CONNECT WITH US  

ಅನಕ್ಷರಸ್ಥರ ಅಕ್ಷರಾಭ್ಯಾಸಕ್ಕಾಗಿ ಹೊಸ ಯೋಜನೆ

ನಾಳೆ ಲಿಕ್ನಾ-ಪಡ್ನಾ ಘೋಷಣೆ ಸಾಧ್ಯತೆ ;ವಿಭಿನ್ನ ರೀತಿಯಲ್ಲಿ ಅನುಷ್ಠಾನಕ್ಕೆ ಚಿಂತನೆ

ಸಾಂದರ್ಭಿಕ ಚಿತ್ರ

ಬೆಂಗಳೂರು : ಸಾಕ್ಷರ ಭಾರತ್‌ ಯೋಜನೆ ಮಾರ್ಚ್‌ ತಿಂಗಳಿಗೆ ಅಂತ್ಯಗೊಂಡಿದ್ದು, ಸದ್ಯ ಅನಕ್ಷರಸ್ಥರ ಶಿಕ್ಷಣಕ್ಕೆ ಯಾವುದೇ ಯೋಜನೆ ಇಲ್ಲ. ಸೆಪ್ಟೆಂಬರ್‌ ಎರಡನೇ ವಾರದಲ್ಲಿ "ಲಿಕ್ನಾ-ಪಡ್ನಾ' ಹೊಸ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.

2012-13ನೇ ಸಾಲಿನಲ್ಲಿ ಸಾಕ್ಷರ ಭಾರತ್‌ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು. 2011ರ ಜನಗತಿಯ ಆಧಾರದಲ್ಲಿ ರಾಜ್ಯದಲ್ಲಿರುವ ಅನಕ್ಷರಸ್ಥರಿಗೆ ಸಾಕ್ಷರ ಭಾರತ್‌ ಯೋಜನೆಯಡಿ ಶಿಕ್ಷಣ ನೀಡಲಾಗಿತ್ತು. 2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿ 80 ಲಕ್ಷ ಅನಕ್ಷರಸ್ಥರು ಇರುವುದು ದೃಢಪಟ್ಟಿತ್ತು. ಈ ಆಧಾರದಲ್ಲಿ 2012-13ನೇ ಸಾಲಿನಿಂದ ಸತತವಾಗಿ 2017-18ನೇ ಮಾರ್ಚ್‌ ತನಕ ರಾಜ್ಯದಲ್ಲಿ ಸಾಕ್ಷರ ಭಾರತ್‌ ಯೋಜನೆ ಸಮರ್ಪಕವಾಗಿ ಅನುಷ್ಠಾನ ಮಾಡಿದೆ.

80 ಲಕ್ಷ ಅನಕ್ಷರಸ್ಥರಲ್ಲಿ ಸುಮಾರು 50 ಲಕ್ಷ ಅನಕ್ಷರಸ್ಥರಿಗೆ ಅಕ್ಷರಾಭ್ಯಾಸ ಮಾಡಿಸುವ ಯೋಜನೆ ಲೋಕ ಶಿಕ್ಷಣ ನಿರ್ದೇಶನಾಲಯ ಹಾಕಿಕೊಂಡಿತ್ತು. 2018ರ ಮಾರ್ಚ್‌ ಅಂತ್ಯಕ್ಕೆ ಸಾಕ್ಷರ ಭಾರತ್‌ ಯೋಜನೆಯಡಿ 29 ಲಕ್ಷ ಮಂದಿಗೆ ಅ, ಆ, ಇ, ಈ, ಪದ, ವಾಕ್ಯ ರಚನೆ ಕಲಿಸುವಲ್ಲಿ ಯಶಸ್ವಿಯಾಗಿದೆ.

ಹೊಸ ಕಾರ್ಯಕ್ರಮ :
ಸೆ.8ರಂದು ವಿಶ್ವ ಸಾಕ್ಷರತ ದಿನಾಚರಣೆ ನಡೆಯಲಿದೆ. ಇದೇ ದಿನದಂದು ಕೇಂದ್ರ ಸರ್ಕಾರ ಎಲ್ಲ ರಾಜ್ಯದ ಲೋಕಶಿಕ್ಷಣ ನಿರ್ದೇಶನಾಲಯದ ಉನ್ನತ ಅಧಿಕಾರಿಗಳ ಸಭೆ ಕರೆದಿದೆ. ಅಂದು ಲಿಕ್ನಾ-ಪಡ್ನಾ ಹೊಸ ಯೋಜನೆ ಘೋಷಿಸುವ ಸಾಧ್ಯತೆಯೂ ಇದೆ ಎಂದು ಕರ್ನಾಟಕ ಲೋಕ ಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು "ಉದಯವಾಣಿ'ಗೆ ಮಾಹಿತಿ ನೀಡಿದ್ದಾರೆ.

ಲಿಕ್ನಾ-ಪಡ್ನಾ ಕಾರ್ಯಕ್ರಮದ ರೂಪುರೇಷೆ ಇನ್ನಷ್ಟೇ ಸಿದ್ಧವಾಗಬೇಕಿದೆ. ಸಾಕ್ಷರ ಭಾರತ್‌ ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಅನುಷ್ಠಾನ ಮಾಡುವ ಸಾಧ್ಯತೆ ಇದೆ. ಗ್ರಾಮೀಣ ಭಾಗದಲ್ಲಿ ಇರುವ ಸ್ವಸಹಾಯ ಗುಂಪುಗಳನ್ನು  ಹಾಗೂ ಎನ್‌ಜಿಒಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಯೋಜನೆಯೂ ಇದೆ ಎಂದು ವಿವರಿಸಿದರು.

ರಾಜ್ಯದ ಸಾಧನೆ :
ಲೋಕಶಿಕ್ಷಣ ನಿರ್ದೇಶನಾಲಯವು ಸಾಕ್ಷರ ಭಾರತ್‌ ಯೋಜನೆಯಡಿ 2012-13ನೇ ಸಾಲಿನಲ್ಲಿ 14,14,320 ಗುರಿ ಹೊಂದಿದ್ದು, 5,53,309ರಷ್ಟು ಸಾಧನೆ ಮಾಡಿತ್ತು. 2013-14ರಲ್ಲಿ 8,31,600 ಗುರಿಯಲ್ಲಿ 4,86,234 ಸಾಧನೆಯಾಗಿತ್ತು, 2014-15ರಲ್ಲಿ 5,42,000 ಗುರಿಯಲ್ಲಿ 1,21,257 ದಾಖಲೆ ಮಾಡಿತ್ತು. 2015-16ರಲ್ಲಿ 3,37,729 ಗುರಿ ಹೊಂದಿದ್ದು, 1,62,243 ಸಾಧನೆ, 2016-17ರಲ್ಲಿ 11,86,381 ಗುರಿಯಲ್ಲಿ 9,94,919 ಸಾಧನೆ ಹಾಗೂ 2017-18ರಲ್ಲಿ 6 ಲಕ್ಷ ಗುರಿ ಹೊಂದಿದ್ದು, 6 ಲಕ್ಷ ಸಾಧನೆ ಮಾಡಿದೆ.

ಒಟ್ಟಾರೆ ಆರು ವರ್ಷದಲ್ಲಿ 49,12,030 ಗುರಿ ಹೊಂದಿದ್ದು, 29,17,962 ರಷ್ಟು ಸಾಧನೆ ಮಾಡಿದೆ. ಇದರ ಜತೆಗೆ ಡಾ.ನಂಜುಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕುಗಳಲ್ಲಿ ಸಾಕ್ಷರತ ಕಾರ್ಯಕ್ರಮ, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಹೀಗೆ ಹಲವು ಕಾರ್ಯಕ್ರಮ ಸಾಕ್ಷರತೆಗಾಗಿ ನಡೆಸಿ, ಉತ್ತಮ ಸಾಧನೆ ಮಾಡಿದೆ.

ಹೊಸ ಸಮೀಕ್ಷೆ:
ಲಿಕ್ನಾ- ಪಡ್ನಾ ಕಾರ್ಯಕ್ರಮ ಘೋಷಣೆಯಾಗುತ್ತಿದ್ದಂತೆ ರಾಜ್ಯದಲ್ಲಿ ಅನಕ್ಷರಸ್ಥರು ಎಷ್ಟಿದ್ದಾರೆ ಎಂಬುದರ ಹೊಸ ಸಮೀಕ್ಷೆ ನಡೆಯಲಿದೆ. ಕಾರ್ಯಕ್ರಮ ಅನುಷ್ಠಾನಕ್ಕೂ ಪೂರ್ವದಲ್ಲಿ ಅನಕ್ಷರಸ್ಥರು ಎಷ್ಟಿದ್ದಾರೆ ಎಂಬುದರ ಸ್ಪಷ್ಟತೆ ನಿರ್ದೇಶನಾಲಕ್ಕೆ ಇರಬೇಕಾಗುತ್ತದೆ. ಇದರ ಆಧಾರದಲ್ಲಿ ಅನುದಾನವೂ ಬರುತ್ತದೆ. ಹೊಸ ಕಾರ್ಯಕ್ರಮ ಘೋಷಣೆಯಾದ ಮೊದಲ ತಿಂಗಳಲ್ಲೇ ಹೊಸ ಸಮೀಕ್ಷೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಾಕ್ಷರತೆಗಾಗಿ ಜಿಪಂ ವತಿಯಿಂದ ಕೆಲವು ಕಾರ್ಯಕ್ರಮ ನಡೆಯುತ್ತಿದೆ. ಆದರೆ, ಅದು ಅತ್ಯಂತ ಕಡಿಮೆ ಸಂಖ್ಯೆಯಲ್ಲಿದೆ. 30 ಜಿಲ್ಲೆಯಲ್ಲಿ ಸುಮಾರು 70ರಿಂದ 80 ಸಾವಿರ ಜನರು ಇದರ ಅನುಕೂಲ ಪಡೆಯುತ್ತಿರಬಹುದು. ನಿರ್ದೇಶನಾಲಯದ ಸಾಕ್ಷರ ಭಾರತ್‌ ಕಾರ್ಯಕ್ರಮ 2018ರ ಮಾರ್ಚ್‌ಗೆ ಕೊನೆಯಾಗಿದೆ. ಸೆ.8ರ ನಂತರ ಲಿಕ್ನಾ-ಪಡ್ನಾ ಕಾರ್ಯಕ್ರಮ ಘೋಷಣೆಯಾಗುವ ಸಾಧ್ಯತೆ ಇದೆ.
- ಆರ್‌.ಎಸ್‌.ಪೆದ್ದಪ್ಪಯ್ಯ, ನಿರ್ದೇಶಕ, ಲೋಕಶಿಕ್ಷಣ ನಿರ್ದೇಶನಾಲಯ.

- ರಾಜು ಖಾರ್ವಿ ಕೊಡೇರಿ

Trending videos

Back to Top