CONNECT WITH US  

ರಾಜ್ಯದ ಪ್ರತಿ ರೈತರಿಗೂ ಆಧಾರ್‌ ಮಾದರಿ ಪ್ರತ್ಯೇಕ ನಂಬರ್‌

ಭ್ರಷ್ಟಾಚಾರ ತಡೆಯಲು ರಾಜ್ಯ ಸರ್ಕಾರದ ಕ್ರಮ; ಸಿಎಫ್‌ಆರ್‌ಪಿ ಅಡಿ ನೋಂದಣಿ ಕಡ್ಡಾಯ

ವಿಶೇಷ ವರದಿ- ಬಾಗಲಕೋಟೆ: ದೇಶದ ಪ್ರತಿಯೊಬ್ಬ ಪ್ರಜೆಗೂ ನೀಡಿರುವ ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಮಾದರಿಯಲ್ಲಿ ರಾಜ್ಯದ ರೈತರಿಗೆ ಪ್ರತ್ಯೇಕ ಗುರುತಿನ ಸಂಖ್ಯೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ರೈತರು ಕಾಮನ್‌ ಫಾರ್ಮರ್‌ ರಿಜಿಸ್ಟ್ರೇಶನ್‌ ಪೋರ್ಟಲ್‌ (ಸಿಎಫ್‌ಆರ್‌ಪಿ)ನಲ್ಲಿ ನೋಂದಾಯಿಸಲು ಕಡ್ಡಾಯಗೊಳಿಸಿದೆ. ಈ ಸಿಎಫ್‌ಆರ್‌ಪಿ ಅಡಿ ಹೆಸರು ನೋಂದಾಯಿಸಿದರೆ ಮಾತ್ರ ಇನ್ನು ಮುಂದೆ ಕೃಷಿ ಇಲಾಖೆ, ಪಶು ಸಂಗೋಪನೆ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸೌಲಭ್ಯ ದೊರೆಯಲಿವೆ.

ಕೃಷಿ, ರೇಷ್ಮೆ, ಪಶು ಸಂಗೋಪನೆ ಹಾಗೂ ತೋಟಗಾರಿಕೆ ಇಲಾಖೆಗಳ ಸೌಲಭ್ಯಗಳ ದುರ್ಬಳಕೆ ತಡೆಗಟ್ಟುವ ಜತೆಗೆ ರೈತರು ಪ್ರತಿಯೊಂದು ಸೌಲಭ್ಯಕ್ಕೂ ಪ್ರತ್ಯೇಕ ಅರ್ಜಿ ಸಲ್ಲಿಸಿ, ಸೌಲಭ್ಯ ಪಡೆಯುವುದನ್ನು ತಡೆಯಲು ಈ ಯೋಜನೆ ಕಡ್ಡಾಯಗೊಳಿಸಿದೆ. ಆಧಾರ್‌ ಸಂಖ್ಯೆಯೊಂದಿಗೆ ರೈತರು ಹೆಸರು, ಹೊಂದಿರುವ ಒಟ್ಟು ಭೂಮಿ, ಖಾತೆ ಉತಾರ ಸಂಖ್ಯೆ, ರೈತರ ವರ್ಗ(ಸಾಮಾನ್ಯ, ಎಸ್‌ಸಿ, ಎಸ್‌ಟಿ, ಅಲ್ಪಸಂಖ್ಯಾತ, ಅಂಗವಿಕಲ ಇತ್ಯಾದಿ), ಬ್ಯಾಂಕ್‌ ಖಾತೆ ಸಂಖ್ಯೆ ಮುಂತಾದ ಮಾಹಿತಿ ಒಳಗೊಂಡ ವಿವರವನ್ನು ಪೋರ್ಟಲ್‌ನಲ್ಲಿ ನೋಂದಾಯಿಸಬೇಕು. ಪ್ರತಿಯೊಂದು ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರು, ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಈ ನೋಂದಣಿ ಈಗಾಗಲೇ ಆರಂಭಿಸಲಾಗಿದೆ. ಅಲ್ಲದೇ ಸದ್ಯ ರೈತರು ಯಾವುದೇ ಸೌಲಭ್ಯ ಕೇಳಿ ಅರ್ಜಿ ಸಲ್ಲಿಸಿದರೂ ಅವರ ವಿವರವನ್ನು ಈ ಪೋರ್ಟಲ್‌ನಲ್ಲಿ ದಾಖಲಿಸುವ ಕಾರ್ಯ ನಡೆಯುತ್ತಿದೆ.

ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ 75 ಲಕ್ಷ (ರೈತ ಕುಟುಂಬ ಹೆಚ್ಚಾದಾಗ ಅಥವಾ ಭೂಮಿ ವಿಂಗಡಣೆ ಮಾಡಿಕೊಂಡರೆ ಸಂಖ್ಯೆ ಹೆಚ್ಚಳವಾಗುತ್ತವೆ) ರೈತರಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ 2,27,731 ರೈತರಿದ್ದಾರೆ. ಅದರಲ್ಲಿ 6010 ರೈತರು ವಿಶಿಷ್ಟ ಪ್ರತ್ಯೇಕ ಸಂಖ್ಯೆ (ಉದಾ: ಎಫ್‌ಐಡಿ-ಫಾರ್ಮರ್‌ ಐಡಿ )ಪಡೆಯಲು ನೋಂದಾಯಿಸಿಕೊಂಡಿದ್ದಾರೆ. ಇದು ಸದ್ಯ ನಿರಂತರವಾಗಿ ನಡೆಯಲಿದ್ದು, ರೈತರು ನೋಂದಾಯಿಸುವುದು ಕಡ್ಡಾಯವಾಗಿದೆ.

ಆಧಾರ್‌ ಸಂಖ್ಯೆ ಮಾದರಿ ರೈತರ ಸಮಗ್ರ ಮಾಹಿತಿಯುಳ್ಳ ಕಾಮನ್‌ ಫಾರ್ಮರ್‌ ರಿಜಿಸ್ಟ್ರೇಶನ್‌ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸುವುದು ಕಡ್ಡಾಯವಾಗಿದೆ. ಈ ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದಾಗ ರೈತರಿಗೆ ಒಂದು ನಂಬರ್‌ ನೀಡಲಾಗುತ್ತದೆ. ಕೃಷಿ ಸಂಬಂಧಿತ ಯಾವುದೇ ಇಲಾಖೆಯ ಸೌಲಭ್ಯ ಪಡೆಯಲು ಪ್ರತ್ಯೇಕ ಅರ್ಜಿ ಕೊಡಬೇಕಿಲ್ಲ, ಕೇವಲ ಅವರಿಗೆ ನೀಡುವ ರೈತರ ನಂಬರ್‌ ನೀಡಿದರೆ ಆನ್‌ಲೈನ್‌ನಲ್ಲಿ ದಾಖಲೆ ಪಡೆಯುತ್ತದೆ.
- ಡಾ.ಪಿ.ರಮೇಶಕುಮಾರ, ಜಂಟಿ ಕೃಷಿ ನಿರ್ದೇಶಕ

Trending videos

Back to Top