CONNECT WITH US  

ಪೆರೋಲ್‌ ಮೇಲೆ ಹೋದ 36 ಕೈದಿಗಳು ಗಾಯಬ್‌!

ಬೆಂಗಳೂರು: ರಾಜ್ಯದ ಕಾರಾಗೃಹಗಳಿಂದ ಪೆರೋಲ್‌ ಮೇಲೆ ಹೊರಹೋದ 45 ಕೈದಿಗಳ ಪೈಕಿ 36 ಮಂದಿ ಜೈಲಿಗೆ ವಾಪಸ್ಸಾಗದ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಜೈಲು ಪ್ರಾಧಿಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೆ, ಪೆರೋಲ್‌ ಮೇಲೆ ಜೈಲಿನಿಂದ ಹೊರಹೋದವರನ್ನು ಮರಳಿ ಜೈಲಿಗೆ ಕರೆತರಲು ಈವರೆಗೂ ಕೈಗೊಂಡ ಕ್ರಮಗಳು ಹಾಗೂ ವಹಿಸಿದ ಶ್ರಮದ ಬಗ್ಗೆ ಸೆ. 19ರಂದು ಖುದ್ದು ಹಾಜರಾಗಿ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಕಾರಾಗೃಹಗಳ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ ಸೋಮವಾರ ಸೂಚಿಸಿದೆ.

ಪೆರೋಲ್‌ ಮೇಲೆ ಹೊರಹೋದವರ ವಿಚಾರವಾಗಿ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಮೋಹನ ಶಾಂತನ ಗೌಡರ್‌ ಮತ್ತು ನ್ಯಾ.ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠವು ಈ ಸೂಚನೆ ನೀಡಿತು.

ಅಲ್ಲದೆ, 2007ರಿಂದ ಈವರೆಗೂ ಪೆರೋಲ್‌ ಮೇಲೆ ಹೊರಹೋದ 45 ಕೈದಿಗಳ ಪೈಕಿ 36 ಮಂದಿ ಜೈಲಿಗೆ ಮರಳದೆ ತಲೆಮರೆಸಿಕೊಂಡಿದ್ದರೂ ಅವರನ್ನು ವಶಕ್ಕೆ ಪಡೆಯುವ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಏಕೆ ಇಷ್ಟು ದಿನಗಳಾದರೂ ಅವರನ್ನು ಪತ್ತೆ ಹಚ್ಚಿಲ್ಲ? ಅವರನ್ನು ಪತ್ತೆ ಹಚ್ಚಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಂದು ಸರ್ಕಾರಿ ಅಭಿಯೋಜಕರನ್ನು ಗಂಭೀರವಾಗಿ ಪ್ರಶ್ನಿಸಿತು. ಜತೆಗೆ, ಈ ವಿಚಾರದಲ್ಲಿ ಜೈಲು ಪ್ರಾಧಿಕಾರಗಳ ಕಾರ್ಯವೈಖರಿಗೆ ಅಸಮಾಧಾನವನ್ನೂ ವ್ಯಕ್ತಪಡಿಸಿತು.

ಪೆರೋಲ್‌ ಮೇಲೆ ಹೊರಹೋದ ಕೈದಿಗಳಿಗೆ ಶ್ಯೂರಿಟಿ ನೀಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಇದೇ ವೇಳೆ ಜೈಲು ಪ್ರಾಧಿಕಾರಕ್ಕೆ ನ್ಯಾಯಪೀಠ ನಿರ್ದೇಶಿಸಿದೆ.


Trending videos

Back to Top