CONNECT WITH US  

ಅರುಣಾಚಲ ಪ್ರದೇಶದಲ್ಲಿ ಮೈಸೂರು ಪೈಲಟ್‌ ನಾಪತ್ತೆ

ಇಟಾನಗರ/ಮೈಸೂರು : ಒಂದು ವಾರದ ಹಿಂದೆ ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾದ ಹೆಲಿಕಾಪ್ಟರ್‌ನಲ್ಲಿ ಇದ್ದ ಮೂವರಲ್ಲಿ ಮೈಸೂರಿನ ಪೈಲಟ್‌ ರಾಜೀವ್‌ ಹೊಸಕೋಟೆ ಅವರೂ ಇದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಅರುಣಾಚಲ ಸರಕಾರದ ಸೇವೆಯಲ್ಲಿದ್ದ ಪವನ್‌ ಹಂಸ್‌ ಹೆಲಿಕಾಪ್ಟರ್‌ ಕಳೆದ ಮಂಗಳವಾರ ಅರುಣಾಚಲದಲ್ಲಿ ಜಿಲ್ಲಾಧಿಕಾರಿಯೊಬ್ಬರನ್ನು ಕರೆದೊಯ್ಯುವಾಗ ತಿರಾಪ್‌ ಜಿಲ್ಲೆಯಲ್ಲಿ ನಾಪತ್ತೆಯಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಜಿಲ್ಲಾಧಿಕಾರಿ ಕಮಲೇಶಕುಮಾರ್‌ ಜೋಶಿ, ಪೈಲಟ್‌ಗಳಾದ ಎಂ.ಎಸ್‌. ಬ್ರಾರ್‌ ಮತ್ತು ರಾಜೀವ್‌ ಹೊಸಕೋಟೆ ಅವರಿದ್ದರು.

ಅ.6ಕ್ಕೆ ಮದುವೆ ಇತ್ತು: ರಾಜೀವ್‌ ಅವರು ಮೂಲತಃ ಮೈಸೂರಿನವರು. ಅಲ್ಲೇ ಹುಟ್ಟಿ ಬೆಳೆದವರು. ಅವರ ಕುಟುಂಬ ಮೈಸೂರಿನ ರಾಮಾನುಜ ಅಗ್ರಹಾರದಲ್ಲಿ ನೆಲೆಸಿದೆ. ಪೈಲಟ್‌ ಆಗಿರುವ ರಾಜೀವ್‌ ಮಾತ್ರ 3 ವರ್ಷ ಹಿಂದೆ ಅರುಣಾಚಲಕ್ಕೆ ತೆರಳಿ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬರುವ ಅಕ್ಟೋಬರ್‌ 6ರಂದು ಅವರ ವಿವಾಹ ನಿಗದಿಯಾಗಿತ್ತು.

ಮದುವೆಗೆ ಎರಡು ತಿಂಗಳಿದೆ ಎನ್ನುವಷ್ಟರಲ್ಲಿ ರಾಜೀವ್‌ ಇದ್ದ ಹೆಲಿಕಾಪ್ಟರ್‌ ನಾಪತ್ತೆಯಾಗಿರುವುದು ಕುಟುಂಬದಲ್ಲಿ ದಿಗ್ಭ್ರಮೆ ಮೂಡಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ರಾಜೀವ್‌ ಅವರ ತಂದೆ ಮಂಜುನಾಥ್‌ ಹಾಗೂ ಇತರ ಸಂಬಂಧಿಗಳು ಅರುಣಾಚಲಕ್ಕೆ ತೆರಳಿದ್ದಾರೆ. ತಾಯಿ ವಾಣಿಶ್ರೀ ಬೆಂಗಳೂರಿನಲ್ಲಿ ತಂಗಿದ್ದಾರೆ.

ಮುಂದುವರಿದ ಶೋಧ: ಈ ಮಧ್ಯೆ, ನಾಪತ್ತೆಯಾದ ಹೆಲಿಕಾಪ್ಟರ್‌ ಶೋಧಕ್ಕೆ ವಾಯು ಪಡೆಯ ಸಿಬಂದಿ ಮತ್ತು 5 ಹೆಲಿ ಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಶನಿವಾರ ವಾಯುಪಡೆಯು ಹೆಲಿಕಾಪ್ಟರ್‌ ಕಾಣೆಯಾಗಿರುವ ತಿರಾಪ್‌ ಅರಣ್ಯದ ಮೇಲೆ ತನ್ನ ಹೆಲಿಕಾಪ್ಟರ್‌ಗಳನ್ನು ಬಳಸಿ 11 ಬಾರಿ ಸುತ್ತು ಹಾಕಿತು. ಇದೇ ವೇಳೆ ತಿರಾಪ್‌ ದಟ್ಟಾರಣ್ಯದಲ್ಲಿ ನೆಲಮಟ್ಟದ ಶೋಧ ಕಾರ್ಯಾಚರಣೆಯನ್ನೂ ಸೇನೆ ಮತ್ತು ಪೊಲೀಸರು ನಡೆಸಿದರು. ಆದರೂ ಕಾಪ್ಟರ್‌ನ ಸುಳಿವು ಸಿಕ್ಕಿಲ್ಲ ಎಂದು ಅರುಣಾಚಲ ನಾಗರಿಕ ವಿಮಾನಯಾನ ಕಾರ್ಯದರ್ಶಿ ಬಿ.ಎಂ. ಮಿಶ್ರಾ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ನಾಪತ್ತೆಯಾದ ದಿನ ಸ್ಥಳೀಯರು ತಾವು ಅದನ್ನು ಕಂಡಿದ್ದರ ಬಗ್ಗೆ ಸುಳಿವು ನೀಡಿದ್ದಾರೆ. ಇದನ್ನಾಧರಿಸಿ ಶೋಧ ಕಾರ್ಯಾಚರಣೆ ನಡೆಸಿದ್ದರೂ ಫ‌ಲ ನೀಡಿಲ್ಲ ಎಂದು ತಿಳಿಸಿದ್ದಾರೆ.

ಕೇಂದ್ರ ಸರಕಾರ ಪರಿಶೀಲನೆ: ಹೆಲಿಕಾಪ್ಟರ್‌ ನಾಪತ್ತೆ ಬಗ್ಗೆ ಕೇಂದ್ರ ಸಂಪುಟ ಕಾರ್ಯದರ್ಶಿಗಳು ಮಾಹಿತಿ ತರಿಸಿಕೊಂಡಿದ್ದು, ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಾಚರಣೆ ತ್ವರಿತಗೊಳಿಸಲು ಸೂಚನೆ ನೀಡಿದರು.


Trending videos

Back to Top