CONNECT WITH US  

ವಾಲ್ಮೀಕಿ ಭವನದ ಹೆಚ್ಚುವರಿ ಅಭಿವೃದ್ಧಿಗೆ 70 ಲಕ್ಷ

ಕೆ.ಆರ್‌.ನಗರ: ಪಟ್ಟಣದ ನಾಯಕ ಸಮಾಜದ ವಾಲ್ಮೀಕಿ ಭವನದ ಹೆಚ್ಚುವರಿ ಅಭಿವೃದ್ಧಿಗೆ 70 ಲಕ್ಷ ರೂ. ಮಂಜೂರು ಮಾಡುವುದಾಗಿ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಹೇಳಿದರು.

ಇಲ್ಲಿನ ಸಿಲ್ವರ್‌ ಜ್ಯೂಬಿಲಿ ರಸ್ತೆಯಲ್ಲಿರುವ ತಾಲೂಕು ನಾಯಕ ಸಂಘ ಮತ್ತು ತಾಲೂಕು ನಾಯಕ ನೌಕರರ ಸಂಘಗಳ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ದಿವಂಗತ ಚಿಕ್ಕಮಾದು ನಾಯಕ ಸಮಾಜದ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದಾರೆ.

ಈ ಸಮುದಾಯ ಭವನ ನಿರ್ಮಾಣಕ್ಕೆ ಅವರೇ ಕಾರಣ. ಅವರ ರಾಜಕೀಯ ಅನುಭವ ಹಾಗೂ ಜನಪ್ರಿಯತೆ ಅನಿಲ್‌ ಚಿಕ್ಕಮಾದು ಗೆಲುವಿಗೆ ಕಾರಣವಾಗಿದೆ. ಅನಿಲ್‌ ಕೂಡ ತಂದೆಯಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಅವರಿಗೆ ನಿಮ್ಮೆಲ್ಲರ ಸಹಕಾರ ನೀಡಬೇಕೆಂದರು.

ಉತ್ತಮ ನಾಯಕ: ಸಮಾಜದಲ್ಲೊಬ್ಬರು ಪ್ರಬಲ ರಾಜಕಾರಣಿ ಇದ್ದರೆ ನಿಮ್ಮ ಸಮಾಜಕ್ಕೆ ಅನುಕೂಲ. ಅನಿಲ್‌ಚಿಕ್ಕಮಾದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಭವಿಷ್ಯದ ದಿನಗಳಲ್ಲಿ ಉತ್ತಮ ನಾಯಕರಾಗುವುದರಲ್ಲಿ ಸಂದೇಹವಿಲ್ಲ.

ಅವರು ಈಗ ಕಾಂಗ್ರೆಸ್‌ ಶಾಸಕರಾಗಿದ್ದಾರೆ. ಜೆಡಿಎಸ್‌ನಲ್ಲಿಯೇ ಇದ್ದಿದ್ದರೆ ಇನ್ನೂ ಹತ್ತು ಸಾವಿರ ವೋಟು ಜಾಸ್ತಿ ಪಡೆಯುತ್ತಿದ್ದರು. ನಮ್ಮಿಬ್ಬರ ಪಕ್ಷಗಳು ಬೇರೆ ಬೇರೆಯಾಗಿರಬಹುದು. ಆದರೆ ನಾನು ರಾಜಕೀಯದಲ್ಲಿರುವವರೆಗೂ ಅವರಿಗೆ ಬೆಂಗಾವಲಾಗಿರುತ್ತೇನೆ ಎಂದು ಹೇಳಿದರು. 

ಮಾರ್ಗದರ್ಶನವಿರಲಿ: ಶಾಸಕ ಅನಿಲ್‌ ಚಿಕ್ಕಮಾದು ಮಾತನಾಡಿ, ನಮ್ಮ ತಂದೆಗೆ ನಾನು ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ. ಆದರೆ ಸಾ.ರಾ.ಮಹೇಶ್‌ರವರು ನನ್ನನ್ನು ಜಿಲ್ಲಾ ಪಂಚಾಯಿತಿ ಚುನಾವಣೆಗೆ ನಿಲ್ಲಿಸಿದ್ದಲ್ಲದೆ ಶಾಸಕರಾಗಲು ಪರೋಕ್ಷವಾಗಿ ಕಾರಣರಾದರು. ನಮ್ಮ ತಂದೆಯವರು ಸುಮಾರು 40 ವರ್ಷ ರಾಜಕೀಯದಲ್ಲಿ ಬೆಳೆಯಲು ಈ ಸಮಾಜವೇ ಕಾರಣ.

ಹಾಗೆಯೇ ನನಗೂ ನಿಮ್ಮ ಆಶೀರ್ವಾದ ಹಾಗೂ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು. ಸಮಾರಂಭದಲ್ಲಿ ಸಚಿವ ಸಾ.ರಾ.ಮಹೇಶ್‌ ಮತ್ತು  ಶಾಸಕ ಅನಿಲ್‌ಚಿಕ್ಕಮಾದು ಅವರನ್ನು ನಾಯಕ ಸಮಾಜದ ಪದಾಧಿಕಾರಿಗಳು ಮೈಸೂರು ಪೇಟ, ಶಾಲು ಹೊದಿಸಿ ಸನ್ಮಾನಿಸಿದರು. 

ಸಮಾರಂಭದಲ್ಲಿ  ಪುರಸಭಾ ಉಪಾಧ್ಯಕ್ಷೆ ಪಾರ್ವತಿ, ತಾಪಂ ಸದಸ್ಯರಾದ ಸಿದ್ದಮ್ಮ, ಸುನೀತಾ, ಎಪಿಎಂಸಿ ನಿರ್ದೇಶಕಿ ಸಿದ್ದಲಿಂಗಮ್ಮ, ತಾಲೂಕು ನಾಯಕ ಸಮಾಜದ ಅಧ್ಯಕ್ಷ ನರಸಿಂಹನಾಯಕ, ಗೌರವ ಅಧ್ಯಕ್ಷ ಎ.ಟಿ.ಶಿವಣ್ಣ, ಉಪಾಧ್ಯಕ್ಷ ಕೆ.ಬಿ.ಭೈರವ, ಖಜಾಂಚಿ ಮಹದೇವ್‌, ಪ್ರಧಾನ ಕಾರ್ಯದರ್ಶಿ ಪರಮೇಶ್‌, ಸಂಚಾಲಕ ಲೋಕೇಶ್‌, ಹಂಪಾಪುರ ಕುಮಾರ್‌, ಲೋಕೇಶ್‌, ಅಣ್ಣಾಜಿನಾಯಕ, ಸುಬ್ಬುಕೃಷ್ಣ, ಕುಚೇಲ, ಬಸವರಾಜು ಮತ್ತಿತರರು ಹಾಜರಿದ್ದರು. 

ಬಡತನ ನೆಪವೊಡ್ಡಿ ಮಕ್ಕಳ ಶಿಕ್ಷಣವನ್ನು ಮೊಟಕುಗೊಳಿಸಬೇಡಿ. ಸರ್ಕಾರ ಬಡವರ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಯೋಜನೆ ಸದ್ಬಳಸಿಕೊಳ್ಳಿ. ಯಾವುದೇ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಶಿಕ್ಷಣದಿಂದ ಏನನ್ನಾದರೂ ಸಾಧಿಸಬಹುದು. ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣ ತುಂಬಾ ಮುಖ್ಯ. 
-ಸಾ.ರಾ.ಮಹೇಶ್‌, ಪ್ರವಾಸೋದ್ಯಮ ಸಚಿವ


Trending videos

Back to Top