CONNECT WITH US  

ಕಾಂಗ್ರೆಸ್‌ ಜತೆ ಮೈತ್ರಿಗೆ ಕುಮಾರಸ್ವಾಮಿ ಅತೃಪ್ತಿ

ಬೆಂಗಳೂರು : ಹಾವು - ಮುಂಗುಸಿ ಯಂತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಬಿಬಿಎಂಪಿ ಅಧಿಕಾರ ಸೂತ್ರ ಹಿಡಿಯುವ ವಿಚಾರ ದಲ್ಲಿ ಇನ್ನೇನು ಪರಸ್ಪರ ಕೈಜೋಡಿಸಿದವು ಎನ್ನುವ ವೇಳೆಯಲ್ಲೇ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪರೋಕ್ಷವಾಗಿ ಈ ಮೈತ್ರಿ ಪ್ರಕ್ರಿಯೆ ಕುರಿತಂತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

"ಮೈತ್ರಿ ಕುರಿತ ಮಾತುಕತೆ ಶಾಸಕರ ಮಟ್ಟದಲ್ಲಿ ಆಗಿರುವಂಥದ್ದು ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರೇ ಶಾಸಕರ ಮಟ್ಟದಲ್ಲಿ ಆಗಿರುವ ಮಾತುಕತೆ ಅಂದ ಮೇಲೆ ನಾನ್ಯಾಕೆ ಕೆಪಿಸಿಸಿ ಅಧ್ಯಕ್ಷರ ಜತೆ ಮಾತನಾಡಬೇಕು? ಶಾಸಕರ ಮಟ್ಟದಲ್ಲೇ ಮೈತ್ರಿ ಮಾಡಿಕೊಳ್ಳಲಿ ಬಿಡಿ' ಎಂದು ಎಚ್ಡಿಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕುಮಾರಸ್ವಾಮಿ ಅವರ ಈ ನಿಲುವಿನ ಪರಿಣಾಮವಾಗಿಯೇ, ಕಳೆದ ನಾಲ್ಕೈದು ದಿನಗಳಿಂದ ಕೇಳಿ ಬರುತ್ತಿರುವ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ನಡುವಿನ ಮಾತುಕತೆ ಮುಂದೂಡುತ್ತಲೇ ಬಂದಿದ್ದು, ಮಾತುಕತೆ ನಡೆಯುವ ಬಗ್ಗೆ ಅನುಮಾನವನ್ನೂ ಮೂಡಿಸಿದೆ. ಮಾತುಕತೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಪ್ರಮುಖ ಪಾತ್ರ ವಹಿಸಬೇಕು ಎಂಬ ನಿಲುವನ್ನು° ಕುಮಾರಸ್ವಾಮಿ ಹೊಂದಿದ್ದಾರೆ. "ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತುಕತೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ದೂರ ಉಳಿಯಲು ಬಯಸುತ್ತಾರೆ ಎಂದ ಮೇಲೆ ತಾನ್ಯಾಕೆ ಆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು? ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಅವರು ತನ್ನ ಸರಕಾರಕ್ಕೂ ಈ ಮೈತ್ರಿ ವಿಚಾರಕ್ಕೂ ಸಂಬಂಧವಿಲ್ಲ ಎಂದರೆ ಹೇಗೆ? ಅಭಿವೃದ್ಧಿಗೆ ಸಂಬಂಧಿಸಿದಂತೆ ಹೊಣೆ ಹೊತ್ತುಕೊಳ್ಳಬೇಕಲ್ಲವೇ? ಮುಂದೆ ಮೈತ್ರಿ ಹೆಚ್ಚು ಕಡಿಮೆಯಾದರೆ ಕುಗ್ಗುವುದು ಜೆಡಿಎಸ್‌ ಘನತೆಯೇ ಹೊರತು ಕಾಂಗ್ರೆಸಿನದ್ದಲ್ಲ' ಎಂಬ ಅಭಿಪ್ರಾಯವನ್ನು ಕುಮಾರಸ್ವಾಮಿ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಕಾಂಗ್ರೆಸ್‌ ಜತೆಗಿನ ಮೈತ್ರಿ ವಿಷಯದಲ್ಲಿ ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಇದೀಗ ಸ್ಪಷ್ಟವಾಗಿದ್ದು, ಕುಮಾರಸ್ವಾಮಿ ಅವರ ಮನದ ಇಂಗಿತ ಅರಿತೇ ಪಕ್ಷದ ಶಾಸಕರು ದೇವೇಗೌಡರ ಮೇಲೆ ಮೈತ್ರಿಗೆ ಒತ್ತಡ ಹಾಕಿಸಿ ಮೊದಲು ಬಹಿರಂಗ ಹೇಳಿಕೆ ಕೊಡಿಸಿದರು. ಅನಂತರ ಕುಮಾರಸ್ವಾಮಿ ಅನಿವಾರ್ಯತೆಗೆ ಸಿಲುಕುವಂತೆ ಮಾಡಿದರು ಎಂಬ ಮಾಹಿತಿ ಈಗ ಹೊರಬಿದ್ದಿದೆ.

ಬೇಷರತ್‌ ಬಗ್ಗೆಯೂ ಎಚ್‌ಡಿಕೆ ಅತೃಪ್ತಿ: ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಮೊದಲಿಗೆ ಎರಡು ಷರತ್ತು ಎಂದು ಹೇಳಿ ಇದೀಗ ನಾವು ಯಾವುದೇ ಷರತ್ತು ಇಟ್ಟಿಲ್ಲ ಎಂಬ ಹೇಳಿಕೆ ನೀಡಿರುವ ದೇವೇಗೌಡರ ನಿಲುವನ್ನು ಕುಮಾರಸ್ವಾಮಿ ಬಲವಾಗಿ ವಿರೋಧಿಸಿದ್ದಾರೆ.

ಬೇಷರತ್‌ ಬೆಂಬಲ ಅಂದ ಮೇಲೆ ಕೆಪಿಸಿಸಿ ಅಧ್ಯಕ್ಷರ ಬಳಿ ಮಾತನಾಡುವು ದಾದರೂ ಏನಿದೆ? ಹೇಗಿದ್ದರೂ ನೀವೇ ಮಾತನಾಡಿ ನಿರ್ಧಾರ ಮಾಡಿದ್ದೀರಿ. ನನ್ನದೇನೂ ಅಭ್ಯಂತರವಿಲ್ಲ. ನೀವೇ ಮುಂದುವರಿಸಿಕೊಂಡು ಹೋಗಿ ಎಂದು ಪಕ್ಷದ ಶಾಸಕರಿಗೆ ಸೂಕ್ಷ್ಮವಾಗಿ ಹೇಳಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕಾಗಿ ಐದು ದಿನಗಳಿಂದ ಡಾ| ಜಿ.ಪರಮೇಶ್ವರ್‌ ಭೇಟಿ ಮುಂದೂಡುತ್ತಲೇ ಬಂದಿದ್ದಾರೆ. ಮೈತ್ರಿ ಪರವಾಗಿ ವಕಾಲತ್ತು ವಹಿಸಲು ಬರುವ ಪಕ್ಷದ ಶಾಸಕರು ಹಾಗೂ ಮುಖಂಡರಿಗೂ ಸಿಗುತ್ತಿಲ್ಲ. ವಿಶ್ರಾಂತಿ ಎಂದು ಮನೆಯಲ್ಲೇ ಇದ್ದಾರೆ. ಮೈತ್ರಿ ಬಗ್ಗೆ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿಕೃತವಾಗಿಯೇ ಕುಮಾರಸ್ವಾಮಿ ಜತೆ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್‌ ಶಾಸಕರು ತಿಳಿಸಿದ್ದರು. ಜೆಡಿಎಸ್‌ ಶಾಸಕರು ಪದೇ ಪದೇ ಮುಖ್ಯಮಂತ್ರಿ ಮನೆಗೆ ಎಡತಾಕಿದ್ದರಿಂದ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷರೇ ಮಾತನಾಡಲಿ ಎಂದು ಹೇಳಿ ಸುಮ್ಮನಾಗಿದ್ದಾರೆ. ಇದು ಕುಮಾರಸ್ವಾಮಿ ಕೋಪಕ್ಕೆ ಕಾರಣ ಎನ್ನಲಾಗಿದೆ.

ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಶಾಸಕರು ಮೈತ್ರಿ ಆಗುವ ಮುನ್ನವೇ "ಭಾಯಿ ಭಾಯಿ' ಎಂಬಂತೆ ಹೆಗಲ ಮೇಲೆ ಕೈ ಹಾಕಿ ನಿಂತಿದ್ದು, ಗೌಡರ ಮನೆಗೆ ಮಾತುಕತೆಗೆ ಬಂದ ಪರಮೇಶ್ವರ್‌ ಕಾರು ಇಳಿಯುತ್ತಿದ್ದಂತೆ ಸ್ವಾಗತ ಕೋರಿದ್ದು, ಜೆಡಿಎಸ್‌ ಶಾಸಕರೇ ಪದೇ ಪದೇ ಮುಖ್ಯಮಂತ್ರಿ ಮನೆಗೆ ಎಡತಾಕಿದ್ದು ಕುಮಾರಸ್ವಾಮಿಗೆ ಹಿಡಿಸಿಲ್ಲ. ಜೆಡಿಎಸ್‌ ಪಾಲಿಕೆ ಸದಸ್ಯರು ಕೇರಳ ಪ್ರವಾಸ ಹೋಗುವ ವಿಚಾರವೂ ಕುಮಾರಸ್ವಾಮಿಯವರಿಗೆ ತಿಳಿದಿರಲಿಲ್ಲ. ಕೊನೇ ಗಳಿಗೆಯಲ್ಲಿ ತಿಳಿಸಲಾಯಿತು. ಜೆಡಿಎಸ್‌ ಪಕ್ಷವನ್ನೇ ಹೈಜಾಕ್‌ ಮಾಡುವ ರೀತಿ ಶಾಸಕರೇ ಎಲ್ಲ ತೀರ್ಮಾನ ಕೈಗೊಂಡು ಎಲ್ಲವೂ ಮುಗಿದ ಅನಂತರ ದೇವೇಗೌಡರ ಮೂಲಕ ಬಹಿರಂಗ ಹೇಳಿಕೆ ಕೊಡಿಸಿ ನಂತರ ಶಾಸ್ತ್ರಕ್ಕೆ ತಮ್ಮ ಬಳಿ ಬರುತ್ತಿರುವ ಬಗ್ಗೆಯೂ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

ಮೈತ್ರಿ ಪ್ರಕ್ರಿಯೆಯಲ್ಲಿ ಭಾಗಿಯಾಗಲ್ಲ: ನನಗೆ ವೈಯಕ್ತಿಕವಾಗಿ ಹೇಳಬೇಕಾದರೆ ಮೈತ್ರಿ ಬಗ್ಗೆ ಆಸಕ್ತಿ ಇಲ್ಲ ಎಂಬುದು ನಿಜ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ವಿರುದ್ಧವೇ ಹೋರಾಟ ಮಾಡಬೇಕಿರುವ ಕಾರಣ ತಟಸ್ಥವಾಗಿರುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯ. ಎರಡೂ ಪಕ್ಷಗಳ ಬಗೆಗಿನ ನನ್ನ ನಿಲುವು ಅದೇ ಆಗಿದೆ. ಆದರೆ, ರಾಷ್ಟೀಯ ಅಧ್ಯಕ್ಷರೇ ಮೈತ್ರಿ ಬಗ್ಗೆ ಘೋಷಿಸಿರುವುದರಿಂದ ವಿರೋಧ ವ್ಯಕ್ತಪಡಿಸಲು ಹೋಗಲಿಲ್ಲ. ಶಾಸಕರದೂ ಒತ್ತಡ ಇರುವುದರಿಂದ ಸಹಜವಾಗಿ ಮೌನ ವಹಿಸಿದ್ದೇನೆ ಎಂದು ಹೇಳಿದರು.


Trending videos

Back to Top