CONNECT WITH US  

ಕಾಬೂಲ್ ನಲ್ಲಿ ಉಗ್ರರ ಗುಂಡಿನ ದಾಳಿಗೆ ಕಾರವಾರದ ವ್ಯಕ್ತಿ ಬಲಿ

ಉತ್ತರಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಮೂಲದ ವ್ಯಕ್ತಿಯನ್ನು ಅಪಹರಿಸಿ ಅಪಘಾನಿಸ್ತಾನದ ಕಾಬೂಲ್ ನಲ್ಲಿ ಹತ್ಯೆಗೈದಿದ್ದಾರೆ. ಗುರುವಾರ ಒಟ್ಟೂ ಮೂವರು ವಿದೇಶಿಗರನ್ನು ಅಪಹರಣ ಮಾಡಿದ್ದರು. ಉಗ್ರರು ಅಥವಾ ಪ್ರತ್ಯೇಕತಾವಾದಿಗಳ ಗುಂಪು ಇವರನ್ನು ಅಪಹರಣ ಮಾಡಿರಬಹುದೆಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದಾರೆ.

ಮಲೇಷ್ಯಾದ 64 ವರ್ಷದವ ವ್ಯಕ್ತಿ,  ಮ್ಯಾಸಿಡೋನಿಯಾದ 37 ವರ್ಷದ ವ್ಯಕ್ತಿಯೊಂದಿಗೆ ಭಾರತದ  ಪ್ಯಾಟ್ಸನ್ ರೋಡ್ರಿಗಸ್(39) ಸೇರಿದಂತೆ ಮೂವರನ್ನು ಹತ್ಯೆಗೈದಿದ್ದರು. ಪ್ಯಾಟ್ಸನ್ ಅವರಿಗೆ ವಿವಾಹವಾಗಿದ್ದು, ಪತ್ನಿ ಫ್ರಿಲ್ಲಾ ರೋಡ್ರಿಗಸ್(33ವರ್ಷ), ಮಗಳು ಪ್ರೆಸ್ಲಿ(5ವರ್ಷ) ಹಾಗೂ ತಂದೆ, ತಾಯಿಯನ್ನು ಅಗಲಿದ್ದಾರೆ.

ಕಾಬೂಲಿನಲ್ಲಿರುವ ಸಾಡೆಕ್ಸೋ  ಅಂತಾರಾಷ್ಟ್ರೀಯ ಫುಡ್ ಮತ್ತು ಕ್ಯಾಟರಿಂಗ್ ಸರ್ವಿಸ್ ಕಂಪನಿಯಲ್ಲಿ ಬಾಣಸಿಗರಾಗಿ ಈ ಮೂವರು ಕಾರ್ಯ ನಿರ್ವಹಿಸುತ್ತಿದ್ದರು.

ಕಚೇರಿಗಳು, ಮಿಲಿಟರಿ, ಶಾಲೆಗಳು, ಆಸ್ಪತ್ರೆ ಮೊದಲಾದ ಮಹತ್ವದ ಸ್ಥಳಗಳಿಗೆ ಸಾಡೆಕ್ಸೋ ಕಂಪನಿ ಆಹಾರವನ್ನು ಸರಬರಾಜು ಮಾಡುತ್ತದೆ. ಇದು ವಿಶ್ವದಲ್ಲೇ 2ನೇ ಅತ್ಯಂತ ದೊಡ್ಡ ಆಹಾರ ಕಂಪನಿಯಾಗಿದೆ.

ಈ ಕಂಪನಿಯಲ್ಲಿ ಕಳೆದ ೧೦ ವರ್ಷ ದಿಂದ ಬಾಣಸಿಗನಾಗಿ ಕಾರವಾರದ ಪ್ಯಾಟ್ಸನ್ ರೋಡ್ರಿಗಸ್ ಕಾರ್ಯನಿರ್ವಹಿಸುತ್ತಿದ್ದ.  ನಿನ್ನೆ ದಿನ ತಮ್ಮ ಕೆಲಸದ ನಿಮಿತ್ತ ವಾಹನದಲ್ಲಿ ಮಲೇಶಿಯ ಮೂಲದ  ಇಬ್ಬರೊಂದಿಗೆ ಹೋಗುತ್ತಿದ್ದಾಗ ಉಗ್ರರು ಅವರನ್ನು ಕಾರಿನ ಸಮೇತ ಅಪಹರಿಸಿದ್ದರು

ಬಳಿಕ  ಪಾರ್ಕಿಂಗ್ ಏರಿಯಾಗೆ ಕೊಂಡೊಯ್ದು  ಕಾರಿನಲ್ಲಿಯೇ ಈ ಮೂವರನ್ನು ಗುಂಡಿಕ್ಕಿ ಕೊಲೆಗೈದಿದ್ದು, ಅವರ ದೇಹಗಳು ಕಾರಿನೊಳಗೆ ಪತ್ತೆಯಾಗಿತ್ತು.

ಕಾರು ಚಾಲಕನನ್ನು ಹಾಗೇ ಬಿಟ್ಟು ಹೋಗಿದ್ದು ಆತನನ್ನು ಅಪ್ಘಾನ್ ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿರುವ ಗುರುತಿನ ಚೀಟಿಯಿಂದಾಗಿ ಈ ಮೂವರ ಗುರುತು ಪತ್ತೆಯಾಗಿದೆ. ಇನ್ನೆರಡು ದಿನದಲ್ಲಿ ಕಳೆಬರಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ತಿಳಿದು ಬಂದಿದೆ.

Trending videos

Back to Top