CONNECT WITH US  

ಬಂಗಾರದ ಮನುಷ್ಯ ಖ್ಯಾತಿಯ ನಿರ್ದೇಶಕ ಎಸ್. ಸಿದ್ದಲಿಂಗಯ್ಯ ಇನ್ನಿಲ್ಲ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಎಚ್1ಎನ್1ನಿಂದ ಬಳಲುತ್ತಿದ್ದ ಕನ್ನಡಚಿತ್ರರಂಗದ ಖ್ಯಾತ ಚಿತ್ರ ನಿರ್ದೇಶಕ ಎಸ್.ಸಿದ್ದಲಿಂಗಯ್ಯ(78)ನವರು ಗುರುವಾರ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯನವರಿಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 


ಸಾಮಾಜಿಕ ಕಳಕಳಿಯ ಚಿತ್ರಗಳ ನಿರ್ದೇಶನಕ್ಕೆ ಹೆಸರಾಗಿದ್ದ ಸಿದ್ದಲಿಂಗಯ್ಯನವರು, 1969ರಲ್ಲಿ ಮೊದಲ ಬಾರಿಗೆ ಮೇಯರ್ ಮುತ್ತಣ್ಣ ಚಿತ್ರ ನಿರ್ದೇಶಿಸಿದ್ದರು. ಆ ನಂತರ ಬಂಗಾರದ ಮನುಷ್ಯ, ಭೂತಯ್ಯನ ಮಗ ಅಯ್ಯು ಸೇರಿದಂತೆ ಕನ್ನಡದ 23 ಚಿತ್ರಗಳನ್ನು ನಿರ್ದೇಶಿಸಿದ್ದರು.

ಸಿದ್ದಲಿಂಗಯ್ಯನವರು 1993-94ನೇ ಸಾಲಿನಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, 2010ರಲ್ಲಿ ಬಿ.ಸರೋಜಾದೇವಿ ಪ್ರಶಸ್ತಿಗೆ ಭಾಜನರಾಗಿದ್ದರು.

1936ರಲ್ಲಿ ಜನಿಸಿದ್ದ ಎಸ್.ಸಿದ್ದಲಿಂಗಯ್ಯನವರು ಕಥೆಗಾರಗಾಗಿ, ಸಂಭಾಷಣೆಕಾರರಾಗಿ, ನಿರ್ಮಾಪಕ, ನಿರ್ದೇಶಕರಾಗಿ ಹೆಸರು ಮಾಡಿದ್ದರು. 1969ರಲ್ಲಿ ದ್ವಾರಕೀಶ್ ನಿರ್ಮಾಣದ ಮೇಯರ್ ಮುತ್ತಣ್ಣ ಸಿನಿಮಾವನ್ನು ನಿರ್ದೇಶಿಸುವ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಅವರಿಗೆ ಡಾ.ರಾಜ್ ಅಭಿನಯದ ಬಂಗಾರದ ಮನುಷ್ಯ ಚಿತ್ರ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಸಿದ್ದಲಿಂಗಯ್ಯನವರು ಡಾ.ರಾಜ್, ಭಾರತಿ ಜೋಡಿಗೆ ಸತತ ಐದು ಸಿನಿಮಾಗಳನ್ನು ನಿರ್ದೇಶಿಸಿದ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಬಂಗಾರದ ಮನುಷ್ಯ ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ, ಭೂತಯ್ಯನ ಮಗ ಅಯ್ಯು ಸಿನಿಮಾಗೆ ಉತ್ತಮ ಚಿತ್ರಕಥೆ ಪ್ರಶಸ್ತಿ, ಉತ್ತಮ ಚಿತ್ರ ಪ್ರಶಸ್ತಿ. ತಮಿಳು ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಸಿದ್ದಲಿಂಗಯ್ಯನವರ ಪುತ್ರ ಮುರಳಿ ಕೂಡಾ 2010 ಸೆಪ್ಟೆಂಬರ್ 8ರಂದು ನಿಧನರಾಗಿದ್ದರು. ಮುರಳಿ ಪುತ್ರ, ಸಿದ್ದಲಿಂಗಯ್ಯನವರ ಮೊಮ್ಮಗ ಅಥರ್ವಾ ಈಗ ತಮಿಳು ಚಿತ್ರರಂಗದಲ್ಲಿ ಹೆಸರು ಮಾಡುತ್ತಿದ್ದಾರೆ.

Trending videos

Back to Top