CONNECT WITH US  

ಸಚಿವ ಶಿವಕುಮಾರ್‌ ವಿರುದ್ಧ ಇಡಿ ಎಫ್ಐಆರ್‌?

ಬೆಂಗಳೂರು: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮೇಲೆ ನಡೆದ ಐಟಿ ದಾಳಿ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸದ್ಯದಲ್ಲೇ ಎಫ್ಐಆರ್‌ ದಾಖಲಿಸಿಕೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣ ಸಂಬಂಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದು, ದಾಖಲೆಗಳ ಪರಿಶೀಲನೆ ಕೂಡ ನಡೆಯುತ್ತಿದೆ. ಒಂದು ವೇಳೆ ಸೂಕ್ತ ಸಾಕ್ಷ್ಯಾಧಾರಗಳು ಪತ್ತೆಯಾದರೆ ಎಫ್ಐಆರ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುವುದು ಎಂದು ಜಾರಿ ನಿರ್ದೇಶನಾಲಯದ ಮೂಲಗಳು ತಿಳಿಸಿವೆ.

2017ರಲ್ಲಿ ಸಚಿವ ಶಿವಕುಮಾರ್‌ ಹಾಗೂ ಇವರ ಆಪ್ತರ ಮನೆಗಳು ಮತ್ತು ಕಚೇರಿಗಳು ಸೇರಿ 60 ಕಡೆಗಳಲ್ಲಿ  ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಇದೇ ವೇಳೆ ದೆಹಲಿಯಲ್ಲಿರುವ ಶಿವಕುಮಾರ್‌ಗೆ ಸೇರಿದ ಫ್ಲಾಟ್‌ಗಳ ಮೇಲೂ ದಾಳಿ ನಡೆಸಿದ್ದರು. ಈ ವೇಳೆ 8.59 ಕೋಟಿ ರೂ. ಹಣ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿಚಾರಣೆಗೆ ಹಾಜರಾದ ಸಚಿವರು ಹಣದ ಮೂಲದ ಬಗ್ಗೆ ತಪ್ಪು ಮಾಹಿತಿ ನೀಡಿದ್ದರು.

ಬಳಿಕ ಮನೆಗಳಲ್ಲಿ ಸಿಕ್ಕ ದಾಖಲೆಗಳು ಹಾಗೂ ಸಚಿವರ ಹೇಳಿಕೆಗೂ ವ್ಯತ್ಯಾಸ ಕಂಡ ಬಂದ ಬೆನ್ನಲ್ಲೇ ಐಟಿ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಶಿವಕುಮಾರ್‌ ತಮ್ಮ ಆಪ್ತರ ಮೂಲಕ ಹವಾಲ ಹಣವನ್ನು ಪಕ್ಷಕ್ಕೆ ನೀಡುತ್ತಿದ್ದಾರೆ. ಜತೆಗೆ ಸುಳ್ಳು ಮಾಹಿತಿ ನೀಡಿದ್ದಾರೆ. ವಿದೇಶದಲ್ಲಿಯೂ ಕಪ್ಪು ಹಣ ಹೂಡಿಕೆ ಮಾಡಿದ್ದಾರೆ ಎಂದು ಗಂಭೀರ ಆರೋಪಿಸಿ ಪ್ರಕರಣ ದಾಖಲಿಸಿದ್ದರು. ಇದರ ಬೆನ್ನಲ್ಲೇ ಶಿವಕುಮಾರ್‌ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಐಟಿ ಅಧಿಕಾರಿಗಳು ಸಂಪೂರ್ಣ ಮಾಹಿತಿ ರವಾನೆ ಮಾಡಿದ್ದರು.

Trending videos

Back to Top