CONNECT WITH US  

ಬಹಳ ನಕ್ಸಲರಿಂದ ಶರಣಾಗತಿ ಪ್ರಸ್ತಾಪ: ಸಚಿವ ಜಾರ್ಜ್‌

ಬೆಂಗಳೂರು:ನಕ್ಸಲರು ಶರಣಾದರೆ ವಿಶೇಷ ಪ್ಯಾಕೇಜ್‌ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸರ್ಕಾರ ದಾರಿ ಮಾಡಿಕೊಡುತ್ತದೆ. ಶರಣಾಗದಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಎಚ್ಚರಿಸಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರಿಂದ ಅಹವಾಲು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗುವಂತೆ ಈಗಾಗಲೇ ನಕ್ಸಲರಿಗೆ ಹಲವು ಬಾರಿ ಸೂಚನೆ ನೀಡಲಾಗಿದೆ. ಶರಣಾಗುವವರಿಗೆ ಸರ್ಕಾರ ವಿಶೇಷ ಪ್ಯಾಕೇಜ್‌ ಅಡಿಯಲ್ಲಿ ಜೀವನಕ್ಕೆ ಅಗತ್ಯ ಸೌಲಭ್ಯ ಒದಗಿಸುವುದಾಗಿಯೂ ಭರವಸೆ ನೀಡಲಾಗಿದೆ. ಬಹಳಷ್ಟು ಜನ ನಕ್ಸಲರು ಶರಣಾಗತಿ ಪ್ರಸ್ತಾವನೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ನಕ್ಸಲ್‌ ಚಟುವಟಿಕೆ ನಿಯಂತ್ರಣದಲ್ಲಿದೆ. ಬೇರೆ ರಾಜ್ಯದಿಂದ ಬರುವ ನಕ್ಸಲರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ತಿಳಿಸಿದರು.

ಕೆರೆ ಒತ್ತುವರಿ ತೆರವು ಕುರಿತು ಪ್ರತಿಕ್ರಿಯಿಸಿ, ನಿರ್ಜೀವ ಕೆರೆಗಳಲ್ಲಿ ನಿರ್ಮಾಣವಾಗಿರುವ ಬಡಾವಣೆ ನಿವಾಸಿಗಳ ಹಿತರಕ್ಷಣೆಗಾಗಿ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ. ಈ ಸಂಬಂಧ ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಲಕ್ಷ್ಮಣ್‌ರಾವ್‌ ವರದಿ ಆಧರಿಸಿ ಬೆಂಗಳೂರಿನಲ್ಲಿರುವ ಕೆರೆಗಳ ಸಮಗ್ರ ಅಧ್ಯಯನ ನಡೆಸಿ ನಂತರ ನಿರ್ಜೀವ ಕೆರೆಗಳ ಸ್ಥಳದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಎಂದರು.

ಸಚಿವರ ಮೌಲ್ಯಮಾಪನ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹೈಕಮಾಂಡ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೌಲ್ಯಮಾಪನ ನಡೆಸುವುದಾದರೆ ಯಾವ ಅಭ್ಯಂತರವೂ ಇಲ್ಲ ಎಂದು ಹೇಳಿದರು.

Trending videos

Back to Top