CONNECT WITH US  

ಪ್ರತಿಭಟನೆ ಬಿಸಿ: ಕೆಂಪೇಗೌಡರ ಬಗೆಗಿನ ಹೇಳಿಕೆಗೆ ಕಾರ್ನಾಡ್‌ ಕ್ಷಮೆ

ಬೆಂಗಳೂರು : ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ವಿಮಾನ ನಿಲ್ದಾಣ ಎಂದು ಮರುನಾಮಕಾರಣ ಮಾಡಿ ಎಂದು ವಿವಾದಾತ್ಮಕ ಹೇಳಿಕೆ ನೀಡಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಖ್ಯಾತ ಸಾಹಿತಿ ಗಿರೀಶ್‌ ಕಾರ್ನಾಡ್‌ ಅವರು ಬುಧವಾರ ಕ್ಷಮೆ ಯಾಚಿಸಿದ್ದಾರೆ.

ಜೆ.ಪಿ.ನಗರದಲ್ಲಿರುವ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ನಾಡ್‌ ''ನಾನು ಯಾವುದೇ ದುರುದ್ದೇಶದಿಂದ ಹೇಳಿಕೆ ನೀಡಿರಲಿಲ್ಲ.ನಾನು ನನ್ನ ಅಭಿಪ್ರಾಯವನ್ನು ಹೇಳಿದ್ದೇನೆ ಅಷ್ಟೆ .ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ'' ಎಂದಿದ್ದಾರೆ.

ಜೋರಾದ ಪ್ರತಿಭಟನೆಯ ಕಾವು 

ಕಾರ್ನಾಡ್‌ ಹೇಳಿಕೆ ಖಂಡಿಸಿ ಒಕ್ಕಲಿಗ ಸಂಘದ ಸದಸ್ಯರು ಸಂಘದ ಅಧ್ಯಕ್ಷ ಅಪ್ಪಾಜಿ ಗೌಡ ನೇತ್ರತ್ವದಲ್ಲಿ ಬೆಂಗಳೂರು ಟೌನ್‌ ಹಾಲ್‌ ಎದುರು ಪ್ರತಿಭಟನೆ ನಡೆಸಿದರು. ಕಾರ್ನಾಡ್‌ ವಿರುದ್ಧ ಘೋಷಣೆಗಳನ್ನು ಕೂಗಿ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಷ ವ್ಯಕ್ತ ಪಡಿಸಿದರು.

ನೂರಾರು ಬಿಜೆಪಿ ಕಾರ್ಯಕರ್ತರು ಮೈಸೂರು ಮತ್ತು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಕಾರ್ನಾಡ್‌ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು. 

ಕಾರ್ನಾಡ್‌ ಹೇಳಿಕೆ ತಪ್ಪು ಸರ್ಕಾರಕ್ಕೆ ಸಂಬಂಧವಿಲ್ಲ: ಸಿಎಂ

ಕಾರ್ನಾಡ್‌ ಅವರು ನೀಡಿರುವ ಹೇಳಿಕೆ ತಪ್ಪು ,ಅದು ಅವರ ವಯಕ್ತಿಕ ಅಭಿಪ್ರಾಯ ಸರ್ಕಾರಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಯಾವುದೇ ಕಾರಣಕ್ಕೂ ಕೆಂಪೇಗೌಡ ವಿಮಾನ ನಿಲ್ದಾಣದ ಹೆಸರು ಬದಲಾಯಿಸುವುದಿಲ್ಲ ಎಂದು ಸಿಎಂ ಸ್ಪಷ್ಟನೆ ನೀಡಿದರು.

ನಿರ್ಮಲಾನಂದ ಶ್ರೀ ಸಿಎಂ ಮಾತುಕತೆ 

ಆದಿಚುಂಚನಗಿರ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅವರಿಗೆ  ಸಿಎಂ ಸಿದ್ದ ರಾಮಯ್ಯ ಕರೆ ಮಾಡಿ ಒಕ್ಕಲಿಗರು ನಡೆಸುತ್ತಿರುವ ಪ್ರತಿಭಟನೆ ನಿಲ್ಲಿಸುವಂತೆ ಹೇಳಲು ಮನವಿ ಮಾಡಿಕೊಂಡಿದ್ದಾರೆ. 

ವಿಧಾನ ಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಟಿಪ್ಪು ಜಯಂತಿ ಉದ್ಘಾಟನಾ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್‌ ಕಾರ್ನಾಡ್‌ ಮಾತನಾಡಿ  ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್‌ ವಿಮಾನ ನಿಲ್ದಾಣ ಎಂದು ಮರುನಾಮಕಾರಣ ಮಾಡುವಂತೆ ರಾಜ್ಯ ಸರಕಾರವನ್ನು ಆಗ್ರಹಿಸಿದ್ದರು.

ಕರ್ನಾಟಕ ಭಾಗದಿಂದ ಸ್ವಾತಂತ್ರ್ಯ ಹೋರಾಟದ ವಿಷಯದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಏಕೈಕ ವೀರ ಟಿಪ್ಪು ಸುಲ್ತಾನ್‌, ಅವನನ್ನು ಬಿಟ್ಟರೆ ಈ ರೀತಿಯಾಗಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಹೆಸರು ಕರ್ನಾಟಕ ಭಾಗದಿಂದ ನಮಗೆ ಇತಿಹಾಸದಲ್ಲಿ ಕಾಣಸಿಗುವುದು ಅಸಾಧ್ಯ . ಕೆಂಪೇಗೌಡ ಸ್ವಾತಂತ್ರ್ಯ ಹೋರಾಟಗಾರನಲ್ಲ, ಆತ ಕೇವಲ ಬೆಂಗಳೂರು ನಗರದ ನಿರ್ಮಾತೃ. ಹಾಗಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವುದು ಸೂಕ್ತ ಎಂದು ನನ್ನ ಅಭಿಮತ ಎಂದಿದ್ದರು.

ಮುಖ್ಯಮಂತ್ರಿ ಸಹಿತ ಸಾಹಿತ್ಯ, ರಾಜಕೀಯ ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸೇರಿದ್ದ ಸಮಾರಂಭದಲ್ಲಿ ನೀಡಿದ ಹೇಳಿಕೆ ಭಾರೀ  ವಿವಾದವಾಗಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

Trending videos

Back to Top