CONNECT WITH US  

ಇಲಾಖೆ ಎಂಜಿನಿಯರ್‌ ನೇಮಕಕ್ಕೆ ಪ್ರತ್ಯೇಕ ಕೇಡರ್‌

ಬೆಂಗಳೂರು: ಜಲ ಸಂಪನ್ಮೂಲ ಇಲಾಖೆಗೆ ಅಗತ್ಯವಿರುವ ಎಂಜಿನಿಯರ್‌ಗಳನ್ನು ನೇಮಿಸಲು ಪ್ರತ್ಯೇಕ ಕೇಡರ್‌ ರಚನೆಗೆ ಒಪ್ಪಿಗೆ ನೀಡಲಾಗಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣಬೈರೇಗೌಡ, ಈ ಬಗ್ಗೆ ಮಾಹಿತಿ ನೀಡಿದರು.

ಜಲ ಸಂಪನ್ಮೂಲ ಇಲಾಖೆಗೆ ಅಗತ್ಯವಿರುವ ಎಂಜಿನಿಯರ್‌ಗಳನ್ನು ನೇಮಿಸಲು ಪ್ರತ್ಯೇಕ ಕೇಡರ್‌ ರಚನೆಗೆ ಒಪ್ಪಿಗೆ ನೀಡಲಾಗಿದೆ. ಆದರೆ, ಈ ಒಪ್ಪಿಗೆ ಮೀಸಲು ಬಡ್ತಿ ಆಧಾರದಲ್ಲಿ ಸುಪ್ರೀಂಕೋರ್ಟ್‌ ನೀಡುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆಂಬ ಷರತ್ತು ವಿಧಿಸಲಾಗಿದೆ. ಪ್ರಸ್ತುತ ಲೋಕೋಪಯೋಗಿ, ಜಲ ಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಗಳಿಗೆ ಲೋಕೋಪಯೋಗಿ ಇಲಾಖೆಯಿಂದಲೇ ಎಂಜಿನಿಯರ್‌ಗಳನ್ನು ನೇಮಿಸಿ ಕಳುಹಿಸಲಾಗುತ್ತಿತ್ತು.

ಇದರಿಂದಾಗಿ ಜಲ ಸಂಪನ್ಮೂಲ ಇಲಾಖೆಗೆ 5500 ಎಂಜಿನಿಯರ್‌ಗಳ ಅವಶ್ಯಕತೆ ಇದ್ದರೂ 1600ರಿಂದ 1700 ಎಂಜಿನಿಯರ್‌ಗಳು ಮಾತ್ರ ಲಭ್ಯವಾಗುತ್ತಿದ್ದರು. ಹೀಗಾಗಿ ಎಂಜಿನಿಯರ್‌ಗಳ ನೇಮಕಕ್ಕೆ ಜಲ ಸಂಪನ್ಮೂಲ ಇಲಾಖೆಯಲ್ಲಿ ಪ್ರತ್ಯೇಕ ಕೇಡರ್‌ ರಚನೆ ಮಾಡಬೇಕೆಂಬ ಪ್ರಸ್ತಾವನೆ ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ಧವಾಗಿತ್ತು ಎಂದರು.

Trending videos

Back to Top