್ಯಮ ವರ್ಗದ ಬಹುತೇಕ ಮಹಿಳೆಯರಿಗೆ ಮೈಸೂರು ಸಿಲ್ಕ್ ಸೀರೆ ದೊರೆಯುತಿತ್ತು. ಸೀರೆ ಆಯ್ಕೆಗೆ ಅವಕಾಶ ನೀಡಬಾರದಿತ್ತು. ಇದರಿಂದ ಇಷ್ಟೊಂದು ತಳ್ಳಾಟ ನೂಕಾಟ ಇರುತ್ತಿರಲಿಲ್ಲ. ಎಲ್ಲರಿಗೂ ಸೀರೆ ದೊರೆಯುತ್ತಿತ್ತು ಎಂದು ಪದ್ಮನಾಭನಗರದ ನಿವಾಸಿ ಅನುರಂಜನ ತಿಳಿಸಿದರು.

ಸೀರೆ ಗೊಂದಲ: ಒಬ್ಬರಿಗೆ ಒಂದು ಸೀರೆ, ಒಂದು ಟೋಕನ್‌ಗೆ ಒಂದೇ ಸೀರೆ ನೀಡಲಾಗುವುದು ಎಂದು ಕೆಎಸ್‌ಐಸಿ ಸಿಬ್ಬಂದಿ ಪದೇ ಪದೇ ಹೇಳುತ್ತಿದ್ದರೂ ಮಹಿಳೆಯರು ಐದಾರು ಸೀರೆಗಳನ್ನು ಆಯ್ಕೆ ಮಾಡಿಕೊಂಡು ಬಿಲ್ಲಿಂಗ್‌ಗೆ ತೆಗೆದುಕೊಂಡು ಹೋದಾಗ ಒಂದು ಸೀರೆ ಆಯ್ಕೆ ಮಾಡಿಕೊಳ್ಳಬೇಕೆಂದು ಸಿಬ್ಬಂದಿ ತಿಳಿಸುತ್ತಿದ್ದರು. ಆಗ ಯಾವ ಸೀರೆ ಖರೀದಿಸಬೇಕೆಂದು ಗೊಂದಲಕ್ಕೊಳದ ಮಹಿಳೆಯರು ಸೀರೆ ಆಯ್ಕೆಗೆ ಹೆಚ್ಚು ಸಮಯ ತೆಗೆದುಕೊಂಡರು. ಒಳಗಿದ್ದ ಮಹಿಳೆಯರು ಹೊರ ಹೋಗದಿದ್ದರಿಂದ ಹೊರಗಿನ ಮಹಿಳೆಯರು ಒಳಗೆ ಬರಲಾಗದೆ ಕೆಎಸ್‌ಐಸಿ ಸಿಬ್ಬಂದಿಗೆ ಶಾಪ ಹಾಕುತ್ತಿದ್ದರು.

ಪುರುಷರು ಬಂದರೆ ಸೀರೆಯಿಲ್ಲ: ಮಂಗಳವಾರ ಸೀರೆ ಪಡೆದುಕೊಳ್ಳದ ಮಹಿಳೆಯರಿಗೆ ಬುಧವಾರ ನೀಡಲಾಗುವುದು. ಎಫ್ಕೆಸಿಸಿಐ ಸಭಾಂಗಣದಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಸೀರೆ ವಿತರಿಸಲಾಗುವುದು. ಆಧಾರ್‌ ಕಾರ್ಡ್‌ ಹಾಗೂ ಅದರ ನಕಲು ಪ್ರತಿ ಮತ್ತು ಕೆಎಸ್‌ಐಸಿ ಟೋಕನ್‌ ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಮಹಿಳೆಯರಿಗೆ ಮಾತ್ರವೇ ಸೀರೆ ನೀಡಲಾಗುವುದು. ಪುರುಷರು ಬಂದರೆ ಸೀರೆ ಇಲ್ಲ ಎಂದು ಕೆಎಸ್‌ಐಸಿ ಸಿಬ್ಬಂದಿ ತಿಳಿಸಿದ್ದಾರೆ.

ಪರಿಶುದ್ಧವಾದ ರೇಷ್ಮೆ ಹಾಗೂ ಗುಣಮಟ್ಟದ ಕಾರಣಕ್ಕಾಗಿ ಮೈಸೂರು ಸಿಲ್ಕ್ ಸೀರೆ ನೆಚ್ಚಿನ ಸೀರೆಯಾಗಿದೆ. ಎಲ್ಲ ಸಭೆ ಸಮಾರಂಭಗಳಿಗೂ ಈ ಸೀರೆ ಸೂಕ್ತವಾಗಿರಲಿದೆ. ನನ್ನ ಬಳಿ ಕೆಎಸ್‌ಐಸಿಯ ಎಲ್ಲ ಬಗೆಯ ಸೀರೆಗಳು ಇವೆ. ರಿಯಾಯಿತಿ ದರದ ಕಾರಣಕ್ಕಾಗಿ ಸೀರೆ ಖರೀದಿಸುತ್ತಿರುವೆ.
-ಆಶಾ, ರಾಜಾರಾಜೇಶ್ವರಿನಗರದ ನಿವಾಸಿ.


Trending videos

Back to Top