CONNECT WITH US  

ಸಿದ್ದು ಅನುಪಸ್ಥಿತಿಯಲ್ಲಿ ಉಪಾಹಾರ ಪಾಲಿಟಿಕ್ಸ್‌​​​​​​​

ನಾಯಕತ್ವದ ಅಸ್ತಿತ್ವಕ್ಕಾಗಿ ಸಚಿವ, ಶಾಸಕರಿಗೆ ಉಪಹಾರ ಕೂಟ?

ಬೆಂಗಳೂರು: ಪಕ್ಷ ಹಾಗೂ ಸರ್ಕಾರದಲ್ಲಿ ನಾಯಕತ್ವದ ಅಸ್ತಿತ್ವಕ್ಕಾಗಿ ಉಪ ಮುಖ್ಯಮಂತ್ರಿ ಪರಮೇಶ್ವರ್‌ ಸಚಿವರು ಹಾಗೂ ಶಾಸಕರಿಗೆ ಉಪಾಹಾರ ಪಾಲಿಟಿಕ್ಸ್‌ ಆರಂಭಿಸಿದ್ದಾರೆ.

ಪರಮೇಶ್ವರ್‌ ಶುಕ್ರವಾರ ಪಕ್ಷದ ಸಚಿವರಿಗೆ ವಿಶೇಷ ಉಪಹಾರ ಕೂಟ ಏರ್ಪಡಿಸಿ ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಪರೋಕ್ಷವಾಗಿ ಸಾಬೀತು ಪಡಿಸುವ ಪ್ರಯತ್ನ ನಡೆಸಿದ್ದಾರೆ. ಇದರ ಬೆನ್ನಲ್ಲೇ ಶನಿವಾರ ಪಕ್ಷದ ಎಲ್ಲ ಶಾಸಕರಿಗೂ ಉಪಾಹಾರ ಕೂಟ ಏರ್ಪಡಿಸಿ ಎಲ್ಲರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾದ ನಂತರವೂ ಪರಮೇಶ್ವರ್‌ ಪಕ್ಷದಲ್ಲಿ ತಮ್ಮ ಹಿಡಿತ ಸಾಧಿಸಲು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿಯೂ ಮುಂದುವರೆದಿದ್ದರು. ಕೆಪಿಸಿಸಿ ಅಧ್ಯಕ್ಷ ಸ್ಥಾನ ತಮ್ಮ ಕೈತಪ್ಪದಂತೆ ನೋಡಿಕೊಳ್ಳಲು ಕೆಲವು ಸಂಸದರ ಮೂಲಕ ಪ್ರಯತ್ನಿಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.

ಅಧ್ಯಕ್ಷ ಸ್ಥಾನ ಕಳೆದುಕೊಂಡ ಮೇಲೆ ಪರಮೇಶ್ವರ್‌ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ತಮ್ಮ ಇಲಾಖೆಗಳ ಕಡೆಗೆ ಹೆಚ್ಚಿನ ಗಮನ ಹರಿಸಿದ್ದರು. ಅಲ್ಲದೇ ಪಕ್ಷದ ಶಾಸಕರು ಮತ್ತು ಕಾರ್ಯಕರ್ತರಿಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಅಲ್ಲದೇ ಹಾಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಗೂ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಕೂಡ ಪರಮೇಶ್ವರ್‌ ಅವರನ್ನು ಯಾವುದಕ್ಕೂ ಪರಿಗಣಿಸದೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಚಟುವಟಿಕೆಗಳನ್ನು ಮಾಡಿಕೊಂಡು ಹೋಗುತ್ತಿರುವುದು ಪರಮೇಶ್ವರ್‌ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎನ್ನಲಾಗಿದೆ.

ಇತ್ತೀಚೆಗೆ ಲೋಕಸಭೆ ಚುನಾವಣೆಗೆ ಪೂರ್ವಭಾವಿ ಸಿದ್ದತೆ ಸಭೆಗಳಲ್ಲಿ ಪರಮೇಶ್ವರ್‌ ಹಾಜರಾಗದಿದ್ದರೂ ಪಕ್ಷದ ನಾಯಕರು ತಲೆ ಕೆಡೆಸಿಕೊಳ್ಳದೇ ಸಭೆಗಳನ್ನು ನಿರಂತರ ಮುಂದುವರೆಸಿದ್ದರು. ಅಲ್ಲದೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಸಿದ್ದರಾಮಯ್ಯ, ದಿನೇಶ್‌ ಗುಂಡೂರಾವ್‌ ಹಾಗೂ ಈಶ್ವರ್‌ ಖಂಡ್ರೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡಿದ್ದರು. ಆಗಲೂ ಪರಮೇಶ್ವರ್‌ ಕೊರಟಗೆರೆ ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲಿಯೂ ಪ್ರಚಾರಕ್ಕೆ ತೆರಳದೆ ಅಂತರ ಕಾಯ್ದುಕೊಂಡಿದ್ದರು.

ಇದು ಸಹಜವಾಗಿ ಸಚಿವರು ಹಾಗೂ ಶಾಸಕರು ಯಾವುದಕ್ಕೂ ಪರಮೇಶ್ವರ್‌ ಅವರನ್ನು ನೆಚ್ಚಿಕೊಳ್ಳದೇ ಸಿದ್ದರಾಮಯ್ಯ ಬಳಿ ತೆರಳಿ ತಮ್ಮ ಮನವಿಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸುವಂತೆ ಮಾಡಿತ್ತು.  ಹೀಗಾಗಿ ಸರ್ಕಾರದ ಮಟ್ಟದಲ್ಲಿ ಪರಮೇಶ್ವರ್‌ ನಾಯಕತ್ವ ಮಂಕಾದಂತೆ ಕಂಡು ಬಂದಿದ್ದು, ಅಧಿಕಾರ ಇರುವಾಗಲೇ ತಾವು ಕಳೆದುಹೋಗುತ್ತಿದ್ದೇನೆ ಎಂಬ ಭಾವನೆಯಿಂದ ಸಚಿವರು ಮತ್ತು ಶಾಸಕರ ವಿಶ್ವಾಸ ಗಳಿಸಲು ಉಪಾಹಾರ ಕೂಟದ ಮೂಲಕ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವಾಗಲೇ ಪರಮೇಶ್ವರ್‌ ಉಪಾಹಾರ ಕೂಟದ ಮೂಲಕ ಸಚಿವರು ಮತ್ತು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿರುವುದು ಕಾಂಗ್ರೆಸ್‌ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಶುಕ್ರವಾರ ಕರೆದಿದ್ದ ಸಚಿವರ ಉಪಾಹಾರ ಕೂಟದ ಸಭೆಗೆ ಸಚಿವರಾದ ಡಿ.ಕೆ.ಶಿವಕುಮಾರ್‌, ಕೆ.ಜೆ.ಜಾರ್ಜ್‌, ಶಿವಾನಂದ ಪಾಟೀಲ್‌, ಪುಟ್ಟರಂಗಶೆಟ್ಟಿ, ಜಮೀರ್‌ ಅಹಮದ್‌, ಕೃಷ್ಣಬೈರೇಗೌಡ, ವೆಂಕಟರಮಣಪ್ಪ, ಪ್ರಿಯಾಂಕ್‌ ಖರ್ಗೆ, ರಾಜಶೇಖರ್‌ ಪಾಟೀಲ್‌ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹಾಜರಾಗಿದ್ದರು. ಸಚಿವರಾದ ಆರ್‌.ವಿ.ದೇಶಪಾಂಡೆ, ಶಿವಶಂಕರ ರೆಡ್ಡಿ, ರಮೇಶ್‌ ಜಾರಕಿಹೊಳಿ, ಜಯಮಾಲಾ ಹಾಗೂ ಯು.ಟಿ. ಖಾದರ್‌ ವಯಕ್ತಿಕ ಕಾರಣಗಳಿಗೆ ಗೈರು ಹಾಜರಾಗಿದ್ದರು.

ಸ್ಥಳೀಯ ಸಂಸ್ಥೆಯ ಚುನಾವಣೆಯ ನಂತರ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದರಿಂದ ಆ ಬಗ್ಗೆ ಚರ್ಚಿಸಲು ಉಪಹಾರಕೂಟ ಏರ್ಪಡಿಸಿದ್ದೆ. ಅವಕಾಶ ಇರುವಲ್ಲಿ ಜೆಡಿಎಸ್‌ ಜೊತೆ ಸ್ಥಳೀಯ ಮಟ್ಟದಲ್ಲಿಯೇ ಹೊಂದಾಣಿಕೆ ಮಾಡಿಕೊಳ್ಳುವ ಕುರಿತು ಸಚಿವರ ಜೊತೆ ಚರ್ಚೆ ಮಾಡಿದ್ದೇವೆ. ಲೋಕಸಭೆ ಚುನಾವಣೆ ಸಿದ್ದತೆ ಹಾಗೂ ಬರಗಾಲ ಪರಿಸ್ಥಿತಿಯ ಬಗ್ಗೆಯೂ ಚರ್ಚೆ ಮಾಡಿದ್ದೇವೆ.
- ಡಾ.ಜಿ.ಪರಮೇಶ್ವರ್‌, ಉಪ ಮುಖ್ಯಮಂತ್ರಿ

Trending videos

Back to Top