CONNECT WITH US  

ನಾಡದೋಣಿ ಮೀನುಗಾರರಿಗೆ ನಿರೀಕ್ಷಿತ ಲಾಭ ಸಿಕ್ಕಿಲ್ಲ

ಪ್ರತಿಕೂಲ ಹವಾಮಾನದಿಂದ ಕಡಲಬ್ಬರ 

ಮಹಾನಗರ: ಕರಾವಳಿಯಲ್ಲಿ ನಾಡದೋಣಿ ಮೀನುಗಾರಿಕೆ ಕಾಲಾವಧಿ ಪೂರ್ಣಗೊಳ್ಳುತ್ತ ಬಂದಿದ್ದು, ಇನ್ನೇನು ವಾರದೊಳಗೆ ಯಾಂತ್ರೀಕೃತ ಮೀನುಗಾರಿಕೆಗೆ ಸಿದ್ಧತೆಗಳು ಪ್ರಾರಂಭಗೊಳ್ಳಲಿದೆ. ವಿಷಾದನೀಯ ಸಂಗತಿ ಅಂದರೆ, ಈ ಋತುವಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ನಾಡದೋಣಿ ಮೀನುಗಾರರಿಗೆ ಮೀನುಗಾರಿಕೆ ಮಾಡಲು ಸಾಧ್ಯವಾಗದೆ ನಿರಾಸೆ ಉಂಟಾಗಿದೆ.

ಪ್ರತಿಕೂಲ ಹವಾಮಾನದಿಂದಾಗಿ ಮೀನುಗಾರಿಕೆಗೆ ತೊಡಕಾಗಿದೆ. ಈ ಬಾರಿ ನಾಡದೋಣಿ ಮೀನುಗಾರರಿಗೆ ನಿರೀಕ್ಷಿದಷ್ಟು ಲಾಭ ಸಿಕ್ಕಿಲ್ಲ. ನಾಡದೋಣಿ ಮೀನುಗಾರಿಕೆ ಆರಂಭ ಈ ಬಾರಿ ನಿಗದಿತ ಸಮಯಕ್ಕಿಂತ ತಡವಾಗಿತ್ತು. ಆದಾದ ಬಳಿಕ ಕಡಲಿಗಿಳಿದ ಬಹುತೇಕ ದೋಣಿಗಳು ಮೀನು ಸಿಗದೆ ಹಿಂದೆ ಬಂದಿದ್ದವು. ಕಡಲಬ್ಬರದಿಂದಾಗಿ ಹೆಚ್ಚಿನ ನಾಡದೋಣಿಗಳು ಮೀನುಗಾರಿಕೆಗೆ ತೆರಳದ ಹಾಗೇ ಇವೆ. ತೆರಳಿದ ದೋಣಿಗಳು ಕೈ ಸುಟ್ಟು ಕೊಂಡಿವೆ ಎಂದು ಮೀನುಗಾರರು ಬೇಸರ ವ್ಯಕ್ತಪಡಿಸುತ್ತಾರೆ.

ಮೇ ಅಂತ್ಯದಿಂದಲೇ ಆರಂಭಗೊಂಡ ಭಾರೀ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡು ಮೀನುಗಾರಿಕೆಗೆ ಹೊಡೆತ ಬಿದ್ದಿತ್ತು. ಕೆಲವು ಮೀನುಗಾರರು ಧೈರ್ಯ ಮಾಡಿಕೊಂಡು ಮೀನುಗಾರಿಕೆಗೆ ತೆರಳಿದರೂ ಮೀನು ಸಿಗದೆ ವಾಪಾಸ್ಸಾಗಿದ್ದಾರೆ. ಇನ್ನೂ ಕೆಲವರು ಕಡಲಿಗಿಳಿಯುವ ಸಾಹಸವನ್ನೇ ಮಾಡಿಲ್ಲ. ಮಳೆಗಾಲದ ಎರಡು ತಿಂಗಳಲ್ಲಿ ಮೀನಿನ ಸಂತಾನ ಉತ್ಪತ್ತಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಮೀನುಗಾರಿಕೆಗೆ ನಿಷೇಧ ಹೇರಲಾಗಿದ್ದು, ಈ ನಿಷೇಧ ಅವಧಿ ಜು. 31ಕ್ಕೆ ಅಂತ್ಯಗೊಳ್ಳಲಿದೆ. ಆ.10ರ ಸುಮಾರಿಗೆ ಯಾಂತ್ರೀಕೃತ ಬೋಟ್‌ಗಳಲ್ಲಿ ಮೀನುಗಾರಿಕೆಗೆ ಆರಂಭವಾಗುತ್ತದೆ. ಈ ಅವಧಿಯೊಳಗೆ ನಾಡದೋಣಿ ಮೀನುಗಾರರು ಮೀನುಗಾರಿಕೆ ಮಾಡಬೇಕಾಗುತ್ತದೆ.

ಕಳೆದ ಬಾರಿಯ ಅರ್ಥದಷ್ಟಿಲ್ಲ
ಕಳೆದ ಬಾರಿ ಜುಲೈ ಅಂತ್ಯದ ವೇಳಗೆ ಒಂದು ನಾಡದೋಣಿ ಮೀನುಗಾರರು ಸುಮಾರು 3ರಿಂದ 5 ಲಕ್ಷರೂ.ಗಳವರೆಗೆ ಲಾಭ ಪಡೆದುಕೊಂಡಿದ್ದರು. ಆದರೆ ಈ ಬಾರಿ ಅದೇ ಮೀನುಗಾರರು ಸುಮಾರು 50 ಸಾವಿರ ರೂ.ಗಳಷ್ಟೇ ಲಾಭ ಗಳಿಸಿದ್ದಾರೆ. ಕಳೆದ ಬಾರಿಯ ಲಾಭದ ಅರ್ಧ ಪಾಲು ಈ ಬಾರಿ ಪಡೆದುಕೊಂಡಿಲ್ಲ ಎಂಬುದು ಮೀನುಗಾರರ ಅಳಲು.

ಅವಧಿ ವಿಸ್ತರಣೆಗೆ ಮನವಿ
ಕಳೆದ ಬಾರಿಯೂ ಸಮುದ್ರ ಕೊಂಚ ಪ್ರಕ್ಷುಬ್ದಗೊಂಡಿದ್ದರಿಂದ ಸೆಪ್ಟಂಬರ್‌ ವರೆಗೆ ನಾಡದೋಣಿ ಮೀನುಗಾರಿಕೆಗೆ ಅನುಮತಿ ನೀಡಲಾಗಿತ್ತು. ಈ ಬಾರಿಯೂ ಇನ್ನಷ್ಟು ದಿನ ವಿಸ್ತರಣೆಗೆ ಮನವಿ ಮಾಡಲಾಗುವುದು ಎಂದು ನಾಡ ದೋಣಿ ಮೀನುಗಾರರ ಸಂಘದ ಅಧ್ಯಕ್ಷ ಅವರು ಉದಯವಾಣಿ ಸುದಿನಕ್ಕೆ ತಿಳಿಸಿದ್ದಾರೆ.

ಅಪಾರ ನಷ್ಟ
ಸಮುದ್ರ ಪ್ರಕ್ಷುಬ್ದಗೊಂಡಿರುವುದರಿಂದ ಈ ಬಾರಿ ನಾಡ ದೋಣಿ ಮೀನುಗಾರರಿಗೆ ನಷ್ಟ ಉಂಟಾಗಿದೆ. ಕೆಲವು ದೋಣಿಗಳು ಇನ್ನೂ ಸಮುದ್ರಕ್ಕೆ ಇಳಿದೆ ಇಲ್ಲ. ಇನ್ನೂ ಕೆಲವೇ ದಿನಗಳಲ್ಲಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಲಿದೆ.
- ವಾಸುದೇವ ಬಿ.ಕೆ.,
ಮಂಗಳೂರು ನಾಡದೋಣಿ
ಮೀನುಗಾರರ ಸಂಘದ ಅಧ್ಯಕ್ಷ

‡ ಪ್ರಜ್ಞಾ ಶೆಟ್ಟಿ

Trending videos

Back to Top