CONNECT WITH US  

ಗೋಮಾಂಸ ಭಕ್ಷ ಣೆ ಖಂಡಿಸಿ ಅದೇ ಸ್ಥಳದಲ್ಲಿ ನಾಡಿದ್ದು ಪ್ರತಿಭಟನೆ: ಚಿಮೂ

ಬೆಂಗಳೂರು: ಪುರಭವನದ ಮುಂದೆ ಗೋಮಾಂಸ ಭಕ್ಷಿಸಿದ್ದನ್ನು ಖಂಡಿಸಿ ಸೋಮವಾರ ಅದೇ ಜಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಇದೇ ವೇಳೆ ಸಂಶೋಧಕ ಎಂ. ಚಿದಾನಂದ ಮೂರ್ತಿ ಹೇಳಿದರು. ಸ್ವಾತಂತ್ರ್ಯಯೋಧ ಎಚ್‌.ಎಸ್‌. ದೊರೆಸ್ವಾಮಿ ಅವರ 98ನೇ ಹುಟ್ಟುಹಬ್ಬದ ಅಂಗವಾಗಿ ಕನ್ನಡ ಗೆಳೆಯರ ಬಳಗ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್‌ನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ "ದೊರೆಸ್ವಾಮಿ-98' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೆಲವರು ಗೋ ಮಾಂಸ ಕೂಡ ಇತರೆ ಪ್ರಾಣಿಗಳ ಮಾಂಸದಂತೆ ಒಂದು ಮಾಂಸ. ತಿಂದರೆ ತಪ್ಪೇನು ಎನ್ನುತ್ತಾರೆ. ಅವರಿಗೆ ನಾನು ಹೇಳುವುದೇನೆಂದರೆ ನಮ್ಮನ್ನು ಹೆತ್ತ ತಾಯಿ ಕೂಡ ಒಬ್ಬ ಸ್ತ್ರೀ.ಆದರೆ ಆಕೆಯನ್ನು ಇತರೆ ಸ್ತ್ರೀಯಂತೆ ನಾವು ನೋಡುವುದಿಲ್ಲ. ಆಕೆಗೆ ಅವಳದ್ದೇ ಆದ ಸ್ಥಾನಮಾನ, ಗೌರವ, ಪೂಜ್ಯತೆಯನ್ನು ನೀಡಿದ್ದೇವೆ. ಅದೇ ರೀತಿ ಗೋವು ಕೂಡ ಒಂದು ಪ್ರಾಣಿಯಾದರೂ ನಮ್ಮ ಸಂಸ್ಕೃತಿ ಸಂಪ್ರದಾಯದಲ್ಲಿ ವಿಶೇಷ ಸ್ಥಾನವಿದೆ. ಇದನ್ನು ಅರ್ಥಮಾಡಿಕೊಳ್ಳಬೇಕು ಎಂದರು. ದೊರಸ್ವಾಮಿ ಟೀಕೆ: ಸತತ ಮುಸ್ಲಿಮರೇ ಅಧಿಕಾರದಲ್ಲಿರುವ ಕಾಶ್ಮೀರದಲ್ಲೇ ಗೋವಧೆಗೆ 10 ವರ್ಷ
ಕಠಿಣ ಶಿಕ್ಷೆಯ ಕಾನೂನಿದೆ. ಭಾರತದಲ್ಲಿ ಗೋವಿಗೆ ವಿಶಿಷ್ಟ ಸ್ಥಾನ ನೀಡಿದ್ದೇವೆ ಎಂದು ಎಚ್‌.ಎಸ್‌. ದೊರಸ್ವಾಮಿ ಹೇಳಿದರು. ಗೋವು ಪವಿತ್ರ. ಅದರ ದೇಹದಲ್ಲಿ 37 ಕೋಟಿ ದೇವರು ನೆಲೆಸಿದ್ದಾರೆ ಅಂತ ನಾನು ಈ ಮಾತು ಹೇಳುತ್ತಿಲ್ಲ. ಗೋವೂ ಒಂದು ಪ್ರಾಣಿ. ಇತರೆ ಪ್ರಾಣಿಗಳ ಮಾಂಸದಂತೆ ಅದರದ್ದೂ ಮಾಂಸವಷ್ಟೆ ಎಂದು ಯೋಚಿಸಬೇಡಿ. ಗೋವು ರೈತನ ಅವಿಭಾಜ್ಯ ಅಂಗ. ಅವನ ಮನೆಯ ಒಬ್ಬ ಸದಸ್ಯ. ಇದನ್ನು
ಅರ್ಥ ಮಾಡಿಕೊಳ್ಳಬೇಕು. ಯಾರು ಎಷ್ಟೇ ದೊಡ್ಡವರಾಗಿರಲಿ ಈ ವಿಚಾರದಲ್ಲಿ ಅವಿವೇಕವಾಗಿ ಕಾನೂನು ಮೀರಿ ವರ್ತಿಸಿದವರಿಗೆ ಶಿಕ್ಷೆಯಾಗಬೇಕು ಎಂದು ಪ್ರತಿಪಾದಿಸಿದರು.

Trending videos

Back to Top