CONNECT WITH US  

ಯಾಕೆ ಜ್ಞಾನಪೀಠ ಕೊಟ್ರೋ?

ಬೆಂಗಳೂರು: "ಇತಿಹಾಸ ಗೊತ್ತಿಲ್ಲದ ಗಿರೀಶ್‌ ಕಾರ್ನಾಡ್‌ ಅವರಿಗೆ ಯಾವ ಕಾರಣಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರೆ ಅಂತ ಗೊತ್ತಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

ಕೆಲವು ಸರ್ಕಾರದ ಕೃಪಾಪೋಷಿತ ಸಾಹಿತಿಗಳು ಇರುತ್ತಾರೆ. ಸರ್ಕಾರವನ್ನು ಹೊಗಳಿ ಹೊಟ್ಟೆ ತುಂಬಿಸಿಕೊಳ್ಳುವುದೇ ಅವರ ಕೆಲಸ. ಅಂಥ ಕೃಪಾಪೋಷಿತ ಸಾಹಿತಿಗಳಿಂದ ಸಮಾಜ ಎಚ್ಚರದಿಂದ ಇರಬೇಕು ಎಂದೂ ಅವರು ಹೇಳಿದ್ದಾರೆ.

ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾಡಪ್ರಭು ಕೆಂಪೇಗೌಡ ಸ್ವಾತಂತ್ರÂ ಸೇನಾನಿ ಅಲ್ಲ ಅಂತ ಗಿರೀಶ್‌ ಕಾರ್ನಾಡ್‌ ಹೇಳಿದ್ದಾರೆ. ಆದರೆ, ಕೆಂಪೇಗೌಡರು ಆಳ್ವಿಕೆ ನಡೆಸಿದ್ದು 500 ವರ್ಷಗಳ ಹಿಂದೆ. ಆಗ ಬ್ರಿಟೀಷರು ಭಾರತಕ್ಕೆ ಬಂದಿರಲೇ ಇಲ್ಲ ಅನ್ನುವ ಕನಿಷ್ಟ ತಿಳುವಳಿಕೆಯೂ ಕಾರ್ನಾಡ್‌ ಅವರಿಗೆ ಇಲ್ಲವೇ? ಈ ರೀತಿ ಇತಿಹಾಸ ಗೊತ್ತಿಲ್ಲದವರಿಗೆ ಏನು ನೋಡಿ, ಯಾವ ಕಾರಣಕ್ಕೆ ಜ್ಞಾನಪೀಠ ಪ್ರಶಸ್ತಿ ಕೊಟ್ಟಿದ್ದಾರೆ ಅನ್ನುವುದು ಅರ್ಥವಾಗುತ್ತಿಲ್ಲ ಎಂದರು.

ಓಲೈಕೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲೇ ಕಾರ್ನಾಡ್‌ ಅವರು ಈ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾರ್ನಾಡರಿಗೆ ತಾವು ಆಡಿದ ಮಾತಿನ ಬಗ್ಗೆ ಪಶ್ಚಾತ್ತಾಪ ಆಗಿಲ್ಲ. ಗೃಹ ಸಚಿವರ ಸೂಚನೆ ಮೇರೆಗೆ ಕಾರ್ನಾಡರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಿದ್ದಾರೆ. ಹಾಗಾಗಿ ಅವರ ಕ್ಷಮೆಯಾಚನೆ ಕೆಂಪೇಗೌಡರ ಬಗ್ಗೆ ಆಡಿದ ಮಾತಿಗೆ ಪ್ರಾಯಶ್ಚಿತ್ತವಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿ-ಕಾಂಗ್ರೆಸ್‌ ಡೋಂಗಿತನ: ಟಿಪ್ಪು ಜಯಂತಿ ಹಾಗೂ ಗಿರೀಶ್‌ ಕಾರ್ನಾಡ್‌ ಹೇಳಿಕೆ ಮುಂದಿಟ್ಟುಕೊಂಡು ಕಾಂಗ್ರೆಸ್‌ ಹಾಗೂ ಬಿಜೆಪಿ ಡೋಂಗಿ ರಾಜಕರಣ ಮಾಡುತ್ತಿವೆ. ಗಿರೀಶ್‌ ಕಾರ್ನಾಡ್‌ ಹೇಳಿಕೆ ಬಗ್ಗೆ ಮುಖ್ಯಮಂತ್ರಿಯವರು ಸ್ಥಳದಲ್ಲೇ ಪ್ರತಿಕ್ರಿಯೆ ನೀಡಿದ್ದರೆ, ಇಷ್ಟೊಂದು ವಿವಾದ ಆಗುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.

ಬಿಹಾರದಲ್ಲಿ ಸೋತಿರುವ ಬಿಜೆಪಿಯವರು ಅದರಿಂದ ಪಾಠ ಕಲಿಯದೇ ಕೊಡಗು ಘಟನೆಯನ್ನು ಮುಂದಿಟ್ಟುಕೊಂಡು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ. ಟಿಪ್ಪು ಸುಲ್ತಾನ್‌ ಹಾಗೂ ಕೆಂಪೇಗೌಡರಿಗೆ ಯಾರೊಬ್ಬರ ದೃಢೀಕರಣ ಬೇಕಾಗಿಲ್ಲ. ಆದ್ದರಿಂದ ಈ ಇಬ್ಬರೂ ನಾಯಕರ ವಿಚಾರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಕ್ಷುಲ್ಲಕ ಹಾಗೂ ಡೋಂಗಿ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ಕೆ. ಗೋಪಾಲಯ್ಯ, ಜಮೀರ್‌ ಅಹ್ಮದ್‌ ಖಾನ್‌ ಇದ್ದರು.


Trending videos

Back to Top