CONNECT WITH US  

ಹಿಂದೂ ಧರ್ಮದ ಉಳಿವಿಗೆ ಕಟಿಬದ್ಧರಾಗೋಣ : ಒಡಿಯೂರು ಶ್ರೀ

ಕಬಕ : ಹಿಂದೂ ಧರ್ಮದ ಉಳಿವಿಗೆ ಎಲ್ಲರೂ ಕಟಿಬದ್ಧರಾಗಬೇಕಾದ ಕಾಲಘಟ್ಟದಲ್ಲಿ ನಾವಿದ್ದು, ಪ್ರತಿ ಮನೆಯಲ್ಲೂ ಯುವಕರು ಹಿಂದೂ ಧರ್ಮದ ರಕ್ಷಣೆಗೆ ಪಣ ತೊಡಬೇಕು. ಹಿಂದೂಗಳ ತಾಳ್ಮೆ ಮತ್ತು ಸಹನೆ ಬಲಹೀನತೆ ಅಲ್ಲ. ನಾವೆಲ್ಲರೂ ಕ್ರಿಯಾಶೀಲರಾಗಿ ಹಿಂದೂ ಸಮಾಜ ಮತ್ತು ರಾಷ್ಟ್ರ ರಕ್ಷಣೆಗೆ ಸೈನಿಕರಂತೆ ಕೆಲಸ ಮಾಡಬೇಕು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು ಇಡ್ಕಿದು ಗ್ರಾಮದ ಕೋಲ್ಪೆ ಶ್ರೀ ಶಿರಾಡಿ ಧೂಮಾವತಿ ದೈವಸ್ಥಾನದ ಪ್ರತಿಷ್ಠೆ ಹಾಗೂ ಚತುಃಪವಿತ್ರ ನಾಗಮಂಡಲದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಆಶಿರ್ವಚನ ನೀಡಿದರು.

ಮಾಣಿಲ ಶ್ರೀ ಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿ, ಸಮಯ ಸಾಧಕ ರಾಜಕಾರಣಿಗಳಿಂದ ದೂರವಿರುವ ಮೂಲಕ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕು. ಎಲ್ಲ ಹಿಂದೂ ಸಂಘಟನೆಗಳು ತತ್ವ ಸಿದ್ಧಾಂತದ ಮೂಲಕ ಒಂದಾಗಬೇಕು. ಪರಶುರಾಮ ಸೃಷ್ಟಿಯ ಈ ನೆಲದಲ್ಲಿ  ನಾಗಾರಾಧನೆಯಂತಹ ಆರಾಧನೆಯಿಂದ ಜಗತ್ತು ಉಳಿಯುವುದು ಎಂದರು.

ಧಾರ್ಮಿಕ ಉಪನ್ಯಾಸ ನೀಡಿದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ, ಜನ್ಮ ಭೂಮಿಯ ರಕ್ಷಣೆಯ ಪರಿಪೂರ್ಣ ಚಿಂತನೆಯಲ್ಲಿ ಮುನ್ನಡೆದರೆ ಭಗವಂತನ ಅನುಗ್ರಹವಿದೆ ಎಂದರು.
ದ.ಕ. ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌, ಸಮಿತಿ ಕೋಶಾಧಿಕಾರಿ ಸುಧಾಕರ ಶೆಟ್ಟಿ. ಅಧ್ಯಕ್ಷ ಗೋಪಾಲಕೃಷ್ಣ ಭಟ್‌ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು.

ಕೊಲ್ಪೆ ಶ್ರೀ ಶಿರಾಡಿ ಧೂಮಾವತಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ ಗೌರವ ಅಧ್ಯಕ್ಷ ರಾಜಾರಾಮ ಶೆಟ್ಟಿ ಪ್ರಾಸ್ತಾವನೆಗೈದರು. ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ  ಸುರೇಶ ಕೆ.ಎಸ್‌. ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಫ‌ುಲ್ಲಚಂದ್ರ ಪಿ.ಜಿ. ವಂದಿಸಿದರು. ಈಶ್ವರ ಕುಲಾಲ್‌ ಕಾರ್ಯಕ್ರಮ ನಿರೂಪಿಸಿದರು.

ಧರ್ಮ, ರಾಷ್ಟ್ರ ಪ್ರಜ್ಞೆ
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್‌ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಮಾತನಾಡಿ, ಹೊರಗಿನ ಆಕ್ರಮಣ ಎದುರಿಸಲು ಹಿಂದೂ ಸಮಾಜ ಶಕ್ತಿಶಾಲಿಯಾಗಬೇಕು. ಭೇದಭಾವ ತೊರೆದು ಒಂದಾಗಬೇಕು. ವಿಜ್ಞಾನ ಮತ್ತು ಹಣದ ಹಿಂದೆ ಬಿದ್ದಿರುವ ನಮ್ಮ ಮಕ್ಕಳಲ್ಲಿ ಧರ್ಮ ಮತ್ತು ರಾಷ್ಟ್ರ ಪ್ರಜ್ಞೆ ಮೂಡಿಸುವ ಅಗತ್ಯವಿದೆ ಎಂದರು.

Trending videos

Back to Top