CONNECT WITH US  

ಸಕ್ಕರೆ ಮಾರಾಟ ಮಾಡಿ ಬಾಕಿ ನೀಡಿ

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಮುಖ್ಯಮಂತ್ರಿ ಸೂಚನೆ

ಬೆಂಗಳೂರು: ದಾಸ್ತಾನು ಇರುವ ಸಕ್ಕರೆ ಮಾರಾಟ ಮಾಡಿ ರೈತರ ಬಾಕಿ ಹಣ ಪಾವತಿಸಿ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸೂಚಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಕಾರ್ಖಾನೆಗಳ ಬಾಕಿ ಪಾವತಿ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.

ನಿಮ್ಮ ಕಷ್ಟಗಳೇನೇ ಇದ್ದರೂ, ರೈತರ ಬಾಕಿ ಪಾವತಿಗೆ ತಕ್ಷಣ ಮುಂದಾಗಿ ಎಂದು ಹೇಳಿದರು. ಸಭೆ ಬಳಿಕ
ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕುಮಾರಸ್ವಾಮಿ, ಸಕ್ಕರೆ ಕಾರ್ಖಾನೆ ಮಾಲೀಕರಿಂದ ರೈತರಿಗೆ 1,045 ಕೋಟಿ
ರೂ. ಬಾಕಿ ಬರಬೇಕಿದೆ. ಈ ಬಾಕಿಯನ್ನು ತಕ್ಷಣ ಬಿಡುಗಡೆ ಮಾಡುವಂತೆ ಹಿಂದಿನ ಸಭೆಯಲ್ಲಿ ಸೂಚಿಸಿದ್ದೇನೆ ಎಂದರು.

ಕೇಂದ್ರ ಸರ್ಕಾರದ ಕೆಲವು ನಿಯಮಗಳಿಂದಾಗಿ ತಮ್ಮ ಬಳಿ ಸಕ್ಕರೆ ದಾಸ್ತಾನು ಇದ್ದರೂ ಅದನ್ನು ಮಾರಾಟ ಮಾಡಲು ಆಗುತ್ತಿಲ್ಲ ಎಂದು ಮಾಲೀಕರು ಸಮಸ್ಯೆ ಹೇಳಿಕೊಂಡಿದ್ದಾರೆ. ಕಾರ್ಖಾನೆ ಮಾಲೀಕರು ಮತ್ತು ರೈತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಬಾಕಿ ಪಾವತಿ ಆಗುವಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ.

7 ಸಹಕಾರ ಮತ್ತು 2 ಖಾಸಗಿ ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿವೆ. ಅದೇ ರೀತಿ ಸಕ್ಕರೆ ಕಾರ್ಖಾನೆಗಳಿಂದ ಸುಮಾರು 200 ಕೋಟಿ ರೂ. ವಿದ್ಯುತ್‌ ಬಿಲ್‌ ಬಾಕಿ ಬರಬೇಕಿದೆ. ದಾಸ್ತಾನು ಮಾರಾಟಕ್ಕೆ ಕೇಂದ್ರದ ನಿಯಮಗಳು ಅಡ್ಡಿಯಾಗುತ್ತಿವೆ ಎಂದು ಮಾಲೀಕರು ಹೇಳಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಅವರಿಗೆ ಭರವಸೆ ಕೊಟ್ಟಿದ್ದೇನೆಂದು ಮುಖ್ಯಮಂತ್ರಿ ಹೇಳಿದರು. ಸಭೆಯಲ್ಲಿ ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಸೇರಿ ಹಿರಿಯ ಅಧಿಕಾರಿಗಳು ಇದ್ದರು.


Trending videos

Back to Top