CONNECT WITH US  

ಕೆಟ್ಟ ನಾಲಿಗೆಗೆ ಒಳ್ಳೆಯ ಮಾತೇ ಫ್ರೆಶ್ನರ್‌!

ಸುಳ್ಳು ಭರವಸೆ ಕೊಟ್ಟರೂ ಕೆಲವು ಸಲ ಸುಳ್ಳಿನ ಜೊತೆ ನಡೆಯುವ ಹಾದಿ ಹಿತವಾಗಿದೆ ಅನ್ನಿಸುತ್ತದೆ. ಆದರೆ ಸುಳ್ಳು ಶಾಶ್ವತವಲ್ಲ. ಅದು ಹುಟ್ಟುವುದು ನಾಲಿಗೆಯಲ್ಲಿ, ಸಾಯುವುದು ಕಿವಿಯಲ್ಲಿ. 

ಐದು ಇಂಚಿನ ನಾಲಿಗೆ ನಮ್ಮ ಜೀವನವನ್ನೇ ಆಟ ಆಡಿಸುತ್ತದೆ. ನಾವು ಒಳ್ಳೆಯವರೋ-ಕೆಟ್ಟವರೋ, ನಾವು ಎಂಥಾ ವ್ಯಕ್ತಿ ಅಂತ ನಮ್ಮ ಎದುರಿಗಿರು
ವವರು ನಮ್ಮನ್ನು ಮೊದಲು ಅಳೆಯುವುದೇ ನಮ್ಮ ಮಾತುಗಳಿಂದ. ಮನುಷ್ಯ ತನ್ನ ಅರಿಷಡ್ವರ್ಗಗಳನ್ನು ಬೇಕಾದರೂ ಸುಲಭವಾಗಿ ಹಿಡಿತದಲ್ಲಿಟ್ಟುಕೊಳ್ಳಬಲ್ಲ. ಆದರೆ ಒಂದು ಸಣ್ಣ ನಾಲಿಗೆಯನ್ನು ಹಿಡಿತದಲ್ಲಿಟ್ಟು ಕೊಳ್ಳಲು ಕಷ್ಟಪಡುತ್ತಾನೆ. ಮನುಷ್ಯನ ಜೀವನವನ್ನೇ ಬದಲಾಯಿಸುವ ಶಕ್ತಿ ನಾಲಿಗೆಗಿದೆ. 

ನಾಲಿಗೆ ಒಳ್ಳೆಯದನ್ನು ಮಾತ್ರ ಆಡುತ್ತದೆ ಅಂತೇನೂ ಇಲ್ಲ. ಅದು ಒಂದು ಪದವನ್ನು ನಿಯಂತ್ರಣ ತಪ್ಪಿ ಆಡಿದರೂ ನಮ್ಮ ಜೀವನ ಬದಲಾಗಿಬಿಡುತ್ತದೆ. ಅಪ್ಪಿತಪ್ಪಿ ನಮ್ಮ ತಲೆಯಲ್ಲಿ ಓಡುತ್ತಿರುವುದೆಲ್ಲ ನಾಲಿಗೆಯ ಮೇಲೆ ಹರಿದುಬಿಟ್ಟರೆ ನಮ್ಮ ಎದುರಿಗಿರುವ ವ್ಯಕ್ತಿ ನಮ್ಮನ್ನು ನೋಡುವ ರೀತಿಯೇ ಬೇರೆಯಾಗುತ್ತದೆ. ನಾವು ತುಂಬಾ ಜನ ರನ್ನು ನೋಯಿಸುವುದು ಅಥವಾ ಮೆಚ್ಚಿಸುವುದು ನಮ್ಮ ನಾಲಿಗೆಯಿಂದ ಆಡುವ ಮಾತಿನಿಂದಲೇ. ಮನೆಯಲ್ಲಿ ಹಿರಿಯರಿದ್ದರೆ ಯಾವಾಗಲೂ ಒಂದು ಮಾತು ಹೇಳುತ್ತಾರೆ- "ಏಯ್‌, ಎಲುಬಿಲ್ಲದ ನಾಲಿಗೆ ಅಂತ ಸುಮ್ಮನೆ ಬಾಯಿಗೆ ಬಂದಂಗೆ ಮಾತಾಡಬೇಡ!' ನಿಜವೇ, ನಾಲಿಗೆಗೆ ಎಲುಬಿಲ್ಲ, ಆದ್ದರಿಂದಲೇ ಅದು ಬೇಕಾದ ಹಾಗೆ ಹೊರಳುತ್ತದೆ. 

ಮೊಬೈಲ್‌ ಎಂಬ ಮಾತಿನ ಫ್ಯಾಕ್ಟರಿ
ಇತ್ತೀಚೆಗಂತೂ ಮೊಬೈಲ್‌ಫೋನ್‌ ಬಂದಮೇಲೆ ಜನರಿಗೆ ಮಾತೇ ಜೀವನ ಆಗಿದೆ. ಮಾತಲ್ಲೇ ಸ್ನೇಹ, ಮಾತಲ್ಲೇ ಪ್ರೇಮ, ಮಾತಲ್ಲೇ ಎಷ್ಟೋ ಸಲ ಮದು ವೆಯೂ ನಡೆದುಹೋಗುತ್ತದೆ. ಎಷ್ಟೋ ಜನರಿಗೆ ಫೋನ್‌ನಲ್ಲಿ ಮಾತನಾಡುವುದೇ ಒಂದು ಚಟ. ಒಂದು ತಾಸು ಯಾರದ್ದೂ ಫೋನ್‌ ಬರಲಿಲ್ಲ ಎಂದಾ ದರೆ ಅವರ ಮನಸ್ಸು ಚಡಪಡಿಸುತ್ತದೆ. ಒಳಗೊಳಗೇ ತೊಳಲಾಟ, ಕೋಪ, ಅನುಮಾನ ಎಲ್ಲವೂ ಶುರುವಾ ಗುತ್ತದೆ. ಆ ನಾಲಿಗೆಗೆ ಅದೇನು ಪವರ್‌ ಇದೆಯೋ! ಬೆಳಕಿರುವಾಗ ಬ್ಯುಸಿನೆಸ್‌ ಬಗ್ಗೆ ಪಟಪಟ ಅಂತ ಮಾತ ನಾಡುತ್ತಿದ್ದರೆ, ರಾತ್ರಿಯಾಗುತ್ತಿದ್ದಂತೆ ಪಿಸುಪಿಸು ಅಂತ ಇನ್ನೂ ಜಾಸ್ತಿ ಮಾತಾಡಲು ನಾಲಿಗೆ ಹಂಬಲಿಸು ತ್ತದೆ. ಅದು ಎಷ್ಟು ಸತ್ಯ ಹೇಳುತ್ತದೆಯೋ ಗೊತ್ತಿಲ್ಲ. ಪ್ರೇಮಿಗಳು ರಾತ್ರಿ ಹೊತ್ತು ಜಗಳವಾಡಿ ಫೋನ್‌ ಕಟ್‌ ಮಾಡಿ ಜೀವವನ್ನೇ ತೆಗೆದುಕೊಂಡ ಕತೆಗಳೂ ಇವೆ. 

ನುಡಿದಂತೆ ನಡೆ, ನಡೆದಿದ್ದನ್ನೇ ನುಡಿ ಸುಳ್ಳು ಭರವಸೆ ಕೊಡುವವರ ಸಂಖ್ಯೆ ಜಾಸ್ತಿಯಾಗಿರುವುದು ನಿಮಗೇ ಗೊತ್ತು. ಚುನಾವಣೆ ಸಮಯದಲ್ಲಂತೂ ರಾಜಕಾರಣಿಗಳು ಬೀದಿ ಬೀದಿಗಳಲ್ಲಿ ರ್ಯಾಲಿ, ಸಮಾವೇಶ ನಡೆಸುತ್ತಾರೆ. ಅಲ್ಲಿ ಮೂರ್‍ನಾಲ್ಕು ತಾಸು ಓತಪ್ರೋತವಾಗಿ ಮಾತಿನ ಮಳೆ ಸುರಿಯುತ್ತದೆ. ಎಲ್ಲರೂ ಭಾಷಣದಲ್ಲೇ ರಾಮರಾಜ್ಯ ಕಟ್ಟಿ ಬಿಡುತ್ತಾರೆ. ಅವರ ಮಾತು ಕೇಳಿದರೆ ಜನರಿಗೆ ಸ್ವರ್ಗಕ್ಕೆ ಮೂರೇ ಗೇಣು ಬಾಕಿಯಿರುವುದು. ಅವರನ್ನು ಆರಿಸಿ ಕಳುಹಿ ಸಿದರೆ ಇನ್ಮುಂದೆ ಯಾರೂ ಕಷ್ಟಪಡುವ ಪ್ರಮೇ ಯವೇ ಇಲ್ಲವಂತೆ! ಸ್ವಾತಂತ್ರ್ಯ ಬಂದಾಗಿನಿಂದ ಎಲ್ಲಾ ರಾಜಕೀಯ ಪಕ್ಷಗಳೂ ಚುನಾವಣೆಗೆ ಮುನ್ನ ಇದೇ ಕಟ್ಟುಕತೆ ಹೇಳಿ ಗೆದ್ದಿವೆ. ಜನರ ಕಷ್ಟ ನಿವಾರಣೆಯಾಗಿ ದೆಯೇ? ಆದರೂ ಜನ ತಮ್ಮ ಮಾತು ನಂಬಬೇಕು ಎಂದೇ ಈ ಮಹಾನ್‌ ನಾಯಕರು ಹೇಳುತ್ತಾರೆ.  

ಸುಳ್ಳು ಭರವಸೆ ಕೊಟ್ಟರೂ ಕೆಲವು ಸಲ ಸುಳ್ಳಿನ ಜೊತೆ ನಡೆಯುವ ಹಾದಿ ಹಿತವಾಗಿದೆ ಅನ್ನಿಸುತ್ತದೆ. ಆದರೆ ಸುಳ್ಳು ಶಾಶ್ವತವಲ್ಲ. ಅದು ಹುಟ್ಟುವುದು ನಾಲಿಗೆಯಲ್ಲಿ, ಸಾಯುವುದು ಕಿವಿಯಲ್ಲಿ. ನಾಲಿಗೆಗೂ ಕಿವಿಗೂ ಅಂತರ ಬಹಳ ಕಡಿಮೆ. ಆದರೆ ಸತ್ಯ ಹುಟ್ಟು ವುದು ಅಂತರಂಗದಲ್ಲಿ. ಅದಕ್ಕೆ ಸಾವಿಲ್ಲ. ಆದರೂ ಸತ್ಯ ಹೇಳುವುದು ಹಾಗೂ ಕೇಳುವುದು ಎರಡೂ ಕಷ್ಟ ಎಂದು ಜನರು ಸತ್ಯವನ್ನು ಮುಚ್ಚಿಟ್ಟುಕೊಳ್ಳುತ್ತಾರೆ. ಸತ್ಯ ಹೇಳುವುದಕ್ಕೆ ನಾವೂ ಎಷ್ಟೋ ಸಂದರ್ಭದಲ್ಲಿ ಹೆದರಿರುತ್ತೇವೆ. ಆದರೆ ಸುಳ್ಳನ್ನು ಬೇಕಾದರೆ ರಾಜಾರೋಷವಾಗಿ ಹೇಳುತ್ತೇವೆ.

ನಾಲಿಗೆ ಕೆಲವು ಸಲ ತನ್ನ ಕೆಟ್ಟ ಬುದ್ಧಿ ತೋರಿಸಿ ಸತ್ಯ ವನ್ನು ಮುಚಿಟ್ಟುಕೊಳ್ಳುತ್ತದೆ. ಆದರೆ, ಕಣ್ಣು ಮಾತ್ರ "ಯಾವಾಗಲೂ ಸತ್ಯವನ್ನೇ ಹೇಳಲು ಬಯಸುತ್ತಿರು ತ್ತದೆ'. ಮಾತಿನಲ್ಲಿ ಕಾಣಿಸದ ಸತ್ಯ ಸರಿಯಾಗಿ ನೋಡಿ ದರೆ ಕಣ್ಣಿನಲ್ಲಿ ಎದ್ದು ಕಾಣಿಸುತ್ತದೆ. ನಾನ್‌ಸ್ಟಾಪ್‌ ಮಾತಾಡುವವರ ಲೋಕ
ಕೆಲವರಂತೂ ನಾಲಿಗೆಗೆ ವಿರಾಮವನ್ನೇ ಕೊಡದೆ ಮಾತನಾಡುತ್ತಾರೆ. ಪ್ರಪಂಚದ ಎಲ್ಲಾ ವಿಚಾರಗಳನ್ನು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಗಾಸಿಪ್‌ ಮಾಡುತ್ತಾರೆ. ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ಬಂದ ಎಲ್ಲಾ ವಿಚಾರಗಳಿಗೂ ಮಾರುತ್ತರ ನೀಡುತ್ತಾರೆ. ಆದರೆ ಎದ್ದುನಿಂತು ಸಮಾಜದ ಯಾವ ಸಮಸ್ಯೆಗಳಿಗೂ ಉತ್ತರ ಹುಡುಕುವುದಿಲ್ಲ. ಬರೀ ನಾಲಿಗೆಯಲ್ಲೇ ದೊಡ್ಡ ಮನಷ್ಯರಂತೆ ಎಲ್ಲದಕ್ಕೂ ಪರಿಹಾರ ಹೇಳು ತ್ತಾರೆ. ಮಾತಿನಲ್ಲಿ ಆಡಿ ಹೇಳಿದ್ದನ್ನೆಲ್ಲ ನಡವಳಿಕೆಯಲ್ಲಿ ತೋರಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿಯದ ಮೂಢರು ಇವರು. ಅವರನ್ನು ಕುರಿತೇ ಪುರಂದರ ದಾಸರು ಈ ಹಾಡು ಬರೆದಿದ್ದು.

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ವಿಚಾರವಿಲ್ಲದೆ ಪರರ ದೂಷಿಸಲು ಚಾಚಿಕೊಂಡಿರುವ ನಾಲಿಗೆ ನಮ್ಮಲ್ಲೇ ನೂರು ತಪ್ಪು ಇಟ್ಟುಕೊಂಡು ಬೇರೆಯ ವರಿಗೆ ಬುದ್ಧಿವಾದ ಹೇಳುವುದು ನಮ್ಮ ನಾಲಿಗೆಗಿರುವ ಬಹುದೊಡ್ಡ ದೌರ್ಬಲ್ಯ. ಆದರೆ, ಅದೇ ನಾಲಿಗೆ ಯಿಂದ ಹೊರಬರುವ ಒಂದೇ ಒಂದು ಮಾತಿನಿಂದ ಇನ್ನೊಬ್ಬ ವ್ಯಕ್ತಿಯನ್ನು ಖುಷಿಪಡಿಸಲೂ ಸಾಧ್ಯವಿದೆ. ಅಂತಹ ಇನ್ನಾವ ವ್ಯವಸ್ಥೆಯೂ ಜಗತ್ತಿನಲ್ಲಿಲ್ಲ. ಸಿಹಿಯಾದ ಮಾತು ದೇವರು ನಮಗೆ ಕೊಟ್ಟ ಉಡುಗೊರೆ. ಅದಕ್ಕಿಂತ ಒಳ್ಳೆಯ ಉಡುಗೊರೆ ಬೇರೆನಿದೆ? ಇದನ್ನೇ ಸಂಸ್ಕೃತದ ಸುಭಾಷಿತವೊಮದು ಸೊಗಸಾಗಿ ಹೇಳುತ್ತದೆ.

ಪ್ರಿಯವಾಕ್ಯದಾನೇನ ಸರ್ವೇ ತುಷ್ಯಂತಿ ಜಂತವಃ
ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ
ಒಳ್ಳೆಯ ಮಾತನಾಡಿದರೆ ಎಲ್ಲರೂ ಖುಷಿಪಡುತ್ತಾರೆ. ಮಾತಿಗೆಂಥ ಬಡತನ?
ಎಷ್ಟು ನಿಜ. ಒಳ್ಳೆಯ ಮಾತಾಡಲು ದುಡ್ಡು ಕೊಡ ಬೇಕಾ? ನಮ್ಮ ನಾಲಿಗೆಗೆ ಇರುವ ಶಕ್ತಿಯನ್ನು ಏಕೆ ಕೆಟ್ಟದಾಗಿ ಉಪಯೋಗಿಸಿಕೊಳ್ಳಬೇಕು? ಇನ್ನೊಬ್ಬ ರನ್ನು ಚುಚ್ಚು ಮಾತುಗಳಿಂದ ಹೀಯಾಳಿಸುವುದ ರಿಂದ, ವ್ಯಂಗ್ಯವಾಗಿ ಮಾತನಾಡಿ ನೋಯಿಸುವುದ ರಿಂದ ನಮಗೇನು ಲಾಭ? ಕೆಲವು ಸಲ ನಮ್ಮ ನಾಲಿಗೆ ಮೂಲಕ ಹೊರಬರುವ ಮಾತುಗಳು ಕತ್ತಿಗಿಂತ ಹರಿತವಾಗಿರುತ್ತವೆ. ಕೋಲಿನ ಹೊಡೆತ ಬೇಕಾದರೂ ಸಹಿಸಿಕೊಳ್ಳಬಹುದು. ಆದರೆ ನಾಲಿಗೆಯಿಂದ ಹೊರಬ ರುವ ಹೊಡೆತ ಜೀವನ ಪೂರ್ತಿ ಮುಟ್ಟಿನೊಡಿಕೊಳ್ಳುವ ಹಾಗಿರುತ್ತದೆ. ನಮ್ಮ ಉಡುಗೆ ತೊಡುಗೆಗೆ ಮಾತ್ರ ಆಚಾರ ಇದ್ದರೆ ಸಾಲದು. ಅದು ನಾಲಿಗೆಗೂ ಇರಬೇಕು.


Trending videos

Back to Top