CONNECT WITH US  

ಬಹು ಬೆಳೆ ಪದ್ಧತಿ ಅಳವಡಿಕೆಯಿಂದ ಹೆಚ್ಚು ಲಾಭ

ಕೆ.ಆರ್‌.ಪೇಟೆ: ರೈತರು ಏಕ ಬೆಳೆ ಪದ್ಧತಿ ಬದಲು, ಬಹು ಬೆಳೆ ಪದ್ಧತಿಯನ್ನು ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದಾಗಿದೆ ಎಂದು ತಾಲೂಕು ಪಂಚಾಯಿತಿ ಸದಸ್ಯ ದಿನೇಶ್‌ ಹೇಳಿದರು.

ತಾಲೂಕಿನ ಸಂತೇಬಾಚಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ 2018-19ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮದ ಅಂಗವಾಗಿ ನಡೆದ ಕೃಷಿ ವಸ್ತು ಪ್ರದರ್ಶನ ಮತ್ತು ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರೈತರು ಭೂಮಿಯಲ್ಲಿ ನಿರಂತರವಾಗಿ ಒಂದೇ ಬೆಳೆ ಬೆಳೆಯುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುವ ಜತೆಗೆ ಶ್ರಮವೂ ವ್ಯರ್ಥವಾಗುತ್ತಿದೆ. ಭತ್ತ, ರಾಗಿ ಅಥವಾ ಕಬ್ಬಿನ ಬೆಳೆಗಳನ್ನೇ ನಂಬಿಕೊಂಡು ವ್ಯವಸಾಯ ಮಾಡುವುದು ಸರಿಯಲ್ಲ. 

ಸಾಕಾಣಿಕೆ ಮಾಡಿ: ಒಂದು ಎಕರೆ ಭೂಮಿ ಇದ್ದರೆ ರೇಷ್ಮೆ ಕೃಷಿ, ಪರಂಗಿ ಬೆಳೆ, ತರಕಾರಿ, ಹೂವಿನ ಬೆಳೆ, ಸೊಪ್ಪಿನ ಬೆಳೆ ಬೆಳೆಯುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯವಿದೆ. ಅಲ್ಲದೆ ಹೈನುಗಾರಿಕೆ, ಕುರಿ, ಕೋಳಿ, ಮೇಕೆ ಸಾಕಾಣಿಕೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೋಟ್ಯಂತರ ರೂ. ಗಳಿಸಬಹುದು: ಹೆಚ್ಚು ಭೂಮಿ ಇದೆ ಎಂದರೆ ಶ್ರೀಗಂಧದ ಬೆಳೆ, ರಕ್ತ ಚಂದನ ಬೆಳೆ ಬೆಳೆಯುವುದರಿಂದ ಕನಿಷ್ಟ 20 ವರ್ಷಗಳಲ್ಲಿ ಹತ್ತಾರು ಕೋಟಿ ರೂ. ಆದಾಯ ಗಳಿಸಬಹುದು. ಒಬ್ಬ ಸರ್ಕಾರಿ ನೌಕರನು ತನ್ನ  ಜೀವನ ಪೂರ್ತಿ ಗಳಿಸಿದರೂ 50ರಿಂದ 60ಲಕ್ಷ ರೂ. ಆದಾಯ ಗಳಿಸಲು ಮಾತ್ರ ಸಾಧ್ಯ. ಆದರೆ ಶ್ರೀಗಂಧ ಬೆಳೆ ಹಾಕಿದರೆ 20 ವರ್ಷದದಲ್ಲಿ 20 ಕೋಟಿ ರೂ. ಆದಾಯ ಗಳಿಸಲು ಸಾಧ್ಯವಿದೆ ಎಂದು ಹೇಳಿದರು. 

ಸಾವಯವ ಗೊಬ್ಬರ ಬಳಸಿ: ಮಂಡ್ಯದ ವಿ.ಸಿ.ಫಾರಂನ ಕೃಷಿ ತಜ್ಞ ಡಾ.ದೀಪಕ್‌ ಮಾತನಾಡಿ, ಬಹುತೇಕ ರೈತರು ರಸಾಯನಿಕ ಗೊಬ್ಬರ ಆಶ್ರಯಿಸಿಕೊಂಡಿದ್ದಾರೆ. ಇದರಿಂದ ಕೃಷಿ ಭೂಮಿ ಬಂಜರು ಆಗುತ್ತಿದೆ. ರೈತರು ಸಾವಯವ ಗೊಬ್ಬರ ಬಳಸುವುದನ್ನು ರೂಢಿಸಿಕೊಳ್ಳುವ ಮೂಲಕ ಭೂಮಿಯನ್ನು ರಕ್ಷಿಸಿ ಗುಣಮಟ್ಟದ ಆಹಾರ ಪದಾರ್ಥ, ಬೆಳೆಗಳನ್ನು ಬೆಳೆಯಬಹುದು ಎಂದು ಹೇಳಿದರು. 

ತಾಲೂಕು ಸಹಾಯಕ ಕೃಷಿ ನಿರ್ದೇಶಕ ಟಿ.ಎಸ್‌.ಮಂಜುನಾಥ್‌ ಮಾತನಾಡಿದರು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಎಸ್‌.ರಮೇಶ್‌, ಸದಸ್ಯರಾದ ಜಾಗಿನಕೆರೆ ನಾರಾಯಣಗೌಡ, ಹೆತ್ತಗೋನಹಳ್ಳಿ ಎಚ್‌.ಜೆ.ನಾರಾಯಣಗೌಡ, ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷೆ ಮಣಿಯಮ್ಮ, ಗ್ರಾಪಂ ಉಪಾಧ್ಯಕ್ಷ ದೇವರಾಜು, ರೇಷ್ಮೆ ಇಲಾಖೆಯ ಅಧಿಕಾರಿ ಲೋಕೇಶ್‌, ತೋಟಗಾರಿಕೆ ಅಧಿಕಾರಿ ಜಯರಾಂ, ಜಯಶೀಲ, ಕೃಷಿ ಅಧಿಕಾರಿಗಳಾದ ಶ್ರೀಧರ್‌, ಜಯಶಂಕರ, ಆರಾಧ್ಯ ಇದ್ದರು.

Trending videos

Back to Top