CONNECT WITH US  

ವಿಷ್ಣು ಸ್ಮಾರಕ ವಿವಾದ ಇತ್ಯರ್ಥ

ಬೆಂಗಳೂರು: ಡಾ. ವಿಷ್ಣುವರ್ಧನ್‌ ಅವರ ಸ್ಮಾರಕ ನಿರ್ಮಾಣ ವಿವಾದ ಕೊನೆಗೂ ಬಗೆಹರಿದ್ದು, ಅಭಿಮಾನ್‌ ಸ್ಟುಡಿಯೋ ಆವರಣದಲ್ಲೇ ಸ್ಮಾರಕ ನಿರ್ಮಾಣಕ್ಕೆ ಅಗತ್ಯ ಜಾಗ ನೀಡಲು ನಟ ಬಾಲಕೃಷ್ಣ ಅವರ ಕುಟುಂಬ ಸರ್ಕಾರಕ್ಕೆ ಒಪ್ಪಿಗೆ ಪತ್ರ ನೀಡಿದೆ.

ಉತ್ತರಹಳ್ಳಿ ಬಳಿಯ ಅಭಿಮಾನ್‌ ಸ್ಟುಡಿಯೋದಲ್ಲಿ ಡಾ. ವಿಷ್ಣುವರ್ಧನ್‌ ಅವರ ಸ್ಮಾರಕಕ್ಕಾಗಿ 2 ಎಕರೆ ಜಾಗ ನೀಡುವಂತೆ ಬಾಲಕೃಷ್ಣ ಅವರ ಕುಟುಂಬದ ಮನವೊಲಿಸಲು ಜಿಲ್ಲಾಡಳಿತ ಯಶಸ್ವಿಯಾಗಿದೆ. ಬಾಲಕೃಷ್ಣ ಅವರ ಕುಟುಂಬ ನೀಡುತ್ತಿರುವ ಜಾಗದಲ್ಲಿ ಸ್ಮಾರಕ ನಿರ್ಮಿಸುವ ಬಗ್ಗೆ ವಿಷ್ಣುವರ್ಧನ್‌ ಅವರ ಪತ್ನಿ ಭಾರತಿ ವಿಷ್ಣುವರ್ಧನ್‌ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಕಳೆದ ಆರು ವರ್ಷಗಳಿಂದ ವಿವಿಧ ಕಾರಣಗಳಿಗೆ ನೆನೆಗುದಿಗೆ ಬಿದ್ದಿದ್ದ ಸ್ಮಾರಕ ನಿರ್ಮಾಣ ಕಾರ್ಯಕ್ಕೆ ಮತ್ತೆ ಜೀವ ಬಂದಂತಾಗಿದೆ.

ಸ್ಮಾರಕ ನಿರ್ಮಾಣಕ್ಕೆ ಹೊಸ ಜಾಗ ನೀಡುವ ಬಗ್ಗೆ ಜಿಲ್ಲಾಡಳಿತವು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿದ್ದು, ಸರ್ಕಾರ ಸಮ್ಮತಿಸಿದ ಕೂಡಲೇ ಸ್ಮಾರಕ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಡಾ. ವಿಷ್ಣುವರ್ಧನ್‌ ಅವರ ಸಮಾಧಿ ಇರುವ ಅಭಿಮಾನ್‌ ಸ್ಟುಡಿಯೋ ಆಸ್ತಿಗೆ ಸಂಬಂಧಿಸಿದಂತೆ ಬಾಲಕೃಷ್ಣ ಅವರ ಮಕ್ಕಳಲ್ಲಿ ವ್ಯಾಜ್ಯ ಉಂಟಾಗಿ ಸ್ಮಾರಕ ನಿರ್ಮಾಣ ನೆನೆಗುದಿಗೆಗೆ ಬಿದ್ದಿತ್ತು. ಬಳಿಕ ರಾಜ್ಯ ಸರ್ಕಾರವು 2014ರಲ್ಲಿ ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೆ ನಂ. 22ರಲ್ಲಿ ಸ್ಮಾರಕಕ್ಕಾಗಿ 2 ಎಕರೆ ಜಾಗ ನೀಡಿತ್ತು. ಆದರೆ, ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದ ಈ ಜಾಗ ತುರಹಳ್ಳಿ ಅರಣ್ಯ ಪ್ರದೇಶ ಎಂದು ಪರಿಸರವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.

ಈ ಮಧ್ಯೆ ಸ್ಮಾರಕ ನಿರ್ಮಾಣಕ್ಕೆ ಸದರಿ ಜಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 2014ರ ಡಿಸೆಂಬರ್‌ 30ರಂದು ಶಂಕುಸ್ಥಾಪನೆ ನಡೆಸಿದ್ದರಾದರೂ ಮಾರನೇ ದಿನ ಅಂದರೆ ಡಿಸೆಂಬರ್‌ 31ರಂದು ಹೈಕೋರ್ಟ್‌ ಈ ಜಾಗದಲ್ಲಿ ಸ್ಮಾರಕ ನಿರ್ಮಾಣ ಮಾಡದಂತೆ ಆದೇಶ ಹೊರಡಿಸಿತ್ತು. ಇದರಿಂದ ಮತ್ತೆ ಈ ಕೆಲಸ ನೆನೆಗುದಿಗೆ ಬಿದ್ದಿತ್ತು. ಇದೀಗ ಅದೇ ಮೈಲಸಂದ್ರ ಗ್ರಾಮದ ಸರ್ವೆ ನಂ. 68ರ 2 ಎಕರೆ ಜಾಗವನ್ನು ಸರ್ಕಾರಕ್ಕೆ ನೀಡಲು ಬಾಲಕೃಷ್ಣ ಅವರ ಮಕ್ಕಳು ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ ಸ್ಮಾರಕ ನಿರ್ಮಾಣಕ್ಕಿದ್ದ ವಿಘ್ನ ನಿವಾರಣೆಯಾಗಿದೆ.

ಜಿಲ್ಲಾಡಳಿತ ಯಶಸ್ವಿ:
ಅಭಿಮಾನ್‌ ಸ್ಟುಡಿಯೋದ 10 ಎಕರೆ ಜಾಗದಲ್ಲಿ ಒಂದು ಕಡೆ ನಟ ವಿಷ್ಣುವರ್ಧನ್‌ ಸಮಾಧಿಯಿದ್ದು, ಇಲ್ಲಿಯೇ ಸ್ಮಾರಕ ನಿರ್ಮಿಸಲು ಜಿಲ್ಲಾಡಳಿತ ಸೂಚನೆ ನೀಡಿತ್ತು. ಈ ಬಗ್ಗೆ ನಟ ಬಾಲಕೃಷ್ಣ ಅವರ ಕುಟುಂಬ ಹಾಗೂ ಭಾರತಿ ವಿಷ್ಣುವರ್ಧನ್‌ ಅವರೊಂದಿಗೆ ಜಿಲ್ಲಾಧಿಕಾರಿಗಳು ಚರ್ಚಿಸಿ ಸಮ್ಮತಿ ಸೂಚಿಸಿದ್ದಾರೆ. ಹೀಗಾಗಿ, ಕಳೆದ ಆರು ವರ್ಷಗಳ ಗೊಂದಲ ಬಗೆಹರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

ನಿಯಮ ಉಲ್ಲಂಘನೆಯ ದಾಳ?:
ಈ ಹಿಂದೆ ಸರ್ಕಾರವು 1970ರಲ್ಲಿ ನಟ ಬಾಲಕೃಷ್ಣ ಅವರಿಗೆ ಸ್ಟುಡಿಯೋ ನಿರ್ಮಾಣಕ್ಕಾಗಿ ಸರ್ವೆ ನಂ.26 ರಲ್ಲಿ 20 ಎಕರೆ ಜಾಗ ನೀಡಿತ್ತು. ಬಳಿಕ ಜಾಗ ಅಭಿವೃದ್ಧಿಪಡಿಸುವ ಸಲುವಾಗಿ 10 ಎಕರೆಯನ್ನು ಅವರು ಮಾರಾಟ ಮಾಡಿದ್ದರು. ಈ ಹಣದಲ್ಲಿ ಅಭಿವೃದ್ಧಿಪಡಿಸುವುದಾಗಿ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿತ್ತಾದರೂ ಹಲವು ವರ್ಷ ಕಳೆದರೂ ಜಾಗ ಅಭಿವೃದ್ಧಿಪಡಿಸಿಲ್ಲ. ಹೀಗಾಗಿ ಒಪ್ಪಂದದ ನಿಯಮ ಉಲ್ಲಂ ಸಿದ್ದ ಕಾರಣಕ್ಕೆ ಭೂಮಿ ವಶಪಡಿಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿತ್ತು.

ಬಳಿಕ ಬಾಲಕೃಷ್ಣ ಅವರ ಕುಟುಂಬ ಸದಸ್ಯರೊಂದಿಗೆ ನಡೆದ ಮಾತುಕತೆಯಲ್ಲಿ ಜಾಗ ಅಭಿವೃದ್ಧಿಪಡಿಸುವುದರ ಜತೆಗೆ 2 ಎಕರೆ ಜಾಗವನ್ನು ಸ್ಮಾರಕ ನಿರ್ಮಾಣಕ್ಕೆ ನೀಡಿದರೆ ಕಾಲಾವಕಾಶ ನೀಡುವುದಾಗಿ ಜಿಲ್ಲಾಡಳಿತ ಹೇಳಿದೆ. ಇದಕ್ಕೆ ಒಪ್ಪಿದ ಬಾಲಕೃಷ್ಣ ಅವರ ಕುಟುಂಬ ಜಾಗ ನೀಡಲು ಒಪ್ಪಿದೆ ಎಂದು ತಿಳಿದುಬಂದಿದೆ.

ನಟ ಬಾಲಕೃಷ್ಣ ಅವರ ಕುಟುಂಬದ ಸದಸ್ಯರು ಹಾಗೂ ನಟಿ ಭಾರತಿ ವಿಷ್ಣುವರ್ಧನ್‌ ಅವರ ಬಳಿ ಜಾಗದ ಬಗ್ಗೆ ಚರ್ಚಿಸಿದ್ದೇವೆ. ಇಬ್ಬರೂ ಸಹಮತ ವ್ಯಕ್ತಪಡಿಸಿದ್ದು, ಸಮಾಧಿ ಇರುವ ಜಾಗದಲ್ಲೇ ಸ್ಮಾರಕ ನಿರ್ಮಿಸುವುದು ಸೂಕ್ತ. ಹೀಗಾಗಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
-ವಿ. ಶಂಕರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ


Trending videos

Back to Top