CONNECT WITH US  

ಕರಾವಳಿಗೂ ಬರಲಿ ನೀರಾವರಿ ನಿಗಮ ಭಾಗ್ಯ

ಮಂಗಳೂರು: ರಾಜ್ಯದ ವಿವಿಧ ಭಾಗಗಳಿಗೆ ನೀರಾವರಿ ಸೌಲಭ್ಯ ಒದಗಿಸಲು ವಿವಿಧ ನಿಗಮಗಳನ್ನು ಸ್ಥಾಪಿಸಿದೆ. ಆದರೆ ಕರಾವಳಿ ಭಾಗ ಮಾತ್ರ ಈವರೆಗೆ ಹೇಳಿಕೊಳ್ಳುವಂತಹ ಯಾವುದೇ ಬೃಹತ್‌ ಅಥವಾ ಮಧ್ಯಮ ನೀರಾವರಿ ಯೋಜನೆಗಳ ಭಾಗ್ಯ ಪಡೆದಿಲ್ಲ. ಅದಕ್ಕೆ ಪೂರಕ ವ್ಯವಸ್ಥೆಯೊಂದು ರೂಪಿತವಾಗಿಲ್ಲ. ಕರಾವಳಿ ಪಾಲಿಗೆ ಯೋಜನೆ ನೀಡುವ ಬದಲು ಇಲ್ಲಿನ ಜೀವನದಿ ನೇತ್ರಾವತಿ ನೀರನ್ನೆ ಮೇಲಕ್ಕೆ ಹರಿಸಲು ಎತ್ತಿನಹೊಳೆ ಯೋಜನೆ ರೂಪಿಸುವ ಮೂಲಕ ಇನ್ನಷ್ಟು ಅಘಾತ ನೀಡಿದೆ.
 
ರಾಜ್ಯದಲ್ಲಿ ಕರ್ನಾಟಕ ನೀರಾವರಿ ನಿಗಮ, ಕಾವೇರಿ ನೀರಾವರಿ ನಿಗಮ, ಕೃಷ್ಣ ಭಾಗ್ಯ ಜಲ ನಿಗಮ, ಕೃಷ್ಣ ಮೇಲ್ದಂಡೆ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಕಾವೇರಿ ಜಲಾನಯನ ಯೋಜನೆ ಅಚ್ಚುಕಟ್ಟು ಪ್ರಾಧಿಕಾರ ಹೀಗೆ ಹಲವು ನಿಗಮಗಳು, ಪ್ರಾಧಿಕಾರಗಳಿವೆ. ಕೃಷ್ಣಾ ಮೇಲ್ಡಂಡೆ ಯೋಜನೆಯಲ್ಲಿ 15,36,000 ಎಕ್ರೆ ಪ್ರದೇಶಕ್ಕೆ ನೀರು ಹರಿಯುತ್ತದೆ. ಭದ್ರ ಮೇಲ್ದಂಡೆ ಯೋಜನೆ ಚಿಕ್ಕಮಗಳೂರು ಹಾಗೂ ಚಿತ್ರದುರ್ಗದ 2.65 ಲಕ್ಷ ಎಕ್ರೆ ಭೂಮಿಗೆ ನೀರುಣಿಸಲಿದೆ. ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಡಿಪಿಆರ್‌ ಸಿದ್ಧವಾಗಿದೆ. ಕಲಬುರಗಿ, ಕಾವೇರಿ ನೀರಾವರಿ ನಿಗಮ ತನ್ನ ಪೂರ್ಣ ಗಮನವನ್ನು ಬಯಲು ಸೀಮೆಗೆ ಕೇಂದ್ರೀಕರಿಸಿದೆ. ಎತ್ತಿನಹೊಳೆ ಯೋಜನೆಗೆ 12,000 ಕೋ. ರೂ. ಗೂ ಅಧಿಕ ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರ ತ್ವರಿತ ಅನುಷ್ಠಾನಕ್ಕೆ ಎತ್ತಿನಹೊಳೆ ಪ್ರಾಧಿಕಾರ ರಚಿಸಿದೆ. 

ಕರಾವಳಿಗೆ ನೀರಾವರಿ ನಿಗಮದ ಆವಶ್ಯಕತೆ
ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ 4,000 ಟಿಎಂಸಿಯಷ್ಟು ಮಳೆ ನೀರು ಸುರಿಯುತ್ತಿದೆ. ಅಂಕಿ-ಅಂಶದ ಪ್ರಕಾರ ದ.ಕ. ಜಿಲ್ಲೆಯ 5 ನದಿಗಳಿಂದ 657.21 ಟಿಎಂಸಿ, ಉಡುಪಿ ಜಿಲ್ಲೆಯ 13 ನದಿಗಳಿಂದ 582.48 ಟಿಎಂಸಿ, ಉತ್ತರ ಕನ್ನಡ ಜಿಲ್ಲೆಗಳ ನದಿಗಳಿಂದ 240.31 ಟಿಎಂಸಿ ಸೇರಿದಂತೆ 1,480 ಟಿಎಂಸಿ ನೀರು ಹರಿಯುತ್ತಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರಸ್ತುತ ಪ್ರಧಾನ ಜಲಮೂಲ ಕೊಳವೆ ಬಾವಿಧಿಗಳು. ರಾಜ್ಯದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳ ಭೌಗೋಳಿಕ ಸ್ಥಿತಿ ಬಹಳಷ್ಟು ವ್ಯತ್ಯಾಸವಿದೆ. ಇಲ್ಲಿ ಒಂದೋ ಲೇಟ್ರೈಟ್‌ ಗುಣದ (ಕೆಂಪುಕಲ್ಲು) ಮಣ್ಣು ಅಥವಾ ಮರಳು ಮಣ್ಣು (ಸ್ಯಾಂಡ್‌ ಸಾಯಿಲ್‌) ಇದೆೆ. ಭೂಪ್ರದೇಶದ ಹೆಚ್ಚಿನ ಭಾಗ ಇಳಿಜಾರು ಪ್ರದೇಶವಾಗಿದ್ದು, ವಾರ್ಷಿಕ 4,000 ಮಿ.ಮೀ. ಮಳೆಯಾದರೂ ನೀರು ಇಂಗುವ ಪ್ರಮಾಣ ಕಡಿಮೆ ಮತ್ತು ವೇಗವಾಗಿ ಹರಿದು ಹೆಚ್ಚಿನ ಪ್ರಮಾಣದಲ್ಲಿ ಸಮುದ್ರ ಸೇರುತ್ತದೆ. ಜನವರಿಯ ಬಳಿಕ ಅಂತರ್ಜಲ ಮಟ್ಟ ಕ್ಷೀಣಿಸುತ್ತಾ ಹೋಗುತ್ತದೆ. ಕರಾವಳಿ ತೀರದ ಪ್ರದೇಶಗಳಲ್ಲಿ ಬೇಸಗೆಯಲ್ಲಿ ಜಲಮಟ್ಟ ಕ್ಷೀಣಿಸುವುದರಿಂದ ಉಪ್ಪು ನೀರಿನ ಒರತೆ ಉಂಟಾಗುತ್ತದೆ. ಕೆಲವು ಕೊಳವೆ ಬಾವಿಗಳು ಫೆಬ್ರವರಿ ತಿಂಗಳಿನಲ್ಲಿ ಸಂಪೂರ್ಣ ಬತ್ತಿ ಹೋಗುತ್ತಿದ್ದು, ಕುಡಿಯುವ ನೀರಿನ ತತ್ವಾರ ಎದುರಿಸುತ್ತದೆ ಮತ್ತು ಪ್ರತಿ ವರ್ಷ ಕೋಟ್ಯಂತರ ರೂಪಾಯಿಯನ್ನು ತಾತ್ಕಾಲಿಕ ವ್ಯವಸ್ಥೆಗಾಗಿ ವ್ಯಯಿಸಬೇಕಾಗುತ್ತದೆ. ಇತ್ತೀಚಿನ ವರ್ಷಗಳ ಮಳೆ ಪ್ರಮಾಣದ ಅಂಕಿ-ಅಂಶ ಅವಲೋಕಿಸಿದರೆ ನಿರಂತರ ಕುಸಿತ ಕಂಡುಬಂದಿದೆ. ಕುಡಿಯುವ ನೀರಿಗೆ, ಕೃಷಿಗೆ ಬೇಸಗೆಯಲ್ಲಿ ನೀರಿನ ಕೊರತೆ ತೀವ್ರತರದಲ್ಲಿ ಕಾಡುತ್ತಿದೆ. 

ಕರಾವಳಿಯಲ್ಲಿ ಬೀಳುವ ಮಳೆ ನೀರು ಸಂಗ್ರಹಿಸಿ ನಿರ್ವಹಿಸುವ ನಿಟ್ಟಿನಲ್ಲಿ ಒಂದು ಕೇಂದ್ರೀಕೃತ ವ್ಯವಸ್ಥೆ ಈ ಭಾಗದಲ್ಲಿ ಅವಶ್ಯವಿದೆ. ನೀರಾವರಿ ನಿಗಮದ ಮೂಲಕ ಇದನ್ನು ಮಾಡಬಹುದು. ಉತ್ತರ ಕರ್ನಾಟಕ, ಬಯಲು ಸೀಮೆಯ ರೀತಿಯಲ್ಲಿ  ಇಲ್ಲಿ ಬೃಹತ್‌ ನೀರಾವರಿ ಯೋಜನೆಗಳು ಬೇಕೆಂದಿಲ್ಲ. ಮಧ್ಯಮ ಹಾಗೂ ಸಣ್ಣ ಯೋಜನೆಗಳಿಂದಲೇ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ಇದಕ್ಕೆ ಉಳಿದ ಯೋಜನೆಗಳಂತೆ ಸಾವಿರಾರು ಕೋಟಿ ರೂ. ಅಗತ್ಯವಿರಲಾರದು. ಬಹುಗ್ರಾಮ ಕುಡಿಯುವ ನೀರು ಯೋಜನೆ ಕೂಡ ಇದರ ವ್ಯಾಪ್ತಿಗೆ ತರಬಹುದು.
 
ರಾಜ್ಯದಲ್ಲಿ ನೀರಾವರಿ ಯೋಜನೆಗಳು ಬರುವುದು ಎಲ್ಲರಿಗೂ ಸಂತಸದ ವಿಚಾರ. ಇದಕ್ಕೆ ಯಾರೂ ತಕರಾರು ಮಾಡುವುದಿಲ್ಲ . ಆದರೆ ಈ ಭಾಗ್ಯ ಕರಾವಳಿಗೂ ಬರಲಿ ಎಂಬುದಷ್ಟೆ ಕೋರಿಕೆ. ಕರಾವಳಿ ಭಾಗದ ಜನಪ್ರತಿನಿಧಿಗಳು ಪಕ್ಷಧಿಭೇಧಿದ ಮರೆತು ಸರಕಾರಗಳ ಮೇಲೆ ಒತ್ತಡ ತರುವ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಶಿಸಿದಾಗ ಕರಾವಳಿಗೂ ನೀರಾವರಿ ನಿಗಮದ ಕನಸು ಸಾಕಾರಗೊಂಡಿತು.

ನೀರಾವರಿಗೆ ಸರಕಾರ ವಿನಿಯೋಗಿಸಿದ್ದು 
ರಾಜ್ಯ ಸರಕಾರ ನೀರಾವರಿ ಯೋಜನೆಗಳಿಗೆ 2013-14ನೇ ಸಾಲಿನಲ್ಲಿ 9812 ಕೋ. ರೂ.. 2014-15ನೇ ಸಾಲಿನಲ್ಲಿ 11,349 ಕೋ. ರೂ., 2014-15ನೇ ಸಾಲಿನಲ್ಲಿ 12,955 ಕೋ. ರೂ. ವಿನಿಯೋಗಿಸಲಾಗಿದೆ. 2016-17ನೇ ಸಾಲಿನಲ್ಲಿ 14,477 ಕೋ. ರೂ. ನಿಗದಿಪಡಿಸಲಾಗಿದೆ.

ಪಶ್ಚಿಮವಾಹಿನಿ ಯೋಜನೆ ಸಾಕಾರಗೊಂಡಿಲ್ಲ 
ಪಶ್ಚಿಮವಾಹಿನಿ ಯೋಜನೆೆಗೆ  ಸರಿಸುಮಾರು 16 ವರ್ಷಗಳು. ಇಷ್ಟು ವರ್ಷಗಳಿಂದ ಪದೇ ಪದೇ ಸದ್ದು ಮಾಡಿ ಸುದ್ದಿಯಿಂದ ಮರೆಯಾಗುತ್ತಿರುವ ಯೋಜನೆಗೆ ಈವರೆಗೆ ಅನುಷ್ಠಾನದ ಭಾಗ್ಯ ಬಂದೇ ಇಲ್ಲ. ಈ ಯೋಜನೆ ರೂಪುಗೊಂಡದ್ದು 2001ರಲ್ಲಿ. ಆಗ ಆದರ ವೆಚ್ಚ 100 ಕೋ. ರೂ. ಮೂಲಯೋಜನೆ ಪ್ರಕಾರ ಮೂರು ಜಿಲ್ಲೆಗಳಲ್ಲಿ ಹರಿಯುವ ನದಿಗಳು ಹಾಗೂ ಉಪನದಿಗಳಿಗೆ 1489 ಅಣೆಕಟ್ಟು ನಿರ್ಮಿಸಿ 39,041.67 ಹೆಕ್ಟೇರ್‌ ಪ್ರದೇಶಕ್ಕೆ ನೀರುಣಿಸುವ ಪ್ರಸ್ತಾವನೆ ಹೊಂದಿತ್ತು. ಆದರೆ ಯೋಜನೆ ಮತ್ತೆ ಪರಿಷ್ಕೃತಗೊಂಡು 707 ಅಣೆಕಟ್ಟು ಹಾಗೂ 74 ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ನಿರ್ಧರಿಸಲಾಯಿತು. ಇದರಿಂದ 23,269 ಹೆಕ್ಟೇರ್‌ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಸಿದ್ಧಪಡಿಸಲಾಯಿತು. ಪ್ರಸ್ತುತದ ವೆಚ್ಚ 1000 ಕೋ. ರೂ. ಎಂದು ಅಂದಾಜಿಸಲಾಗಿದೆ. ಆದರೆ ಇನ್ನೂ ಕೇವಲ ಭರವಸೆಗಳ ಮಾತುಗಳನ್ನು ಬಿಟ್ಟರೆ ಅನುಷ್ಠಾನದ ಹಂತಕ್ಕೆ ಬಂದಿಲ್ಲ.

- ಕೇಶವ ಕುಂದರ್‌

Trending videos

Back to Top