CONNECT WITH US  

ಬೇಕಾದ್ದನ್ನಷ್ಟೇ ನೆನಪಿಟ್ಟುಕೊಂಡು ಬೇಡದ್ದನ್ನು ಮರೆಯೋದು ಹೇಗೆ?

ಮನುಷ್ಯನಿಗೆ ಸಂತೋಷ, ನೋವು, ಕೋಪ, ಉದ್ವೇಗ, ದ್ವೇಷ ಎಲ್ಲವನ್ನೂ ಹೊರಹಾಕಿಸುವುದು ಮೆದುಳಿನ ಮೆಮೋರಿ ಚಿಪ್‌ನಲ್ಲಿರುವ ನೆನಪುಗಳು. ಎಲ್ಲಾ ಸಂಬಂಧಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಮೂಲವೂ ಅದೇ. ನಮ್ಮ ಮೆದುಳಿನಲ್ಲಿ ಮೆಮೋರಿ ಚಿಪ್‌ನಂತಹ ರಚನೆಯೊಂದು ಇಲ್ಲದೆ ಇದ್ದಿದ್ದರೆ ನಾವೆಲ್ಲ ಹೇಗಿರುತ್ತಿದ್ದೆವು, ಊಹಿಸಿಕೊಳ್ಳಿ. ಒಂದು ದಿನ ಇದ್ದಿದ್ದ ಸಂಬಂಧದ ನೆನಪು ಇನ್ನೊಂದು ದಿನ ಇರುತ್ತಿರಲಿಲ್ಲ. ಯಾರು ಕಂಡರೂ ಅನಾಮಿಕರಂತೆ ಕಾಣುತ್ತಿದ್ದರು. ನಮ್ಮವರು, ನನ್ನ ಸಂಬಂಧ, ನಾನು ಯಾರು? ನಮ್ಮ ಊರು, ಮನೆ, ನಾವು ಓಡಾಡುವ ದಾರಿ, ಹಿಂದೆ ಮಾಡಿದ್ದ ಕೆಲಸಗಳು-ಮುಂದೆ ಮಾಡಬೇಕಾದ ಕೆಲಸಗಳು, ಹೀಗೆ ಎಲ್ಲವೂ, ಎಲ್ಲಾ ಸಂಬಂಧಗಳೂ ಗೋಜಲು ಗೋಜಲಾಗುತ್ತಿತ್ತು. ಅವೆಲ್ಲ ಇವತ್ತಿಗೂ ಗಟ್ಟಿಯಾಗಿ ಉಳಿದುಕೊಂಡಿರುವುದಕ್ಕೆ ಕಾರಣ ನೆನಪು. ಯಾರನ್ನು ಪ್ರೀತಿಸಿದೆ, ಯಾರನ್ನು ಮದುವೆಯಾದೆ, ಯಾರು ನನ್ನ ತಂದೆ-ತಾಯಿ ಎನ್ನುವ ನೆನಪೇ ಇರದಿದ್ದರೆ ಸಂಬಂಧಗಳು ಹೇಗೆ ಉಳಿಯುತ್ತಿದ್ದವು?

ಎಷ್ಟೋ ಗಂಡ-ಹೆಂಡತಿಯರು ಸಾವಿರಾರು ಮೈಲಿಗಳ ದೂರ ದೂರದಲ್ಲಿ ಬದುಕುತ್ತಾರೆ. ಹೆಂಡತಿ ಮಕ್ಕಳು ಭಾರತದಲ್ಲಿದ್ದರೆ, ಗಂಡಂದಿರು ಸಂಪಾದನೆಗಾಗಿ ಹಲವಾರು ವರ್ಷ ವಿದೇಶಗಳಲ್ಲಿ ಜೀವನ ಸಾಗಿಸುತ್ತಾರೆ. ಅವರು ಎಲ್ಲೇ ಇದ್ದರೂ ಹೆಂಡತಿ-ಮಕ್ಕಳ ನೆನಪು ಸದಾ ಕಾಡುತ್ತಿರುತ್ತದೆ. ಅವರ್ಯಾರೂ ನೆನಪಿನಲ್ಲಿ ಉಳಿಯದೆ ಇದ್ದಿದ್ದರೆ ಎಲ್ಲಿ ಬೇಕೋ ಅಲ್ಲಿ ವಾಸಿಸುತ್ತಿದ್ದರು. ಯಾರನ್ನೂ ಕೇರ್‌ ಮಾಡುತ್ತಿರಲಿಲ್ಲ. ಯಾರ ಹಿತವನ್ನೂ ಬಯಸುತ್ತಿರಲಿಲ್ಲ, ಅಂಥವುಗಳಲ್ಲಿ ಆಸಕ್ತಿಯನ್ನೂ ಹೊಂದುತ್ತಿರಲಿಲ್ಲ. ಯಾರಿಗೇನಾದರೆ ನನಗೇನು ಅಂತ ಪ್ರತಿ ಕ್ಷಣ ಹೊಸದಾಗಿ ನಡೆದುಕೊಳ್ಳುತ್ತಿದ್ದರು.

ಈ ನೆನಪು ಎಂಬ ಸಂಗತಿ ಮನುಷ್ಯನಿಗೆ ದೇವರ ಕೊಡುಗೆ. ನೆನಪು ಇರುವುದರಿಂದಲೇ ನಾವು ಮನುಷ್ಯರು. ನೆನಪುಗಳ ನಡುವೆ ಹೋರಾಟ ಮಾಡುತ್ತ, ಇದು ಸರಿ ಇದು ತಪ್ಪು ಎಂದು ಅನಲೈಸ್‌ ಮಾಡುತ್ತ, ಜ್ಞಾಪಕ ಶಕ್ತಿಯಿಂದ ಲಭಿಸುವ ಸಂತೋಷ- ದುಃಖಗಳ ನಡುವೆ ಸೆಣಸಾಟ ನಡೆಸುತ್ತ, ಸತ್ಯ-ಧರ್ಮ ಕಾಪಾಡಿಕೊಂಡು ಜೀವನ ನಡೆಸಬೇಕು ಅಂತಲೇ ನಮ್ಮ ಮೆದುಳಿಗೊಂದು ಮೆಮೋರಿ ಚಿಪ್‌ನಂತಹ ಸಾಮರ್ಥ್ಯವನ್ನು ನೀಡಿರುವುದು.

ನೆನಪಿಗಿದೆ 2 ಮುಖ

ಸುಂದರ ಸಂಗತಿಗಳ ಮೆಲುಕು ಹಾಕುತ್ತಾ-ಹಗಲುಗನಸು ಕಾಣುತ್ತಾ, ಮೈಮರೆತು ಸಂತೋಷವಾಗಿರುವ ಚೈತನ್ಯವನ್ನು ನೆನಪು ಹೇಗೆ ನಮಗೆ ಕೊಡುತ್ತದೆಯೋ ಹಾಗೆಯೇ ಅದೇ ನೆನಪು ನಮ್ಮನ್ನು ಕಿತ್ತು ತಿಂದು, ನಮ್ಮನ್ನು ಪದೇ ಪದೇ ಚುಚ್ಚಿ ಚುಚ್ಚಿ ಕೊಂದು, ನಾವು ನಾವಾಗಿಲ್ಲದೆ ಇರುವ ಹಾಗೆ ಮಾಡುವ ಶಕ್ತಿಯನ್ನೂ ಹೊಂದಿದೆ. ನಾವು ಯಾವುದನ್ನು ಮರೆಯಬೇಕು ಅಂದುಕೊಳ್ಳುತ್ತೇವೋ ಅದನ್ನು ಜ್ಞಾಪಿಸಿಕೊಳ್ಳದೆ ಇರುವುದಕ್ಕೆ ಸತತ ಪ್ರಯತ್ನ ಮಾಡುತ್ತೇವೆ. ಆದರೂ ನಾವು ಬೇರೆ ಕೆಲಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದಾಗ ಕೂಡ ನಮ್ಮನ್ನೇ ಹುಡುಕಿಕೊಂಡು ಬಂದು ತಲೆ ಕೆಡಿಸುತ್ತದೆ. ಮೆಡಿಟೇಷನ್‌, ಯೋಗ, ಧ್ಯಾನ, ಪೂಜೆ ಏನೇ ಮಾಡಿದರೂ ಕೆಲವು ನಮಗೆ ಬೇಡವಾದ ನೆನಪುಗಳು ಬೇತಾಳನ ಥರ ಬೆನ್ನುಹತ್ತಿ ಕಾಡುತ್ತವೆ.

ಅನೇಕ ಚಟಗಳು/ ದುಶ್ಚಟಗಳು ಶುರುವಾಗುವುದಕ್ಕೂ ನೆನಪುಗಳೇ ಕಾರಣ. ಜಾnಪಕ ಶಕ್ತಿ ಮನುಷ್ಯನನ್ನು ಅತಿ ದೊಡ್ಡ ವ್ಯಕ್ತಿಯನ್ನಾಗಿ ಮಾಡಬಲ್ಲದು, ಹಾಗೆ ಅದೇ ಜಾnಪಕ ಶಕ್ತಿ ಮನುಷ್ಯನ ನೋವುಗಳನ್ನು ಬಡಿದೆಬ್ಬಿಸಿ ಹುಚ್ಚನನ್ನಾಗಿಯೂ ಮಾಡಬಲ್ಲದು. ಜೀವನದ ನೋವುಗಳನ್ನು ಮರೆಯುವುದಕ್ಕೆಂದೇ ಕೆಲವರು ಮದ್ಯಪಾನ ಮಾಡುತ್ತಾರೆ. ಕೆಟ್ಟ ನೆನಪುಗಳು ನಮ್ಮನ್ನು ಡೀ-ಮೋಟಿವೇಟ್‌ ಮಾಡುತ್ತವೆ. ಅವುಗಳಿಂದ ಎಲ್ಲಾದರೂ ದೂರ ಓಡಿಹೋಗೋಣ ಅನ್ನಿಸುತ್ತದೆ. ಆದರೆ ಎಲ್ಲಿಗೆ ಓಡುವುದು? ಅವು ನಮ್ಮೊಳಗೇ ಇವೆಯಲ್ಲ.

ಮನುಷ್ಯ ಹುಟ್ಟಿದಾಗಿನಿಂದ ಶಾಲೆ- ಕಾಲೇಜಿಗೆ ಹೋಗಿ ತನ್ನ ಮೆದುಳಿನ ಮೆಮೋರಿ ಚಿಪ್‌ನಲ್ಲಿ ಭೌತಿಕ ಜೀವನಕ್ಕೆ ಬೇಕಾದ ಜಾnನವನ್ನು ತುಂಬಿಸಿಕೊಳ್ಳುತ್ತಾನೆ. ಜೀವನದ ಮೌಲ್ಯವನ್ನು ತಲೆಯಲ್ಲಿ ಫಿಕ್ಸ್‌ ಮಾಡಿಕೊಳ್ಳುತ್ತಾನೆ. ಮಧ್ಯವಯಸ್ಕನಾದಾಗ, ತಾನು ಅಂದುಕೊಂಡಿದ್ದೇ ಬೇರೆ, ಓದಿದ್ದೇ ಬೇರೆ, ಜೀವನದಲ್ಲಿ ನಡೀತಿರೋದೇ ಬೇರೆ ಎಂಬ ವಾಸ್ತವದ ಅರಿವು ಅವನಿಗಾಗುತ್ತದೆ. ತನ್ನ ಎಲ್ಲಾ ಜವಾಬ್ದಾರಿಗಳನ್ನು ಮುಗಿಸಿ ನಿವೃತ್ತನಾಗಿ ನೆಮ್ಮದಿಯಿಂದ ಬದುಕೋಣ ಅಂದುಕೊಂಡರೆ, ವಯಸ್ಸಾದ ಮೇಲೆ ಜ್ಞಾಪಕ ಶಕ್ತಿ ದುರ್ಬಲವಾಗುತ್ತಾ ಹೋಗುತ್ತದೆ. ಕೆಲವು ಹಿರಿಯರು ತಮ್ಮ ಸ್ವಂತ ಮಕ್ಕಳನ್ನೇ ಗುರುತಿಸಲಾಗದಷ್ಟು ಜಾnಪಕ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಅವರು ಏನೂ ಗೊತ್ತಿರದ ಪುಟ್ಟ ಮಕ್ಕಳಂತೆ. ಮತ್ತೆ ಕೆಲವರು ಆಗಾಗ ಜಾnಪಕ ಶಕ್ತಿ ಕಳೆದುಕೊಳ್ಳುತ್ತಾರೆ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲೇ ಮರೆವಿನ ರೋಗ ಅಂಟಿಕೊಳ್ಳುತ್ತದೆ.

ನೆನಪುಗಳ ಜೊತೆ ಮಾತನಾಡಿ!

ಕೆಲವು ಸಲ ಮನುಷ್ಯನಿಗೆ ಮೆಮೋರಿ ಇದ್ದರೂ ಕಷ್ಟ-ಇಲ್ಲದಿದ್ದರೂ ಕಷ್ಟ. ಆದರೆ ನಾವೆಲ್ಲ ಇದರಿಂದ ಎಸ್ಕೇಪ್‌ ಆಗಲು ಸಾಧ್ಯವೇ ಇಲ್ಲ ಅಂತ ಗೊತ್ತಾದ ಮೇಲೆ ಇದರ ಜೊತೆ ಹೇಗೆ ಡೀಲ್‌ ಮಾಡಬೇಕು ಎಂಬುದನ್ನು ಯೋಚಿಸಬೇಕು. ಅನೇಕ ಕೆಟ್ಟ ನೆನಪುಗಳು ನಮ್ಮನ್ನು ಹಾಳುಮಾಡುತ್ತಿವೆ ಅಂತ ಅರಿವಾದ ತಕ್ಷಣ, ಪ್ರಯತ್ನಪೂರ್ವಕವಾಗಿ ನಿಮ್ಮೊಳಗೇ ನೀವೇ ಆ ನೆನಪುಗಳ ಜೊತೆ ಮಾತನಾಡಿಕೊಳ್ಳಿ. ನೀವು ಆ ನೆನಪುಗಳೇ ಬೇಡ ಅಂತ ಅವಾಯ್ಡ ಮಾಡಿದಾಗ ಮುಂದೊಂದು ದಿನ ಮತ್ತೆ ನೋವು ಅನುಭವಿಸಬೇಕಾಗತ್ತದೆ. ಜಗತ್ತಿನಲ್ಲಿ ನಡೆಯುತ್ತಿರುವುದೆಲ್ಲಾ ಸತ್ಯ, ನಿಮ್ಮ ತಲೆಯಲ್ಲಿರುವ ಗೊಂದಲವೂ ಸತ್ಯ. ಒಂದು ಸಲ ಆ ಕೆಟ್ಟ ನೆನಪುಗಳನ್ನು ಎದುರಿಸಿ ನಿಂತಾಗ ಮುಂದೆ ಅದು ನಮ್ಮನ್ನು ಕಾಡಲು ಸಾಧ್ಯವಿಲ್ಲ. ನಾವು ಆ ನೆನಪುಗಳಿಗೆ ಪ್ರಾಮುಖ್ಯತೆ ಕೊಟ್ಟು ಅಳುತ್ತಿದ್ದರೆ ಅದು ನಮ್ಮನ್ನು ತಿಂದು ಹಾಕುತ್ತದೆ. ನಾವು ಬಲಶಾಲಿಯೋ, ನೆನಪು ಬಲಶಾಲಿಯೋ ಎಂಬುದು ಇತ್ಯರ್ಥವಾಗಿಹೋಗಲಿ ಎಂದು ಸೆಟೆದು ನಿಂದಾಗ ಅದು ಚೈತನ್ಯ ಕಳೆದುಕೊಳ್ಳುತ್ತದೆ. ಯಾವುದೇ ಸಮಸ್ಯೆ ತಲೆಯಲ್ಲಿ ಸೃಷ್ಟಿಯಾದರೂ ಅದಕ್ಕೊಂದು ಪರಿಹಾರ ಇದ್ದೇ ಇರುತ್ತದೆ. ಅದನ್ನು ತಾಳ್ಮೆಯಿಂದ ಹುಡುಕಿಕೊಳ್ಳಬೇಕು. ನನ್ನ ಕೆಟ್ಟ ನೆನಪುಗಳನ್ನು ಮರೆಯಬೇಕು ಅಂತ ಬರೀ ಕುಡಿಯುತ್ತಿದ್ದರೆ, ಅದನ್ನು ಮರೆಯಲು ಇನ್ನೊಬ್ಬಳ ಜೊತೆ ಹೋಗ್ತಿàನಿ ಅಂತ ಹೊರಟರೆ, ನನಗೆ ನೋವು ಕೊಟ್ಟವರಿಗೆ ಸರಿಯಾಗಿ ಪಾಠ ಕಲಿಸ್ತೀನಿ ಅಂತ ಶಪಥ ಮಾಡಿದರೆ ನಿಮಗೆ ಆ ಚಕ್ರದಿಂದ ಬಿಡುಗಡೆಯೇ ಇಲ್ಲ. ಈ ಯಾವ ವರ್ತನೆಗಳೂ ನಮ್ಮನ್ನು ಮೇಲೆತ್ತುವುದಿಲ್ಲ. ಇಂತಹ ಚಟುವಟಿಕೆಗಳು ನಮ್ಮ ಜೀವನವನ್ನು ಸುಂದರವಾಗಿಸುವುದಿಲ್ಲ.

ಯಾವುದೇ ನೆನಪನ್ನೂ ದ್ವೇಷಿಸಬಾರದು, ಎಲ್ಲವೂ ನಮ್ಮ ಜೊತೆ-ನಮ್ಮೊಳಗೇ ವಿಲೀನವಾಗಬೇಕು. ಎಲ್ಲ ನೆನಪೂ ನಮಗೆ ಸಂಬಂಧಪಟ್ಟಿದ್ದರಿಂದ ಅವುಗಳನ್ನು ಪ್ರೀತಿಸಲೇಬೇಕು. ಅದೆಷ್ಟೇ ಕಹಿ ನೆನಪಾಗಿದ್ದರೂ ಅದು ನಮ್ಮ ಬದುಕಿನಲ್ಲಿ ಘಟಿಸಿರುವುದು. ಅದನ್ನು ಸ್ವೀಕರಿಸಿ, ನಂತರ ಮೀರಿದರೆ ಮಾತ್ರ ಅದರಿಂದ ಬಿಡುಗಡೆ.

ನಮಗೇನು ಬೇಕೋ ಅದನ್ನು ಮಾತ್ರ ನಮ್ಮ ಮೆದುಳಿನಲ್ಲಿರುವ ಮೆಮೋರಿ ಚಿಪ್‌ ನೆನಪಿಟ್ಟುಕೊಳ್ಳುವಂತೆ ಟ್ರೇನ್‌ ಮಾಡಲು ಸಾಧ್ಯವಿದೆ. ಇದೊಂದು ಕಲೆ. ಬೇಡದ್ದನ್ನು ಮರೆಯುವ ಹಾಗೂ ಬೇಕಾದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ನಮಗಿದೆ. ಇದಕ್ಕೆ ಸ್ವಲ್ಪ ದಿನ ಹಿಡಿಯಬಹುದು. ಯಾವ ಕೆಟ್ಟ ಅನುಭವವೂ ಶಾಶ್ವತವಲ್ಲ ಎಂಬುದು ಅರಿವಾದರೆ ಕಹಿ ನೆನಪುಗಳನ್ನು ಸುಲಭವಾಗಿ ಮರೆಯಬಹುದು.

ಏಕೆಂದರೆ ನಮ್ಮ ಜ್ಞಾನ, ನಮ್ಮ ಜ್ಞಾಪಕ ಶಕ್ತಿಗಿಂತ ದೊಡ್ಡದು.

ರೂಪಾ ಅಯ್ಯರ್‌


Trending videos

Back to Top