CONNECT WITH US  

ಸರಕಾರ ಉರುಳಿಸಲು ಆಪರೇಷನ್‌ ಇಪ್ಪತ್ತು

ಬೆಂಗಳೂರು: ಆಪರೇಷನ್‌ ಕಮಲ ಮೂಲಕ ರಾಜ್ಯ ಸಮ್ಮಿಶ್ರ ಸರ್ಕಾರ ಬೀಳಿಸುವ ಗಂಭೀರ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದ್ದು, 20 ಶಾಸಕರನ್ನು ಸೆಳೆಯಲು ಎರಡು ಕಡೆಯಿಂದ ಕಾರ್ಯಾಚರಣೆ ನಡೆಯುತ್ತಿದೆ.

ಬೆಳಗಾವಿ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅತೃಪ್ತಗೊಂಡಿರುವ ಜಾರಕಿಹೊಳಿ ಸಹೋದರರ ಮೂಲಕ 12 ಶಾಸಕರನ್ನು ಸೆಳೆಯುವ ಕಾರ್ಯತಂತ್ರ ಒಂದೆಡೆಯಾದರೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಎಂಟು ಶಾಸಕರನ್ನು ಸೆಳೆಯಲು ತೆರೆಮರೆಯ ಕಸರತ್ತು ನಡೆಸಿದ್ದಾರೆ.ಆ ಪೈಕಿ  ಸರ್ಕಾರ ಅಲ್ಪಮತಕ್ಕೆ ಕುಸಿಯಲು ಬೇಕಾದ ಕನಿಷ್ಠ 16 ಶಾಸಕರನ್ನು ಒಟ್ಟುಗೂಡಿಸಿಕೊಳ್ಳುವ ಮಾಸ್ಟರ್‌ ಪ್ಲ್ರಾನ್‌ ಇದರ ಹಿಂದಿದೆ.

ಬೆಳಗಾವಿಯ ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಉಂಟಾದ ಹಿನ್ನೆಡೆಯಿಂದ ಜಾರಕಿಹೊಳಿ ಸಹೋದರರಿಗೆ ಆಗಿರುವ ಅಸಮಾಧಾನವನ್ನೇ ಅಸ್ತ್ರವನ್ನಾಗಿಸಿಕೊಂಡು ಸರ್ಕಾರ ಉರುಳಿಸುವ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಬಿಜೆಪಿ ಜತೆ ಜಾರಕಿಹೊಳಿ ಸಹೋದರರು ಕೈ ಜೋಡಿಸಲು ಮುಂದಾಗಿದ್ದಾರೆ. ರಮೇಶ್‌ ಜಾರಕಿಹೊಳಿ ಮಹಾರಾಷ್ಟ್ರದಲ್ಲಿರುವ ತಮ್ಮ ಬೀಗರ ಮೂಲಕ ಮುಖ್ಯಮಂತ್ರಿ ದೇವೇಂದ್ರ ಫ‌ಢ°ವಿಸ್‌ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲೋಕಸಭೆ ಚುನಾವಣೆಗೆ ಮುನ್ನವೇ ಸರ್ಕಾರ ಪತನವಾದರೆ ಮಾತ್ರ ಮುಖ್ಯಮಂತ್ರಿಯಾಗುವ ತಮ್ಮ ಕನಸು ನನಸಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಕೇಂದ್ರ ನಾಯಕರನ್ನೂ ಒಂದು ಹಂತದಲ್ಲಿ ಒಪ್ಪಿಸಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ರಾಜ್ಯ ಬಿಜೆಪಿ ನಾಯಕರು ಸಹಕಾರ ನೀಡುತ್ತಿಲ್ಲ. ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ್‌, ಜಗದೀಶ್‌ ಶೆಟ್ಟರ್‌ ಸದ್ಯದ ಬೆಳವಣಿಗೆಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಅರಿತಿರುವ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಕೆಲವು ಬಿಜೆಪಿ ಶಾಸಕರ ಸಂಪರ್ಕದಲ್ಲಿದ್ದು ಮಂತ್ರಿಗಿರಿ ಆಮಿಷ ಸಹ ನೀಡಿದ್ದಾರೆ. ಹೀಗಾಗಿ, ಸರ್ಕಾರ ಬೀಳಿಸುವ ಪ್ರಯತ್ನ "ಫ‌ಲ'ಕೊಡುತ್ತಾ ಎಂಬ ಪ್ರಶ್ನೆಯೂ ಇದೆ. 16 ಶಾಸಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ರಾಜೀನಾಮೆ ನೀಡಿ ಬಿಜೆಪಿ ಜತೆ ಕೈ ಜೋಡಿಸುವುದು ಅಷ್ಟು ಸುಲಭದ ವಿಚಾರವಲ್ಲ. ಅಷ್ಟು ಶಾಸಕರು ಧೈರ್ಯ ಮಾಡುತ್ತಾರಾ ಎಂಬುದು ಕಾದು ನೋಡಬೇಕಾಗಿದೆ.

ಸಿಎಂ ವಿರುದ್ಧ ಅಸಮಾಧಾನ
ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಅಷ್ಟೇ ಅಲ್ಲದೆ ಬೆಳಗಾವಿ ವಿಚಾರಗಳಲ್ಲಿ ರಮೇಶ ಜಾರಕಿಹೊಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಬೇಸರ ಇದೆ. ಅವರು ಸೂಚಿಸಿದ್ದ ಜಿಲ್ಲಾ ವರಿಷ್ಠಾಧಿಕಾರಿ ಹಾಗೂ ಬೆಳಗಾವಿ ಉತ್ತರ ವಲಯ ಐಜಿಪಿಯನ್ನು ವರ್ಗಾವಣೆ ಮಾಡದಿರುವುದು. ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಕೂಡ ತಾವು ಸೂಚಿಸಿರುವ ಎಂಜನೀಯರ್‌ಗಳನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದಾರೆ ಎಂಬ ಅಸಮಾಧಾನ ಇದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಮೇಶ್‌ ಜಾರಕಿಹೊಳಿ ಬಿಜೆಪಿ ನಾಯಕರನ್ನು ಸಂಪರ್ಕಿಸಿದ್ದು, ತಮ್ಮೊಂದಿಗೆ 12 ಜನ ಶಾಸಕರಿದ್ದಾರೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ಮುಂದಿನ ಬೆಳವಣಿಗೆಗಳ ಕುರಿತು ಸೋಮವಾರ ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಹಾಗೂ ನಾಯಕ ಸಮಾಜದ ಮುಖಂಡ ಬಿ. ಶ್ರೀರಾಮುಲು ಹಾಗೂ ಯಡಿಯೂರಪ್ಪ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿ, ಸೋಮವಾರ ಸಂಜೆಯೇ ದೆಹಲಿಗೆ ತೆರಳುವ ಯೋಜನೆ ಹಾಕಿದ್ದರು. ಆದರೆ, ಶ್ರೀರಾಮುಲು ಬಳ್ಳಾರಿಗೆ ತೆರಳಿದ್ದರಿಂದ ಮಾತುಕತೆ ನಡೆದಿಲ್ಲ ಎಂದು ಹೇಳಲಾಗಿದೆ.

ಈ ನಡುವೆ ತಮ್ಮ ಸಹೋದರ ಸತೀಶ್‌ ಜಾರಕಿಹೊಳಿಯನ್ನು ಮುಖ್ಯಮಂತ್ರಿ ಮಾಡಬೇಕೆಂದು ಸಚಿವ ರಮೇಶ್‌ ಜಾರಕಿಹೊಳಿ ಬೇಡಿಕೆ ಇಟ್ಟಿರುವುದು ಯಡಿಯೂರಪ್ಪ ಅವರಿಗೆ ತಲೆನೋವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾಯಕ ಸಮುದಾಯದವರಿಗೆ ಉಪ ಮುಖ್ಯಮಂತ್ರಿ ಸ್ಥಾನ ಕೊಡುವ ಭರವಸೆ ನೀಡಿರುವುದರಿಂದ ರಮೇಶ್‌ ಜಾರಕಿಹೊಳಿ ಶ್ರೀರಾಮುಲು ಜೊತೆ ಹೊಂದಾಣಿಕೆ ಮಾಡಿಕೊಂಡು ಉಪ ಮುಖ್ಯಮಂತ್ರಿಯಾಗುವುದಾದರೆ ತೊಂದರೆಯಿಲ್ಲ ಎಂಬುದು ಯಡಿಯೂರಪ್ಪ ವಾದ ಎನ್ನಲಾಗಿದೆ.

ಮತ್ತೂಂದು ದಾರಿ
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಮೂರುವರೆ ತಿಂಗಳು ಕಳೆದಿರುವುದರಿಂದ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಆರು ತಿಂಗಳು ಅವಕಾಶ ಇರುವುದರಿಂದ ತಕ್ಷಣ ಸರ್ಕಾರ ಪತನಗೊಳಿಸುವುದು ಕಷ್ಟ.  ಬಂಡಾಯ ಏಳುವ ಶಾಸಕರು ಸ್ಪೀಕರ್‌ ವಿರುದ್ಧ ಅವಿಶ್ವಾಸ ಮಂಡನೆ ಮಾಡಿದರೆ ಸ್ಪೀಕರ್‌ ತಕ್ಷಣ ವಿಧಾನ ಮಂಡಲ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸಲು ಮುಂದಾಗಬಹುದು. ಆಗ ಸ್ಪೀಕರ್‌ಗೆ ಬಹುಮತ ಬರದಿದ್ದರೂ, ಸರ್ಕಾರ ಪತನವಾಗುವ ಮಾರ್ಗವೂ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿಧಾನಸಭೆ
ಒಟ್ಟು ಸಂಖ್ಯಾಬಲ -222
(ರಾಮನಗರ ಹಾಗೂ ಜಮಖಂಡಿ ಖಾಲಿ)

ಕಾಂಗ್ರೆಸ್‌-80
ಜೆಡಿಎಸ್‌-36
ಬಿಎಸ್‌ಪಿ-1
ಕೆಪಿಜೆಪಿ-1
ಪಕ್ಷೇತರ-1
ಬಿಜೆಪಿ-104
ಬಿಜೆಪಿ ಲೆಕ್ಕಾಚಾರ
ಕಾಂಗ್ರೆಸ್‌-80, ಜೆಡಿಎಸ್‌ 36, ಬಿಎಸ್‌ಪಿ-1, ಕೆಪಿಜೆಪಿ-1, ಪಕ್ಷೇತರ-1 : 118
ಬಿಜೆಪಿ -104
ಬಹುಮತ ಬೇಕಿರುವುದು 112 (ಕಾಂಗ್ರೆಸ್‌ ಹಾಗೂ ಜೆಡಿಎಸ್‌ಗೆ ಬಹುಮತಕ್ಕಿಂತ ಆರು ಶಾಸಕರ ಸಂಖ್ಯೆ ಹೆಚ್ಚಾಗಿದೆ)
ಹೀಗಾಗಿ, ಬಿಜೆಪಿ ಅಧಿಕಾರ ಹಿಡಿಯಬೇಕಾದರೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಸಂಖ್ಯೆಯನ್ನು 102 ಕ್ಕೆ ಇಳಿಸಬೇಕು.  ಹೀಗಾಗಿ, 16 ಶಾಸಕರ ರಾಜೀನಾಮೆ ಕೊಡಿಸುವುದು ಅನಿವಾರ್ಯ)

ಆಗ ಸದನದಲ್ಲಿ ಬಹುಮತ ಸಾಬೀತು ಸಂದರ್ಭ ಬಂದಾಗ ಸದನದ  ಸಂಖ್ಯಾಬಲ 206 ಕ್ಕೆ ಕುಸಿಯಲಿದೆ. ಆಗ, 104 ಸಂಖ್ಯಾಬಲ ಬಹುಮತಕ್ಕೆ ಸಾಕಾಗುತ್ತದೆ ಎಂಬುದು ಬಿಜೆಪಿ ಲೆಕ್ಕಾಚಾರ. ಸರ್ಕಾರ  ಬೀಳುವ ಸಂದರ್ಭ ಎದುರಾದರೆ ಇಬ್ಬರು  ಪಕ್ಷೇತರರು ಸಹ ಬಿಜೆಪಿಗೆ ಕಡೆ ವಾಲಬಹುದು ಎಂಬ ನಿರೀಕ್ಷೆಯೂ ಇದೆ.


Trending videos

Back to Top