CONNECT WITH US  

ಮಾಜಿ ಸಂಸದೆ ರಮ್ಯಾ ಅಧಿಕಾರಕ್ಕೆ ಕತ್ತರಿ?

ಬೆಂಗಳೂರು: ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆಯಾಗಿರುವ ಮಾಜಿ ಸಂಸದೆ ರಮ್ಯಾ ಅಧಿಕಾರಕ್ಕೆ ಕತ್ತರಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.

ರಮ್ಯಾ ಅವರು ಅಧಿಕೃತವಾಗಿ ಪಕ್ಷದ ಸಾಮಾಜಿಕ ಜಾಲ ತಾಣದ ಮುಖ್ಯಸ್ಥೆಯಾಗಿದ್ದರೂ, ಅನಗತ್ಯವಾಗಿ ಟ್ವೀಟ್‌ ಮಾಡುವುದಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ ರಾಹುಲ್‌ ಗಾಂಧಿಯ ಟ್ವೀಟ್‌ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಯಿಂದ ಕೊಕ್‌ ನೀಡಿ ಆ ಜಾಗಕ್ಕೆ  ಕೇಂದ್ರದ ಸಚಿವೆ ಮಾರ್ಗರೇಟ್‌ ಆಳ್ವಾ ಪುತ್ರ ನಿಖೀಲ್‌ ಆಳ್ವಾಗೆ ವಹಿಸಲಾಗಿದೆ ಎನ್ನಲಾಗಿದೆ.

ಮಾಜಿ ಸಂಸದೆಯೂ ಆಗಿರುವ ರಮ್ಯಾ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟ್ವೀಟ್‌ ಮಾಡುವ ಭರದಲ್ಲಿ ಪಕ್ಷಕ್ಕೆ ಮುಜುಗರ ಉಂಟು ಮಾಡುವಂತೆ ಮಾಡಿದ್ದರು ಎನ್ನಲಾಗಿದೆ. ಯುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲ ತಾಣದಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು ಸಹ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಹೀಗಾಗಿ,  ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ರಮ್ಯಾ ಹೆಸರಿದ್ದರೂ ಅವರು ಪ್ರಚಾರ ಮಾಡಿದರೆ ಪಕ್ಷಕ್ಕೆ ಅನುಕೂಲಕ್ಕಿಂತ ನಷ್ಟವೇ ಹೆಚ್ಚಾಗುವ ಸಾಧ್ಯತೆ ಇದೆ ಎಂದು ರಾಜ್ಯ ಕಾಂಗ್ರೆಸ್‌ ನಾಯಕರು ಪ್ರಚಾರದಿಂದ ದೂರ ಇಟ್ಟಿದ್ದರು.

ಈಗ ರಮ್ಯಾ ಸದ್ಯಕ್ಕೆ ರಾಹುಲ್‌ ಗಾಂಧಿಯವರ ಟ್ವೀಟ್‌ಗಳನ್ನು ರಿಟ್ವೀಟ್‌ ಮಾಡುವ ಮೂಲಕ ಸೋಷಿಯಲ್‌  ಮೀಡಿಯಾ ಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

Trending videos

Back to Top