CONNECT WITH US  

ಕಾರ್ನಾಡ್‌, ಮರುಳಸಿದ್ದಪ್ಪ ವಿರುದ್ಧ ಬಿಜೆಪಿ ಗರಂ

ಬೆಂಗಳೂರು: ಸಾರ್ವಜನಿಕವಾಗಿ ಗೋಮಾಂಸ ತಿನ್ನಿಸುವ ಮೂಲಕ ಸಾಹಿತಿಗಳಾದ ಗಿರೀಶ್‌ ಕಾರ್ನಾಡ್‌ ಹಾಗೂ ಕೆ. ಮರುಳಸಿದ್ದಪ್ಪ ಅವರು ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಗಿರೀಶ್‌ ಕಾರ್ನಾಡ್‌ ಮತ್ತು ಕೆ. ಮರುಳಸಿದ್ದಪ್ಪ ಅವರ ಈ ವರ್ತನೆ ಸಮಾಜದ ಸೌಹಾರ್ದತೆ ಕದಡುವ ಮತ್ತು ವಿಕೃತ ಮನಸ್ಥಿತಿಯ ಪ್ರದರ್ಶನವಾಗಿದೆ. ಈ ರೀತಿ ನಾಗರಿಕ ಸಮಾಜ ತಲೆತಗ್ಗಿಸುವಂತೆ ನಡೆದುಕೊಂಡಿರುವ ಇಬ್ಬರೂ ಸಾಹಿತಿಗಳು ಜನತೆಯಲ್ಲಿ ಬೇಷರತ್‌ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಈ ಬಗ್ಗೆ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌ ಈಶ್ವರಪ್ಪ, ರಾಷ್ಟ್ರಘಾತುಕ ಮನೋಭಾವದ ಗಿರೀಶ್‌ ಕಾರ್ನಾಡ್‌ ಅವರ ಈ ಕೃತ್ಯ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಕಾರ್ನಾಡರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಪ್ರಶಸ್ತಿ ಮತ್ತು ಖ್ಯಾತಿಯಿಂದಾಗಿ ಗಿರೀಶ್‌ ಕಾರ್ನಾಡ್‌ ಮತ್ತು ಮರುಳಸಿದ್ದಪ್ಪ ಅವರ ಹೇಳಿಕೆಗಳಿಗೆ ಹೆಚ್ಚು ಪ್ರಚಾರ ಸಿಗುತ್ತದೆ. ಹೀಗಿರುವಾಗ ಒಳ್ಳೆಯ ವಿಚಾರಗಳಿಗೆ ಪ್ರಚಾರ ನೀಡುವುದನ್ನು ಬಿಟ್ಟು ಈ ರೀತಿ ಸಮಾಜಘಾತುಕ ವಿಚಾರಗಳಿಗೆ ಪ್ರಚೋದನೆ ನೀಡುತ್ತಿದ್ದಾರೆ. ಒಳ್ಳೆಯ ವಿಚಾರಗಳಿಗೆ ಪ್ರಚಾರ ಕೊಡುವುದಾದರೆ ಕೊಡಿ ಇಲ್ಲ ಅಂದರೆ ಬಾಯಿ ಮುಚ್ಚಿ ಕುಳಿತುಕೊಳ್ಳಿ ಎಂದು ಹರಿಹಾಯ್ದ ಈಶ್ವರಪ್ಪ, ಈ ಸಾಹಿತಿಗಳ ಹುಚ್ಚಾಟಗಳನ್ನು ನೋಡಿ ಹಿಂದೂಗಳು ಸುಮ್ಮನಿದ್ದಾರೆ. ಆದರೆ ಅವರ ಆಕ್ರೋಶ ಯಾವಾಗ ಸ್ಫೋಟಗೊಳ್ಳುತ್ತದೆ ಎಂಬುದು ಗೊತ್ತಿಲ್ಲ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಾತನಾಡಿ, ಕಾರ್ನಾಡರು ತಮ್ಮ ಈ ವರ್ತನೆಯಿಂದ ಜ್ಞಾನಪೀಠ ಪ್ರಶಸ್ತಿಯ ಘನತೆ ಕಡಿಮೆ ಮಾಡಿದ್ದಾರೆ. ಅನೇಕ ಪ್ರಶಸ್ತಿಗಳನ್ನು ಪಡೆದಿರುವ ಅವರು ಅವುಗಳ ಘನತೆಗೆ ತಕ್ಕಂತೆ ನಡೆದುಕೊಂಡಿಲ್ಲ. ಪ್ರಚೋದನೆ ಮೂಲಕ ಪ್ರಚಾರ ಪಡೆಯುವ ಗೀಳು ಅಂಟಿಸಿಕೊಂಡಿರುವ ಕಾರ್ನಾಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೋಮಾಂಸ ತಿನ್ನಲು ಪ್ರಚೋದಿಸಿದ್ದಾರೆ. ಗೋಹತ್ಯೆ ನಿಷೇಧದ ಬಗ್ಗೆ ಬಿಜೆಪಿ ಹೇಳುವುದಕ್ಕಿಂತ ಮೊದಲೇ ಗಾಂಧೀಜಿಯವರು ಹೇಳಿದ್ದರು. ಆದರೆ ಗುರುವಾರ ನಡೆದ ಘಟನೆ ದೇಶದ ಪರಂಪರೆಗೆ ವಿರುದ್ಧ. ಜನತೆ ಇಂತಹ ಘಟನೆಗಳಿಗೆ ಮಾನ್ಯತೆ ನೀಡಬಾರದು ಎಂದು ಮನವಿ ಮಾಡಿದರು.

ಶಾಸಕ ಎಸ್‌.ಸುರೇಶ್‌ಕುಮಾರ್‌ ಮಾತನಾಡಿ, ಸಂವೇದನಾಶೀಲ ಚಿಂತಕರೆ ಇಂತಹ ಈ ರೀತಿ ಅಪ್ರಬುದ್ಧರಾಗಿ ನಡೆದುಕೊಂಡಿರುವುದು ಖಂಡನೀಯ. ನಡುಬೀದಿಯಲ್ಲಿ ಗೋಮಾಂಸ ಹಂಚಿ ವಿಕೃತ ಆನಂದ ಅನುಭವಿಸಿದ ಕಾರ್ನಾಡ್‌ ಮತ್ತು ಮರುಳಸಿದ್ದಪ್ಪ ಎಂತಹ ಚಿಂತಕರು ಎಂದು ಪ್ರಶ್ನಿಸಿದ ಅವರು, ಸಮಾಜದ ಸೌಹಾರ್ದತೆ ಕೆಡಿಸುವ ಈ ನಡವಳಿಕೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Trending videos

Back to Top