CONNECT WITH US  

ಕೋಟ್ಯಂತರ ರೂ.ಬಾಡಿಗೆ ಕಟ್ಟಡದಲ್ಲಿ ಸರ್ಕಾರಿ ಹಾಸ್ಟೆಲ್‌!

ಸಮಾಜ ಕಲ್ಯಾಣ ಸಚಿವರೇ ಒಮ್ಮೆ ಇತ್ತ ಹರಿಸಿ ನಿಮ್ಮ ಚಿತ್ತ ,ಕುರಿದೊಡ್ಡಿಗಿಂತ ಕಡೆಯಾದ ವಸತಿ ನಿಲಯಗಳು

ರಾಯಚೂರಿನ ದೇವದುರ್ಗದ ವಸತಿ ನಿಲಯದ ಸ್ಥಿತಿ.

ರಾಯಚೂರು: ಸರ್ಕಾರ ನಡೆಸುವ ವಸತಿ ನಿಲಯಗಳಿಗೆ ಭಾರೀ ಪ್ರಮಾಣದಲ್ಲೇ ಹಣ ಖರ್ಚು ಮಾಡುತ್ತಿದೆ. ಆದರೆ,
"ಎಮ್ಮೆಗಿಂತ ಹಗ್ಗ ದುಬಾರಿ'ಎನ್ನುವಂತೆ ಜಿಲ್ಲೆಯಲ್ಲಿ ಬಾಡಿಗೆಗೆ ಪಡೆದ ಕಟ್ಟಡಗಳಿಗೆ ಮಾತ್ರ ಕೋಟ್ಯಂತರ ರೂ. ಪಾವತಿಸುತ್ತಿದೆ!

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಸಲಾಗುವ ಮೆಟ್ರಿಕ್‌ ಪೂರ್ವ, ಮೆಟ್ರಿಕ್‌ ನಂತರದ ಹಾಗೂ ವಸತಿ ಶಾಲೆಗಳಿಗೆ ಜಿಲ್ಲೆಯಲ್ಲಿ ಅರ್ಧದಷ್ಟು ಸ್ವಂತ ಕಟ್ಟಡಗಳಿಲ್ಲ. 80 ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಿದ್ದು, ಅವುಗಳಲ್ಲಿ 46ಕ್ಕೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದ 34 ವಸತಿ ಶಾಲೆಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲೂ 17ರಲ್ಲಿ 9ಕ್ಕೆ ಸ್ವಂತ ಕಟ್ಟಡಗಳಿದ್ದರೆ 8 ಬಾಡಿಗೆ ಕಟ್ಟಡಗಳಲ್ಲಿ ನಡೆಸಲಾಗುತ್ತಿದೆ. ಹೀಗೆ ಕಟ್ಟಡಗಳಿಗೆ ವಾರ್ಷಿಕ ಸರಾಸರಿ 4 ಕೋಟಿ ರೂ. ಬಾಡಿಗೆ ಪಾವತಿಯಾಗುತ್ತಿದೆ. ಇಷ್ಟಾಗಿಯೂ, ಅಲ್ಲಿ ವಿದ್ಯಾರ್ಥಿಗಳು ಕನಿಷ್ಠ ಸೌಲಭ್ಯಗಳು ಇಲ್ಲದೆ ಪರದಾಡುವಂತಾಗಿದೆ. 

ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ಎದುರೇ ಇರುವ ವೃತ್ತಿಪರ ವಸತಿ ನಿಲಯದಲ್ಲಿ ಅಗತ್ಯಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ. ಕೇವಲ 4-5 ವಿದ್ಯಾರ್ಥಿಗಳು ವಾಸಿಸುವ ಕೋಣೆಗಳಲ್ಲಿ 7-8 ವಿದ್ಯಾರ್ಥಿಗಳು ಇರ ಬೇಕಾದ ಅನಿವಾರ್ಯತೆ ಇದೆ. ಇನ್ನು, ಈ ಹಾಸ್ಟೆಲ್‌ಗೆ ಇಂದಿಗೂ ನೀರು ಸರಬರಾಜು ಆಗುತ್ತಿಲ್ಲ. ಪ್ರತ್ಯೇಕ ವಾರ್ಡನ್‌ಗಳೂ ಇಲ್ಲದಿರುವುದು ವಿಪರ್ಯಾಸ.

ಸ್ವಂತ ಕಟ್ಟಡ ನೋಡಲಸಾಧ್ಯ..!
ಸ್ವಂತ ಕಟ್ಟಡಗಳ ಸ್ಥಿತಿ ನಿಜಕ್ಕೂ ಶೋಚನೀಯ. ಸೂಕ್ತ ನೀರಿನ ಸೌಲಭ್ಯ, ಶೌಚಾಲಯ, ಸ್ನಾನಗೃಹಗಳಿಲ್ಲದೇ
ಪರದಾಡುವಂತಾಗಿರುತ್ತದೆ. ಕೋಣೆಗಳಿಗೆ ಸರಿಯಾದ ಬಾಗಿಲು,ಕಿಟಕಿಗಳಿಲ್ಲ. ಸುತ್ತಲಿನ ವಾತಾವರಣ ವಿದ್ಯಾರ್ಥಿಗಳಿಗೆ ಹೇಸಿಗೆ ಬರುವಂತಿರುತ್ತದೆ. ಕಡೇ ಪಕ್ಷ ಮೂಲಭೂತ ಸೌಲಭ್ಯವನ್ನಾದರೂ ಕಲ್ಪಿಸಿ ಎಂಬುದು ವಿದ್ಯಾರ್ಥಿಗಳ ಒತ್ತಾಸೆಯಾಗಿದೆ.

ವಸತಿ ನಿಲಯಗಳಿಗೆ ಸ್ವಂತ ಕಟ್ಟಡಗಳ ಸಮಸ್ಯೆಯಿದೆ. 14 ಕಟ್ಟಡಗಳ ಕಾಮಗಾರಿ ನಡೆದಿವೆ. ಉಳಿದ ಕಟ್ಟಡಗಳ
ಮಂಜೂರಾತಿಗೆ ಸರ್ಕಾರದಿಂದ ಯಾವುದೇ ಲಿಖೀತ ಸೂಚನೆ ಬಂದಿಲ್ಲ.

- ಸರೋಜಾ, ಸಮಾಜ ಕಲ್ಯಾಣ
ಇಲಾಖೆ ಜಿಲ್ಲಾಧಿಕಾರಿ

ಅಂಬೇಡ್ಕರ್‌ ವಸತಿ ನಿಲಯಕ್ಕೆ ವಿದ್ಯುತ್‌, ನೀರಿನ ಸೌಲಭ್ಯಕ್ಕಾಗಿ ಹೋರಾಡಿದ ನಂತರ ವಿದ್ಯುತ್‌ ಸೌಲಭ್ಯ ಕಲ್ಪಿಸಿದ್ದು, ಒಂದು ವಾರ ವಾದರೂ ನೀರಿನ ಸೌಕರ್ಯ ಇಲ್ಲ.
- ಶಿವಕುಮಾರ ಮ್ಯಾಗಳಮನಿ, ಎಸ್‌
ಎಫ್‌ಐ ಜಿಲ್ಲಾಧ್ಯಕ್ಷ

- ಸಿದ್ಧಯ್ಯಸ್ವಾಮಿ ಕುಕುನೂರು


Trending videos

Back to Top