CONNECT WITH US  

ರಾಜ್ಯದಲ್ಲಿ ಪ್ರವಾಹಕ್ಕಿಂತ ಬರದಿಂದಲೇ ಹೆಚ್ಚು ನಷ್ಟ

3,705.87 ಕೋಟಿ ರೂ. ನೆರೆ ಹಾನಿ;8,000 ಕೋಟಿ ರೂ. ಬರ ಹಾನಿ ;ಪರಿಹಾರಕ್ಕಾಗಿ ಮೋದಿಗೆ ಮನವಿ

ಸಾಂದರ್ಭಿಕ ಚಿತ್ರ.

ಬೆಂಗಳೂರು: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಕೊಡಗು ಸೇರಿದಂತೆ ಮಲೆನಾಡು ಮತ್ತು ಕರ್ನಾಟಕದಲ್ಲಿ ಉಂಟಾಗಿದ್ದ ಪ್ರವಾಹದಿಂದ ಆಗಿರುವ ಹಾನಿಗಿಂತ ದುಪ್ಪಟ್ಟಿಗಿಂತಲೂ ಹೆಚ್ಚು ನಷ್ಟ ರಾಜ್ಯದ 12 ಜಿಲ್ಲೆಗಳಲ್ಲಿ ಸದ್ದಿಲ್ಲದೆ ಆವರಿಸಿದ ಬರಗಾಲದಿಂದ ಉಂಟಾಗಿದೆ.

ರಾಜ್ಯ ಸರ್ಕಾರದ ಲೆಕ್ಕಾಚಾರದ ಪ್ರಕಾರ ಕೊಡಗು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪ್ರವಾಹದಿಂದ 3,705.87 ಕೋಟಿ ರೂ. ನಷ್ಟವಾಗಿದ್ದರೆ, ಬರಗಾಲದಿಂದಾಗಿ 89 ತಾಲೂಕುಗಳಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಒಣಗಿ 8,000 ಕೋಟಿ ರೂ.ಗಿಂತಲೂ ಅಧಿಕ ನಷ್ಟವಾಗಿದೆ. ಪ್ರಕೃತಿ ವಿಕೋಪ ಪರಿಹಾರ ಕೋರಿ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ ಸಲ್ಲಿಸಲಾಗಿರುವ ಮನವಿಯಲ್ಲಿ ಈ ಮಾಹಿತಿ ನೀಡಲಾಗಿದೆ.

ಭಾರೀ ಪ್ರವಾಹದಿಂದಾಗಿ ಕೊಡಗು ಸೇರಿದಂತೆ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆ ಮತ್ತು ಕಾಫಿ ಪ್ಲಾಂಟೇಷನ್‌ ಹಾನಿಯಿಂದ 1,490.48 ಕೋಟಿ ರೂ., ಮನೆ, ರಸ್ತೆ, ಸೇತುವೆ, ಸರ್ಕಾರಿ ಕಟ್ಟಡ, ಕೆರೆಗಳ ಹಾನಿಯಿಂದ 1827.99 ಕೋಟಿ ರೂ. ಸೇರಿದಂತೆ ಒಟ್ಟು 3,705.87 ಕೋಟಿ ರೂ. ನಷ್ಟವಾಗಿರುವುದಾಗಿ ಸರ್ಕಾರ ಅಂದಾಜು ಮಾಡಿದೆ.

ಈ ಮಧ್ಯೆ 15 ಜಿಲ್ಲೆಗಳ 89 ತಾಲೂಕುಗಳಲ್ಲಿ ಮಳೆ ಮತ್ತು ತೇವಾಂಶ ಕೊರತೆಯಿಂದಾಗಿ 15 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳಿಗೆ ತೊಂದರೆಯಾಗಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ 8,000 ಕೋಟಿ ರೂ. ಅಂದಾಜು ಮಾಡಲಾಗಿದೆ ಎಂದು ಸರ್ಕಾರ ಸೋಮವಾರ ಪ್ರಧಾನಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ವಿವರಿಸಿದೆ. ಆದರೆ, ಈ ಜಿಲ್ಲೆಗಳಲ್ಲಿ ಮಳೆ ಕೊರತೆ ಮುಂದುವರಿದಿರುವುದರಿಂದ ಬೆಳೆ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಾಗುವ ಆತಂಕ ಕಾಣಿಸಿಕೊಂಡಿದೆ.

ಕೊಡಗು ಸೇರಿದಂತೆ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ 118 ವರ್ಷಗಳಲ್ಲೇ  ದಾಖಲೆಯ ಭಾರೀ ಮಳೆ ಬಿದ್ದು ಉಂಟಾದ ಪ್ರವಾಹ ಹಾಗೂ ಅದರಿಂದ ಆಗಿರುವ ಅನಾಹುತಗಳ ಮಧ್ಯೆ 16 ಜಿಲ್ಲೆಗಳಲ್ಲಿ ಬರ ವ್ಯಾಪಿಸಿದ್ದು ಹೆಚ್ಚು ಸುದ್ದಿಯಾಗಲೇ ಇಲ್ಲ. ಇದರ ಮಧ್ಯೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಇಲಾಖೆ ಹಿರಿಯ ಅಧಿಕಾರಿಗಳು ಮಳೆ ಕೊರತೆಯಾಗಿರುವ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯದ ಜತೆಗೆ ಆಗಿರುವ ನಷ್ಟದ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ಇದೀಗ ಮುಖ್ಯಮಂತ್ರಿಗಳ ಮೂಲಕ ಈ ಮಾಹಿತಿಯನ್ನು ಪ್ರಧಾನಿಯವರಿಗೆ ತಲುಪಿಸಿದ್ದಾರೆ.

ವಿವರವಾದ ಪ್ರಸ್ತಾವನೆ:
ಕರ್ನಾಟಕದ ಒಳನಾಡಿನ 17 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ತಲೆದೋರಿದ್ದು, ಈ ಕುರಿತೂ ಸಹ ನಷ್ಟದ ಪ್ರಮಾಣ ಅಂದಾಜು ಮಾಡಲಾಗುತ್ತಿದೆ. ಆರಂಭಿಕ ಮಾಹಿತಿ ಪ್ರಕಾರ 8,000 ಕೋಟಿ ರೂ. ನಷ್ಟ ಎಂದು ಅಂದಾಜಿಸಲಾಗಿದ್ದು, ಈ ಕುರಿತು ಮಂಗಳವಾರ ಸಂಪುಟ ಉಪಸಮಿತಿ ಸಭೆ ನಡೆಸಿ ಪ್ರಸ್ತಾವನೆ ಅಂತಿಮಗೊಳಿಸಲಾಗುವುದು. ಬಳಿಕ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿಗಳ ನೇತೃತ್ವದ ನಿಯೋಗ ಪ್ರಧಾನಿಯವರಿಗೆ ಮಾಹಿತಿ ನೀಡಿದೆ.

89 ತಾಲೂಕು ಬರಪೀಡಿತ: ಇಂದು ಘೋಷಣೆ ಸಾಧ್ಯತೆ
ಮಳೆ ಕೊರತೆ, ತೇವಾಂಶವಿಲ್ಲದೆ ಬೆಳೆ ನಷ್ಟ ಸಂಭವಿಸಿರುವ ರಾಜ್ಯದ 16 ಜಿಲ್ಲೆಗಳ 89 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಮಂಗಳವಾರ ಸಂಪುಟ ಉಪಸಮಿತಿ ಸಭೆ ಬಳಿಕ ಈ ತಾಲೂಕುಗಳ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಬರ ನಿರ್ವಹಣೆ ಕೈಪಿಡಿ- 2016ರಲ್ಲಿ ನಿಗದಿಪಡಿಸಿರುವ ಮಾನದಂಡದಂತೆ ಒಟ್ಟು 176 ತಾಲೂಕುಗಳ ಪೈಕಿ 89 ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಿಸಲು ಪಟ್ಟಿ ಮಾಡಲಾಗಿದೆ.

ಸಂಬಂಧಿಸಿದ ಇಲಾಖೆಗಳು ಬರ ಪರಿಸ್ಥಿತಿಯ ತೀವ್ರತೆ ಮತ್ತು ಬೆಳೆನಾಶದ ಪ್ರಮಾಣ ಖಾತರಿಪಡಿಸಲು ಸಮೀಕ್ಷೆ ನಡೆಸುತ್ತಿವೆ.

ಮಂಗಳವಾರ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ನೇತೃತ್ವದ ಸಚಿವ ಸಂಪುಟ ಉಪಸಮಿತಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಅನುಮೋದನೆ ನೀಡಿ ಪ್ರಕಟಿಸುವ ಸಾಧ್ಯತೆಗಳಿವೆ. ಸಂಪುಟ ಉಪಸಮಿತಿ ಅನುಮೋದನೆ ಬಳಿಕವೇ ಬರಪೀಡಿತ ತಾಲೂಕುಗಳು ಯಾವುವು ಎಂಬುದು ಅಂತಿಮಗೊಳ್ಳಲಿದೆ.

ಇದಾದ ಬಳಿಕ ಕೇಂದ್ರ ವಿಕೋಪ ಪರಿಹಾರ ನಿಧಿಯಿಂದ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.


Trending videos

Back to Top