CONNECT WITH US  

ಜಾಲಪ್ಪಗೆ ಅರಸು ಪ್ರಶಸ್ತಿ

ಬೆಂಗಳೂರು: ಸಾಮಾಜಿಕ ನ್ಯಾಯದ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಶತಮಾನೋತ್ಸವ ವರ್ಷದಲ್ಲಿ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಗೆ ಹಿರಿಯ ರಾಜಕಾರಣಿ ಹಾಗೂ ಕಾಂಗ್ರೆಸ್‌ ಮುಖಂಡ ಆರ್‌.ಎಲ್‌.ಜಾಲಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ 2015ನೇ ಸಾಲಿನ ಅರಸು ಪ್ರಶಸ್ತಿ ಆಯ್ಕೆಯನ್ನು ಪ್ರಕಟಿಸಿದ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಪ್ರೊ.ಓ.ಅನಂತರಾಮಯ್ಯ, ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ವರ್ಷದಲ್ಲಿ ನಾಡಿನ ಹಿರಿಯ ಚೇತನ ಆರ್‌.ಎಲ್‌.ಜಾಲಪ್ಪ ಅವರನ್ನು ಅರಸು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿರಲಿಲ್ಲ. ಆಯ್ಕೆ ಸಮಿತಿ ತನ್ನ ಮಟ್ಟದಲ್ಲಿ 20 ಮಂದಿಯ ಮಾಹಿತಿಯನ್ನು ಸಂಗ್ರಹಿಸಿತ್ತು. ಅದರ ಆಧಾರದಲ್ಲಿ ದೇವರಾಜ ಅರಸು ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಹಿಂದುಳಿದ ವರ್ಗಗಳಲ್ಲಿ ಸ್ವಾಭಿಮಾನದ ಪ್ರಜ್ಞೆ ಮೂಡಿಸಿ, ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿರುವ ಜಾಲಪ್ಪ ಅವರನ್ನು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದರು. ಈ ವಿಚಾರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಿಲ್ಲ ಎಂದು ಅನಂತರಾಮಯ್ಯ ಅವರು ಜಾಲಪ್ಪ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಆ.20ಕ್ಕೆ ಪ್ರಶಸ್ತಿ ಪ್ರದಾನ: ದೇವರಾಜ ಅರಸು ಜನ್ಮಶತಮಾನೋತ್ಸವದ ಅಂಗವಾಗಿ ಆ.20ರಂದು ಮೈಸೂರು ವಿವಿ "ಮಾನಸ ಗಂಗೋತ್ರಿ'ಯ ಬಯಲು ರಂಗಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆರ್‌.ಎಲ್‌.ಜಾಲಪ್ಪ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು 2 ಲಕ್ಷ ರೂ. ನಗದು ಮತ್ತು ಪ್ರಶಸ್ತಿ, ಫ‌ಲಕ ಒಳಗೊಂಡಿರುತ್ತದೆ ಎಂದು ಅನಂತರಾಯಯ್ಯ ತಿಳಿಸಿದರು.

ಸಚಿವರಿಂದ ಸಮರ್ಥನೆ: ಅರಸು ಪ್ರಶಸ್ತಿಗೆ ರಾಜಕಾರಣಿ ಮತ್ತು ಆಡಳಿತ ಪಕ್ಷದ ಮುಖಂಡರಾಗಿರುವ ಜಾಲಪ್ಪ ಅವರನ್ನು ಆಯ್ಕೆ ಮಾಡಿರುವ ಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸಮರ್ಥಿಸಿಕೊಂಡರು.

Trending videos

Back to Top