CONNECT WITH US  

ಸಿಎಂ "ಮಿತವ್ಯಯ ಮಂತ್ರ'ಕ್ಕೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯ

116 ಹೊಸ ಕಾರುಗಳ ಖರೀದಿಗೆ ಇಲಾಖೆ ಆದೇಶ; ಕನಿಷ್ಠ 10 ಕೋಟಿ ರೂಪಾಯಿ ವೆಚ್ಚ ಅಂದಾಜು

ಸಾಂದರ್ಭಿಕ ಚಿತ್ರ.

ಬೆಂಗಳೂರು: ರೈತರ ಸಾಲಮನ್ನಾ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಲ್ಲಿ ಖರ್ಚು ವೆಚ್ಚಕ್ಕೆ ಕಡಿವಾಣ ಹಾಕಲು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದರೂ, ಅವರ ಮೌಖೀಕ ಆದೇಶವನ್ನು ಮೀರಿ ಈಗ ಸಾರ್ವಜನಿಕ ಶಿಕ್ಷಣ ಇಲಾಖೆ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕಾರುಗಳನ್ನು ಕೊಳ್ಳಲು ಮುಂದಾಗಿರುವುದು ಬೆಳಕಿಗೆ ಬಂದಿದೆ.

ಕುಮಾರಸ್ವಾಮಿಯವರ ಮಿತವ್ಯಯದ ಮಂತ್ರಕ್ಕೆ ನಿರ್ಲಕ್ಷ್ಯ ತೋರಿರುವ ಶಿಕ್ಷಣ ಇಲಾಖೆ 116 ಹೊಸ ಕಾರುಗಳನ್ನು ಖರೀದಿಸಲು ನಿರ್ಧರಿಸಿದೆ.  ಈಗಾಗಲೇ ಮೊದಲ ಹಂತದಲ್ಲಿ 28 ಕಾರುಗಳನ್ನು ಖರೀದಿಸಲು ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ವಾಹನ ಸರಬರಾಜು ಮಾಡುವ ಅಧಿಕೃತ ಡೀಲರ್‌ಗಳಿಂದ ಪಡೆಯಲು ಆದೇಶಿಸಲಾಗಿದೆ.

ಹೊಸ ಕಾರು ಖರೀದಿಗೆ ಕನಿಷ್ಠ 10 ಕೋಟಿ ವೆಚ್ಚವಾಗುತ್ತದೆ ಎಂಬ ಅಂದಾಜು ಮಾಡಲಾಗಿದೆ. ಈಗಾಗಲೇ ಪ್ರತಿಯೊಂದಕ್ಕೂ ಹಣ ಹೊಂದಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಆರ್ಥಿಕ ಲೆಕ್ಕಾಚಾರ ಹಾಕುತ್ತಿದ್ದರೂ, ಶಿಕ್ಷಣ ಇಲಾಖೆಯ ಅಧಿಕಾರಿಗಳು 3 ವರ್ಷಗಳ ಹಿಂದಿನ ಬೇಡಿಕೆಗೆ ಈಗ ದಿಢೀರ್‌ ಎಂದು ಹೊಸ ಕಾರು ಖರೀದಿಗೆ ಒಪ್ಪಿಗೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಒಂದು ಕಾರು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಜಂಟಿ ನಿರ್ದೇಶಕರ ಕಚೇರಿ ಬೆಳಗಾವಿ, ಹತ್ತು ಕಾರುಗಳು ಬೆಳಗಾವಿ, ಉತ್ತರ ಕನ್ನಡ, ಶಿರಸಿ ಶೈಕ್ಷಣಿಕ ಜಿಲ್ಲೆ, ಹಾವೇರಿ, ಬಾಗಲಕೋಟೆ, ಧಾರವಾಡ, ಗದಗ ಹಾಗೂ ವಿಜಯಪುರ ಜಿಲ್ಲೆಗಳ ಉಪ ನಿರ್ದೇಶಕರ ಕಚೇರಿಗಳಿಗೆ ಹಾಗೂ ಖಾನಾಪುರ, ಚಿಕ್ಕೋಡಿ, ಅಂಕೋಲಾ, ಹಳಿಯಾಳ, ಕುಂದಗೋಳ, ಬಸವನಬಾಗೇವಾಡಿ, ಇಂಡಿ, ರೋಣ, ಶಿರಹಟ್ಟಿ, ಬಾಗಲಕೋಟೆ ಸೇರಿ 17 ಕಾರುಗಳನ್ನು ವಿವಿಧ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಿಗೆ ನೀಡಲು ಆದೇಶಿಸಲಾಗಿದೆ.

2ನೇ ಹಂತದಲ್ಲಿ ಉಳಿದ ಕಾರುಗಳನ್ನು ಖರೀದಿಸಲು ಇಲಾಖೆ ಆಲೋಚನೆ ಮಾಡಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಅನೇಕ ಕಚೇರಿಗಳಲ್ಲಿ ಹಳೆಯ ಕಾರುಗಳನ್ನು ಅಧಿಕಾರಿಗಳು ದುರಸ್ತಿ ಮಾಡಿಸದೇ ಬಾಡಿಗೆ ಕಾರುಗಳನ್ನು ಬಳಕೆ ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ. ಬಾಡಿಗೆ ಕಾರು ಬಳಕೆ ಮಾಡುತ್ತಿರುವುದರಿಂದ ಇಲಾಖೆಯ ವಾಹನ ಚಾಲಕರು ಉದ್ಯೋಗವಿಲ್ಲದೇ ಇರುವಂತಾಗಿದೆ. ಇದರಿಂದ ಇಲಾಖೆಗೆ ನಷ್ಟವಾಗುತ್ತಿದೆ ಎಂಬ ವಾದ ಸರ್ಕಾರಿ ಅಧಿಕಾರಿಗಳದ್ದು.

ಆದರೆ, ಸಿಎಂ ಕುಮಾರಸ್ವಾಮಿ ಸಾಲಮನ್ನಾ ಮಾಡಿರುವ ಕಾರಣದಿಂದ ತಮ್ಮ ಇಲಾಖೆ ಸೇರಿ ಸರ್ಕಾರದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಿರುವುದಾಗಿ ಮೇಲಿಂದ ಮೇಲೆ ಹೇಳುತ್ತಿದ್ದರೂ, ಅವರ ಗಮನಕ್ಕೂ ಬಾರದೇ ಸರ್ಕಾರದ ಮಟ್ಟದಲ್ಲಿ ಅನೇಕ ರೀತಿಯ ದುಂದು ವೆಚ್ಚ ನಡೆಯುತ್ತಿದೆ ಎಂಬ ಆರೋಪವೂ ಇದೆ.

ಹಿಂದಿನ ಸಿದ್ದರಾಮಯ್ಯ ಸರ್ಕಾರದ ಯೋಜನೆಗಳಿಗೆ ಕತ್ತರಿ ಹಾಕುವ ಮೂಲಕ ಸಾಲ ಮನ್ನಾಕ್ಕೆ ಹೊಂದಾಣಿಕೆ ಮಾಡಿಕೊಳ್ಳುವ ಲೆಕ್ಕಾಚಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಕುಮಾರಸ್ವಾಮಿ ಎದುರಿಸಿದ್ದರು. ಹೊಸ ಸರ್ಕಾರದಲ್ಲಿ ನೂತನ ಸಚಿವರು ಹೊಸ ಕಾರುಗಳ  ಖರೀದಿಗೆ ಬೇಡಿಕೆ ಇಟ್ಟಾಗ ಮುಖ್ಯ ಕಾರ್ಯದರ್ಶಿಯಾಗಿದ್ದ ರತ್ನಪ್ರಭಾ ಬ್ರೇಕ್‌ ಹಾಕಿ ಯಾವುದೇ ಹೊಸ ಕಾರು ಖರೀದಿಗೆ ಅವಕಾಶವಿಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿದ್ದರು.

ಇದರ ನಡುವೆ ಸಮ್ಮಿಶ್ರ ಸರ್ಕಾರದಲ್ಲಿ ಹತ್ತಕ್ಕೂ ಹೆಚ್ಚು ಸಚಿವರು ವಿಧಾನಸೌಧದಲ್ಲಿರುವ ತಮ್ಮ ಕೊಠಡಿಗಳಿಗೆ ಹೊಸ ಪಿಠೊಪಕರಣಗಳು ಬೇಕು ಎಂದು ಬೇಡಿಕೆ ಇಟ್ಟಿದ್ದು, ಸದ್ದಿಲ್ಲದೇ ಹೊಸ ಪೀಠೊಪಕರಣಗಳ ಖರೀದಿ ಮಾಡಿಸಿ ಸಚಿವರ ಕೊಠಡಿಗಳಿಗೆ ನೀಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು.

ಚುನಾವಣೆಗೂ ಮುಂಚೆಯೇ ಕಾರು ಖರೀದಿಸಲು ತೀರ್ಮಾನ ಮಾಡಲಾಗಿತ್ತು. ಈಗ ಕಾರು ಪಡೆದುಕೊಳ್ಳಲು ಆದೇಶ ಮಾಡಲಾಗಿದೆ. ಅಲ್ಲದೇ ಇಲಾಖೆಗೆ ಬಹಳ ವರ್ಷಗಳಿಂದ ಕಾರು ಖರೀದಿ ಮಾಡಿರಲಿಲ್ಲ. ಹೀಗಾಗಿ ಅನುಮತಿ ಪಡೆದುಕೊಂಡು  ಖರೀದಿ ಮಾಡಲಾಗಿದೆ. ಸರ್ಕಾರದ ಮಿತವ್ಯಯದ ನಿಯಮ ಅನ್ವಯ ಆಗುವುದಿಲ್ಲ.
- ಡಾ.ಪಿ.ಸಿ. ಜಾಫ‌ರ್‌, ಆಯುಕ್ತರು, ಸಾರ್ವಜನಿಕ ಶಿಕ್ಷಣ ಇಲಾಖೆ.

- ಶಂಕರ ಪಾಗೋಜಿ


Trending videos

Back to Top