CONNECT WITH US  

ರಾಜ್ಯಸಭೆ ಚುನಾವಣೆ : ಮೈತ್ರಿ ಇಲ್ಲವೇ ಇಲ್ಲ: ಸಿದ್ದರಾಮಯ್ಯ

ಮೈಸೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕಾಗಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಸಂಬಂಧ ಜೆಡಿಎಸ್‌ ಜತೆಗೆ ಮಾತನಾಡಿಲ್ಲ, ಮಾತ ನಾಡುವುದೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಗೆ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಮಂಗಳವಾರ ತೀರ್ಮಾನಿಸಲಾಗುವುದು ಎಂದರು. ರಾಜ್ಯಸಭಾ ಚುನಾವಣೆಗಾಗಿ ಜೆಡಿಎಸ್‌ ಜತೆಗೆ ಮಾತುಕತೆ ನಡೆಸುವುದಿಲ್ಲ. ಭವಿಷ್ಯದಲ್ಲೂ ನಮಗೆ ಜೆಡಿಎಸ್‌ನ ಆವಶ್ಯಕತೆ ಬೀಳುವುದಿಲ್ಲ ಎಂದ ಅವರು, ಬಿಎಸ್‌ಪಿ ಜತೆಗೆ ಜೆಡಿಎಸ್‌ ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್‌ಗೆ ಯಾವುದೇ ಪೆಟ್ಟು ಬೀಳುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಮೂರನೇ ಸ್ಥಾನವನ್ನು ತಮಗೆ ಬಿಟ್ಟುಕೊಡುವಂತೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದರು. ಸೋಮವಾರವಷ್ಟೇ ಜೆಡಿಎಸ್‌ನ ಬದ್ಧ ರಾಜಕೀಯ ವೈರಿ ಅಶೋಕ್‌ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿರುವ ಬೆನ್ನಲ್ಲೇ ಮೈತ್ರಿ ವಿಚಾರ ಇಲ್ಲ ಎಂದು ಹೇಳುವ ಮೂಲಕ ಜೆಡಿಎಸ್‌ ಜತೆಗಿನ ಸಂಘರ್ಷಕ್ಕೆ ಮುಕ್ತ ವಾತಾವರಣ ಕಲ್ಪಿಸಿದ್ದಾರೆ.

ಘಟಾನುಘಟಿಗಳಿಂದ ಲಾಬಿ: ಸಾಕಷ್ಟು ಆಕಾಂಕ್ಷಿಗಳು ತಮ್ಮದೇ ಆದ ರೀತಿಯಲ್ಲಿ ದಿಲ್ಲಿ ಮಟ್ಟದಲ್ಲೂ ಲಾಬಿ ಆರಂಭಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯದಿಂದ ಮಾಜಿ ಸಚಿವೆ ರಾಣಿ ಸತೀಶ್‌ ಮತ್ತು ಕೇಂದ್ರದ ಮಾಜಿ ಗೃಹ ಸಚಿವ ಮಹಾರಾಷ್ಟ್ರ ಮೂಲದ ಶಿವರಾಜ್‌ ಪಾಟೀಲ್‌ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ. ಮುಸ್ಲಿಂ ಸಮುದಾಯದಿಂದ ಮಾಜಿ ಸಂಸದ ಐ.ಜಿ. ಸನದಿ, ದಿಲ್ಲಿಯಲ್ಲಿ ರಾಜ್ಯ ಸರಕಾರದ ವಿಶೇಷ ಪ್ರತಿನಿಧಿ  ಸಲೀಂ ಅಹಮದ್‌, ಮಾಜಿ ಸಚಿವ ನಜೀರ್‌ ಅಹಮದ್‌, ಹಾಲಿ ರಾಜ್ಯಸಭಾ ಸದಸ್ಯ ಕೆ. ಆರ್‌. ರೆಹಮಾನ್‌ ಖಾನ್‌ ಹಾಗೂ ಸಚಿವ ರೋಷನ್‌ ಬೇಗ್‌ ಪೈಪೋಟಿ ನಡೆಸಿದ್ದಾರೆ.

ಲೋಕಸಭೆ ಮಾಜಿ ಸ್ಪೀಕರ್‌ ಮೀರಾ ಕುಮಾರ್‌ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಚ್‌. ಹನುಮಂತಪ್ಪ ಹೆಸರು ಪ್ರಸ್ತಾವವಾಗಿದೆಯಾದರೂ, ಸಿದ್ದರಾಮಯ್ಯ ಪಕ್ಷದ 3ನೇ ಅಭ್ಯರ್ಥಿಯಾಗಿ ರಿಯಲ್‌ ಎಸ್ಟೇಟ್‌ ಉದ್ಯಮಿ ಚೆನ್ನಾರೆಡ್ಡಿ ಅಥವಾ ಮಾನ್ಯತಾ ಟೆಕ್‌ ಪಾರ್ಕ್‌ ಮಾಲೀಕ ರೆಡ್ಡಿ ವೀರಣ್ಣ ಅವರನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ. ಮೂರನೇ ಅಭ್ಯರ್ಥಿ ಟಿಕೆಟನ್ನು ಉದ್ಯಮಿಗಳಿಗೆ ನೀಡುವುದರಿಂದ ಕೊರತೆಯಾಗುವ ಮತಗಳನ್ನು ಅವರ ಮೂಲಕವೇ ಸೆಳೆಯಲು ಮುಖ್ಯಮಂತ್ರಿ ಲೆಕ್ಕಾಚಾರ ಹಾಕಿದ್ದಾರೆೆ.

ರಾಜ್ಯಸಭೆ ಚುನಾವಣಾ ಅಧಿಸೂಚನೆ ಪ್ರಕಟ
ಬೆಂಗಳೂರು:
ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. ಮಾ.12 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮಾ. 13ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 15 ನಾಮಪತ್ರ ಹಿಂದೆಗೆದುಕೊಳ್ಳಲು ಕೊನೆಯ ದಿನವಾಗಿದ್ದು, 23ರಂದು ಮತದಾನ ನಡೆಯಲಿದೆ.  ಅಂದು ಬೆಳಗ್ಗೆ 9 ರಿಂದ ಸಂಜೆ 4 ರವರೆ‌ಗೂ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಯಿಂದ  ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿ ಎಸ್‌. ಮೂರ್ತಿ ತಿಳಿಸಿದ್ದಾರೆ.


Trending videos

Back to Top