CONNECT WITH US  

ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ: ಕಾರ್ನಾಡ್‌ ಸಲಹೆ

ಬೆಂಗಳೂರು: ಮೈಸೂರು ಹುಲಿ ಟಿಪ್ಪೂ ಸುಲ್ತಾನ್‌ ಹುಟ್ಟಿದ ದಿನವನ್ನು ಟಿಪ್ಪು ಜಯಂತಿಯನ್ನಾಗಿ ಆಚರಿಸುವ ರಾಜ್ಯ ಸರಕಾರದ ನಿರ್ಧಾರಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ವಿಧಾನ ಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಮಂಗಳವಾರದಂದು ನಡೆದ ಟಿಪ್ಪು ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್‌ ಕಾರ್ನಾಡ್‌ ವಿವಾದಿತ ಹೇಳಿಕೆಯೊಂದನ್ನು ನೀಡುವ ಮೂಲಕ ಟಿಪ್ಪು ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ ಹೊಯ್ದಾಟಕ್ಕೆ ಇನ್ನಷ್ಟು ತುಪ್ಪ ಸುರಿಯುವ ಕೆಲಸವನ್ನು ಮಾಡಿದ್ದಾರೆ.

ಮುಖ್ಯಮಂತ್ರಿ ಸಹಿತ ಸಾಹಿತ್ಯ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದ ಈ ಸಮಾರಂಭದಲ್ಲಿ ಮಾತನಾಡಿದ ಕಾರ್ನಾಡ್‌ ಅವರು ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ವಿಮಾನ ನಿಲ್ದಾಣ ಎಂದು ಮರುನಾಮಕಾರಣ ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಸುದೀರ್ಘ‌ ವರ್ಷಗಳ ಸ್ವಾತಂತ್ರ್ಯ ಹೋರಾಟದಲ್ಲಿ ದೇಶದ ಹಲವೆಡೆಗಳಲ್ಲಿ ವಿವಿಧ ನಾಯಕರು ತಮ್ಮ ಛಾಪನ್ನು ಮೂಡಿಸಿದ್ದಾರೆ, ಆದರೆ ಕರ್ನಾಟಕ ಭಾಗದಿಂದ ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಏಕೈಕ ವೀರ ಟಿಪ್ಪು ಸುಲ್ತಾನ್‌, ಅವನನ್ನು ಬಿಟ್ಟರೆ ಈ ರೀತಿಯಾಗಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಹೆಸರು ಕರ್ನಾಟಕ ಭಾಗದಿಂದ ನಮಗೆ ಇತಿಹಾಸದಲ್ಲಿ ಕಾಣಸಿಗುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಕೆಂಪೇಗೌಡ ಸ್ವಾತಂತ್ರ್ಯ ಹೋರಾಟಗಾರನಲ್ಲ, ಆತ ಕೇವಲ ಬೆಂಗಳೂರು ನಗರದ ನಿರ್ಮಾತೃ. ಹಾಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದು ಸೂಕ್ತ ಎಂದು ನನ್ನ ಅಭಿಮತ ಎಂದವರು ಹೇಳಿದರು.

ನನ್ನ ಈ ಹೇಳಿಕೆ ವಿವಾದಕ್ಕೆ ಕಾರಣವಾಗಬಹುದು ಎಂದು ನನಗೆ ಅನ್ನಿಸುತ್ತಿದೆ ಆದರೂ ಸತ್ಯವನ್ನು ಹೇಳದಿದ್ದರೆ ನಾವು ಇತಿಹಾಸಕ್ಕೆ ಮತ್ತು ಟಿಪ್ಪೂ ಸುಲ್ತಾನ್‌ ಗೆ ನಾವು ಅನ್ಯಾಯ ಮಾಡಿದಂತೆ ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಕನ್ನಡ ಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರೂ ಭಾಗವಹಿಸಿದ್ದರು. ಕಾರ್ನಾಡ್‌ ಅವರ ಈ ಅಭಿಪ್ರಾಯಕ್ಕೆ ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.


Trending videos

Back to Top