CONNECT WITH US  

ಶಾಸಕರ 730 ಕೋಟಿ ಅಭಿವೃದ್ಧಿ ನಿಧಿ ಇನ್ನೂ ಬಳಕೆಯಾಗಿಲ್ಲ

ವಿಧಾನಪರಿಷತ್‌: ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಿಡುಗಡೆ ಮಾಡುವಲ್ಲಿ ಜಿಲ್ಲಾಧಿಕಾರಿ ಕಚೇರಿಯಿಂದ ಆಗುತ್ತಿರುವ ವಿಳಂಬ ಮತ್ತು ಕಾಮಗಾರಿ ಪ್ರಗತಿ ಕುಂಠಿತವಾಗುತ್ತಿರುವ ವಿಚಾರ ಗುರುವಾರ ಎಲ್ಲಾ ಸದಸ್ಯರ ಅಸಮಾಧಾನಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ 730 ಕೋಟಿ ರೂ. ಬಳಕೆಯಾಗದೆ ಉಳಿದುಕೊಂಡಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆ ಬಿಡುಗಡೆ ಮಾಡುತ್ತಿದ್ದರೂ ಅಲ್ಲಿಂದ ಬಿಡುಗಡೆಯಾಗುವುದು ವಿಳಂಬವಾಗುತ್ತಿದೆ. ಹೀಗಾಗಿ ಅನುದಾನ ಬಳಕೆಯಾಗದೆ ಉಳಿಯುತ್ತಿದೆ ಎಂದು ಸದಸ್ಯರು ಪಕ್ಷಬೇಧ ಮರೆತು ಆರೋಪಿಸಿದರು.

"ಈ ಕುರಿತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಶೀಘ್ರ ಅನುದಾನ ಬಿಡುಗಡೆ ಮಾಡಲು ಸೂಚಿಸಲಾಗುವುದು. ಅಲ್ಲದೆ, ಈ ಜವಾಬ್ದಾರಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಹಣ ಬಿಡುಗಡೆ ವಿಳಂಬವಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಸರ್ಕಾರದ ಪರವಾಗಿ ಸಭಾನಾಯಕ ಎಸ್‌.ಆರ್‌.ಪಾಟೀಲ್‌ ಭರವಸೆ ನೀಡಿದರು.

ವಿಶೇಷ ನಿಯಮದಡಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯೆ ಮೋಟಮ್ಮ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ತಾವು ಮಂಡ್ಯ, ಹಾಸನ ಮತ್ತು ಬೆಂಗಳೂರು ನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕೆಲವು ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಿದ್ದೆ. ಅದರಂತೆ ನೋಡಲ್‌ ಅಧಿಕಾರಿಯಾದ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈ ಮೂರೂ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ್ದರು. ಇದಾಗಿ ಒಂದು ವರ್ಷ ಕಳೆದರೂ ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದರು. ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೆ.ಬಿ.ಶಾಣಪ್ಪ, ತಾವು ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ಕೋಲಾರ ಜಿಲ್ಲೆಯ ಶಾಲೆಯೊಂದಕ್ಕೆ ಹಣ ಮಂಜೂರು ಮಾಡಿದ್ದೆ. ಆದರೆ, ಕೋಲಾರ ಜಿಲ್ಲಾಧಿಕಾರಿಗಳು ಇನ್ನೂ ಹಣಬಿಡುಗಡೆ ಮಾಡಿಲ್ಲ ಎಂದರು. ಅಷ್ಟರಲ್ಲಿ ಅನೇಕ ಸದಸ್ಯರು ಎದ್ದುನಿಂತು, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯ ಹಣ ಬಿಡುಗಡೆಯಾಗುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಟ್ಟರು.

730 ಕೋಟಿ ರೂ. ಬಳಕೆಯಾಗಿಲ್ಲ- ಕೆಎಸ್‌ಈ: "ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಪ್ರತಿ ವರ್ಷ ಒಬ್ಬ ಶಾಸಕನಿಗೆ 2 ಕೋಟಿ ರೂ. ಬಿಡುಗಡೆಯಾಗುತ್ತದೆ. ಆದರೆ, ಈ ಎಲ್ಲಾ ಮೊತ್ತಕ್ಕೆ ಒಂದೇ ಬಾರಿ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ನಮಗೆ ನಿರ್ದೇಶನ ಬರುತ್ತಿದೆ' ಎಂದು ಅನೇಕ ಸದಸ್ಯರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ, "ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ ಸರ್ಕಾರ ಅನುದಾನ ಬಿಡುಗಡೆ ಮಾಡಿದರೂ ಅದನ್ನು ಹಂಚಿಕೆ ಮಾಡಲು ಜಿಲ್ಲಾಧಿಕಾರಿಗಳು ವಿಳಂಬ ಮಾಡುತ್ತಿರುವುದರಿಂದ 730 ಕೋಟಿ ರೂ. ಬಳಕೆಯಾಗದೆ ಉಳಿದುಕೊಂಡಿದೆ. ಆದ್ದರಿಂದ ಇದಕ್ಕೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್‌ ಸದಸ್ಯ ವಿ.ಎಸ್‌.ಉಗ್ರಪ್ಪ ಮಾತನಾಡಿ, ತಮ್ಮ ಕ್ಷೇತ್ರದಲ್ಲಿ ಬಹುಪಯೋಗಿ ಸಭಾಭವನ ನಿರ್ಮಿಸಲೆಂದು ನಿರ್ಮಿತಿ ಕೇಂದ್ರಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಕಮಿಷನ್‌ಗಾಗಿ ಉಪಗುತ್ತಿಗೆ ನೀಡದೆ ನಿರ್ಮಿತಿ ಕೇಂದ್ರದಿಂದಲೇ ಪಾರದರ್ಶಕವಾಗಿ ಕೆಲಸ ಮಾಡಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿ ಚಂದ್ರಶೇಖರ್‌ ಎಂಬುವರಿಗೆ ಸೂಚಿಸಿದ್ದೆ. ಇದಾಗಿ ಎಂಟು ತಿಂಗಳು ಕಳೆದರೂ ಕಾಮಗಾರಿ ಆರಂಭವಾಗಿಲ್ಲ. ಅಧಿಕಾರಿ ಚಂದ್ರಶೇಖರ್‌ ಕೂಡ ಕೈಗೆ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಪರಿಶೀಲನಾ ಸಭೆ ಕರೆಯಲಾಗುವುದು: ಸದಸ್ಯರ ಆರೋಪಿಗಳಿಗೆ ಉತ್ತರಿಸಿದ ಸಭಾನಾಯಕ ಎಸ್‌.ಆರ್‌.ಪಾಟೀಲ್‌, ಸದಸ್ಯರಾದ ಮೋಟಮ್ಮ ಮತ್ತು ಕೆ.ಬಿ.ಶಾಣಪ್ಪ ಅವರು ನೀಡಿರುವ ಮಾಹಿತಿಯಂತೆ ತಕ್ಷಣ ಸಂಬಂಧಿಸಿದ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಕೇಳಲಾಗುವುದು ಮತ್ತು ಹಣ ಬಿಡುಗಡೆಗೆ ಆದೇಶಿಸಲಾಗುವುದು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿ ಬಳಕೆ ಕುರಿತಂತೆ ಪರೀಶೀಲನಾ ಸಭೆ ಕರೆಯಲಾಗುವುದು. ಅಲ್ಲದೆ, ಎಲ್ಲಾ ಜಿಲ್ಲಾಧಿಕಾರಿಗಳನ್ನು ಇದಕ್ಕೆ ಜವಾಬ್ದಾರರನ್ನಾಗಿ ಮಾಡಿ ಸುತ್ತೋಲೆ ಹೊರಡಿಸಲಾಗುವುದು. ಹಣ ಬಿಡುಗಡೆ ವಿಳಂಬವಾದಲ್ಲಿ ಅವರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Trending videos

Back to Top