CONNECT WITH US  

ಮದುವೆಯಾದ್ರೂ ಓದುತ್ತಿದ್ದಾಳಂತೆ...!

ನೋವನ್ನು ಮೀರುವ ಬದುಕಿನ ಸೆಲೆ ಯಾವುದು? ಕುತೂಹಲದ ವಿಚಾರ. ನೋವಿಗೆ ಕಾರಣ ಯಾವುದು? ಈ ಜನ್ಮದ, ಪೂರ್ವಜನ್ಮದ ಪಾಪ ಕೃತ್ಯಗಳೇ, ವಿಧಿಯೇ ಅಥವಾ ಕೇವಲ ನಮ್ಮ ಅಜಾಗ್ರತೆಯೇ? ಮನದ ನೋವು  ತಡೆಯಲಾಗದೆ ಕುಡಿತ, ಧೂಮಪಾನ, ಅಮಲು ಪದಾರ್ಥಗಳ ಮೊರೆ ಹೋಗುವವರು ಹಲವರಾದರೆ, ದೇವರು, ಧರ್ಮ ಎಂಬ ಸಮಾಧಾನದ ಮೊರೆ ಹೋಗುವವರು ಹಲವರು.

ಅವಳ ಹೆಸರು ಚೈತನ್ಯ. ಡಿಗ್ರಿ ಮುಗಿಸಿ ಎಂ.ಕಾಂ. ಕೋರ್ಸಿಗೆ ಸೇರಿದ್ದಾಳೆ. ಕಾಲೇಜಿನ ಮೊದಲ ದಿನ ಎಲ್ಲರೂ ಅವಳೊಂದಿಗೆ ಬೆರೆಯಲು ಸ್ವಲ್ಪ ಹಿಂಜರಿಯುತ್ತಿದ್ದರು. ಕಾರಣ ಅವಳು ಕುಮಾರಿ ಅಲ್ಲ  ಶ್ರೀಮತಿ. ಆದರೆ ಅವಳ ಫ್ರೆಂಡ್‌ಶಿಪ್‌ ಮಾಡಿದವರಿಗೆ ತಿಳಿದದ್ದೇನೆಂದರೆ, ಮದುವೆಯಾದ್ರೂ ಸಹ ನಮ್ಮ ಸ್ವಂತಿಕೆ, ನಮ್ಮ ನಡವಳಿಕೆಯನ್ನು ಪೂರ್ತಿಯಾಗಿ ಕಳೆದುಕೊಳ್ಳಬೇಕೆಂದಿಲ್ಲವೆಂದು. ಅವಳು ಪ್ರಥಮ ವರ್ಷದ ಡಿಗ್ರಿಯಲ್ಲಿಯೇ ಹಸೆಮಣೆ ಏರಿದ್ದಳು. ಆದರೆ ಗಂಡ, ಅತ್ತೆ ಮನೆ ಹಾಗೂ ತವರು ಮನೆಯವರ ಬೆಂಬಲದಿಂದ ಇಂದು ಈ ಮಟ್ಟದಲ್ಲಿದ್ದಾಳೆ.

ಇದು ಒಬ್ಬಳ ಕಥೆಯಲ್ಲ. ಹೀಗೆ, ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಮೇಲೂ ಕಾಲೇಜಿಗೆ ಹೋಗುವ ಅದೆಷ್ಟೋ ಹೆಣ್ಮಕ್ಕಳಿದ್ದಾರೆ. ಕೆಲವರು ಮಕ್ಕಳಾದ ಮೇಲೂ ಕಾಲೇಜಿಗೆ ಹೋಗಿಯೋ ಅಥವಾ ದೂರಶಿಕ್ಷಣದ ಮೂಲಕವೋ ತಮ್ಮ ಓದಿನ ಕನಸನ್ನು ಪೂರೈಸುತ್ತಾರೆ.

ಆದರೆ, ಇವೆಲ್ಲದಕ್ಕೆ ಮುಖ್ಯವಾಗಿ ಬೇಕಾಗಿರುವುದು ಆಸಕ್ತಿ, ಛಲ ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ಗಂಡ ಹಾಗೂ ಗಂಡನ ಮನೆಯವರ ಬೆಂಬಲ. ಸಮಾಜದಲ್ಲಿ  ಹೆಣ್ಣಿನ ಆಸೆ ಆಕಾಂಕ್ಷೆಗಳನ್ನು ಚಿವುಟಿ ಬಿಸಾಡುವ ಗಂಡಂದಿರ ಬಗ್ಗೆಯೇ ಹೆಚ್ಚು ಪ್ರಚಾರ ಮಾಡುತ್ತಾರೆ. ಆದರೆ ಎಷ್ಟೋ ಜನ ಗಂಡಸರು ತಮ್ಮ ಹೆಂಡತಿಯ ಓದುವಿಕೆಗೆ, ಆಕೆಯ ಕೆಲಸಕ್ಕೆ ಬೆಂಬಲವಾಗಿ ನಿಲ್ಲುವವರಿದ್ದಾರೆ ಹಾಗೇ ಅದೆಷ್ಟೋ ಅತ್ತೆ, ಮಾವಂದಿರು, ನಾದಿನಿ, ಮೈದುನಂದಿರು ತಮ್ಮ ಸೊಸೆ ಅಥವಾ ಅತ್ತಿಗೆಯ ಕನಸನ್ನು ನನಸಾಗಿಸುವ ಪ್ರಯತ್ನದಲ್ಲಿ ಕೈಜೋಡಿಸುತ್ತಾರೆ.

ನಮ್ಮ ಸಮಾಜದಲ್ಲಿ ಈಗಲೂ ಮದುವೆಯ ನಂತರ ಓದುವ ಹುಡುಗಿಯರನ್ನು ಮೂದಲಿಸಿ ಮಾತನಾಡುವವರಿದ್ದಾರೆ. ಅವಳಿಗೆ ಇನ್ನೂ ಓದಬೇಕಂತೆ... ಮದುವೆಯಾದ್ರೂ ಏನು ಹುಚ್ಚೋ, ಮನೆಯಲ್ಲಿ ಅತ್ತೆ ಕೆಲ್ಸ ಮಾಡ್ತಾರೆ, ಇವಳು ರಾಣಿ ಥರ ಕಾಲೇಜಿಗೆ ಹೋಗ್ತಾಳೆ.., ಮದುವೆಯಾದ್ರೂ ಯಾಕೆ ಬೇಕು ಈ ಕಾಲೇಜು ಸಹವಾಸ. ಇನ್ನೂ ಏನೇನೋ ಟೀಕೆಗಳು. ಕೆಲವು ಸಹಿಸಬಹುದು, ಇನ್ನು ಕೆಲವು ಸಹಿಸಲಸಾಧ್ಯ.

ಆದರೆ ಇವ್ಯಾವುದನ್ನೂ ತಲೆಗೆ ಹಾಕಿಕೊಳ್ಳದೆ ಒಂದು ಹೆಣ್ಣಿನ ಓದಿಗೆ, ಆಕೆಯ ಕನಸಿಗೆ, ಆಕೆಯ ಸಬಲೀಕರಣಕ್ಕೆ ಬೆಂಬಲವಾಗಿ ನಿಲ್ಲುವ, ಹೊಸ ಹುಮ್ಮಸ್ಸನ್ನು ತುಂಬುವ ಅದೆಷ್ಟೋ ಗಂಡಂದಿರಿಗೆ, ಅತ್ತೆಯರಿಗೆ, ಮಾವಂದಿರಿಗೆ, ನಾದಿನಿ, ಮೈದುನ, ಅಕ್ಕ, ಭಾವಂದಿರಿಗೆ ದೊಡ್ಡ ಸಲಾಂ.

ಯಾಕೆಂದರೆ, ತವರು ಮನೆಯಲ್ಲಿ ಹೆಣ್ಣಿಗೆ ಯಾವಾಗಲೂ ಪ್ರೋತ್ಸಾಹ, ಮದುವೆಯ ನಂತರ ಗಂಡನ ಮನೆಯ ಪಾತ್ರ ಜಾಸ್ತಿ ಇರುತ್ತದೆ. ಹಲವು ಸಂದ‌ರ್ಭಗಳಲ್ಲಿ ತವರು ಮನೆಯಲ್ಲಿ ಸಿಗದ ಅವಕಾಶ, ಪ್ರೋತ್ಸಾಹ ಗಂಡನ ಮನೆಯಲ್ಲಿ ದೊರೆಯುತ್ತದೆ.

ಹುಡುಗಿ ಕಾಲೇಜಿಗೆ ಹೋದಾಗ ಮನೆವಾರ್ತೆ ಅತ್ತೆಯೇ ನೋಡಿಕೊಳ್ಳುತ್ತಾರೆ.ಮನೆಗೆ ಬಂದ ನಂತರವೂ ಕಾಲೇಜಿನ ಪ್ರಾಜೆಕುr, ಸೆಮಿನಾರ್‌ ಅದು ಇದು ಎಂದು ಕೆಲಸದಲ್ಲಿ ಕೆಲವೊಮ್ಮೆ ಕೈಜೋಡಿಸಲಾಗದ ಸ್ಥಿತಿ ಸೊಸೆಯದ್ದು. ಇಂಥ ಸಂದ‌ರ್ಭಗಳಲ್ಲಿ ಸಣ್ಣ ಪುಟ್ಟ ಅಸಹನೆಗಳನ್ನು ನಿವಾರಿಸಿ ಸಂದರ್ಭಗಳನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಅತ್ತೆ ಸೊಸೆ ಇಬ್ಬರ ಪಾತ್ರವೂ ಅತ್ಯಗತ್ಯ.

ಹೀಗೆ ಪ್ರತಿ ಯಶಸ್ವಿ ಗಂಡಸಿನ ಹಿಂದೆ ಹೆಣ್ಣು ಇದ್ದಾಳೆ ಎಂಬಂತೆ, ಅದೆಷ್ಟೋ ಮದುವೆಯಾದ ಹೆಣ್ಣುಮಕ್ಕಳ ಕನಸು ನನಸಾದುದರ, ಅದರ ಯಶಸ್ಸಿನ ಹಿಂದೆ ಅವರ ತವರಿನ, ಗಂಡನ ಹಾಗೂ ಗಂಡನ ಮನೆಯವರ ಬೆಂಬಲ ಸದಾ ಇರುತ್ತದೆ. ಇಂತಹ ಸಂಬಂಧ, ಪ್ರೀತಿ, ಬೆಂಬಲ ಸದಾ ಎಲ್ಲಾ ಹೆಣ್ಮಕ್ಕಳಿಗೂ ಸಿಗಲಿ ಎಂಬುದೇ ನಮ್ಮ ಬಯಕೆ.

ಭವಸ್ವಧಾ

Trending videos

Back to Top