CONNECT WITH US  

ಎಚ್‌ಐವಿ ಸೋಂಕಿತರೆಲ್ಲ ಏಡ್ಸ್‌ ರೋಗಿಗಳಲ್ಲ

ರಾಮನಗರ: ಎಚ್‌ಐವಿ ಸೋಂಕಿಗೂ ಏಡ್ಸ್‌ ರೋಗಕ್ಕೂ ವ್ಯತ್ಯಾಸವಿದೆ. ಎಚ್‌ಐವಿ ಸೋಂಕಿತರೆಲ್ಲ ಏಡ್ಸ್‌ ರೋಗಿಗಳಲ್ಲ. ಸೂಕ್ತ ಚಿಕಿತ್ಸೆ ದೊರೆತರೆ ಎಚ್‌ಐವಿಯನ್ನು ಹತೋಟಿಯಲ್ಲಿಟ್ಟು ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ರೋಗಿಗಳಂತೆ ಸಾಮಾನ್ಯ ಜೀವನ ನಡೆಸಬಹುದು ಎಂದು ಸಮರ ಸೊಸೈಟಿಯ ಅಧ್ಯಕ್ಷ ಆದಿನಾರಾಯಣ ಹೇಳಿದರು. ನಗರದ ಸಮರ ಸೊಸೈಟಿಯ ಕಚೇರಿಯಲ್ಲಿ ಪೆಹಚಾನ್‌ ಪ್ರಾಜೆಕ್ಟ್ ಅಡಿಯಲ್ಲಿ ಸಮರ ಸೊಸೈಟಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಚ್‌ಐವಿ ಸೋಂಕು ಮತ್ತು ಏಡ್ಸ್‌ ರೋಗಗಳ ಬಗ್ಗೆ ಸಮಾಜದಲ್ಲಿ ಇನ್ನೂ ಗೊಂದಲಗಳಿವೆ. ಈ ಗೊಂದಲವನ್ನು ನಿವಾರಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ತಿಳಿಸಿದರು.

ಎಆರ್‌ಟಿ ಕೇಂದ್ರಗಳಲ್ಲಿ ಔಷಧ ದೊರಕಿಸಿಕೊಡಲು ಮನವಿ:
ಸೆಕ್ಸ್‌ ವರ್ಕರ್ ಅಸೋಸಿಯೇಷನ್‌ನ ಕಾರ್ಯದರ್ಶಿ ಭಾರತಿ ಮಾತನಾಡಿ, ಎಆರ್‌ಟಿ ಕೇಂದ್ರಗಳಲ್ಲಿ ಎಚ್‌ಐವಿ ಸೋಂಕಿಗೆ ಸೇವಿಸುವ ಮಾತ್ರೆಗಳು ಅಲಭ್ಯವಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಸೋಂಕು ನಿಯಂತ್ರಣದಲ್ಲಿಡಲು ಸೋಂಕಿತರಿಗೆ ಎಆರ್‌ಟಿ ಕೇಂದ್ರಗಳಲ್ಲಿ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇದೀಗ ಈ ಮಾತ್ರೆಗಳು ಅಲಭ್ಯವಾಗುತ್ತಿವೆ. ಸೋಂಕಿತರ ಜೀವನ ದುಸ್ಥರವಾಗುತ್ತಿದೆ ಎಂದರು.

ಎನ್‌ಟಿಸಿಪಿ-4 ಕಾರ್ಯಕ್ರಮ ಸದ್ಯದಲ್ಲೇ ಸಮಾಪ್ತಿಯಾಗಲಿದೆ. ಎನ್‌ಟಿಸಿಪಿ-5 ಕಾರ್ಯಕ್ರಮ ಆರಂಭವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹಾಗೊಮ್ಮೆ ಸರ್ಕಾರ ಈ ಕಾರ್ಯಕ್ರಮ ಆರಂಭಿಸದಿದ್ದರೆ, ಎಚ್‌ಐವಿ ಮತ್ತು ಎಡ್ಸ್‌ ರೋಗಗಳ ಸಂಕಷ್ಟ ಹೆಚ್ಚಾಗಲಿದೆ ಎಂದರು.
ಲೈಂಗಿಕ ಅಲ್ಪಸಂಖ್ಯಾತರ ಸಂಘದ ಜಿಲ್ಲಾ ಅಧ್ಯಕ್ಷೆ ಮಮತ ಮಾತನಾಡಿ, ಲೈಂಗಿಕ ಕಾರ್ಯಕರ್ತರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಲೈಂಗಿಕ ಅಲ್ಪಸಂಖ್ಯಾತರು ಆರ್ಥಿಕವಾಗಿ ಸದೃಢರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ತೊಡಗಿಸಿಕೊಳ್ಳಲು ಸಮಾನ ಅವಕಾಶಗಳು ದೊರೆಯುತ್ತಿಲ್ಲ. ಕಾರ್ಯಕರ್ತರು ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚು ಜಾಗೃತರಾಗಿರಬೇಕು ಎಂದು ತಿಳಿಸಿದರು.

ಕಮ್ಯುನಿಟಿ ಆಂಡ್‌ ಸಪೋರ್ಟ್‌ನ ರಾಘವೇಂದ್ರ ಮಾತನಾಡಿ, ಎಚ್‌ಐವಿ ಸೋಂಕಿತರು ಮತ್ತು ಏಡ್ಸ್‌ ರೋಗಿಗಳಿಗೆ ಇರುವ ಸವಲತ್ತುಗಳನ್ನು ವಿವರಿಸಿದರು. ಸೋಂಕಿತರು ಮತ್ತು ರೋಗಿಗಳಿಗೆ ಕೆಲವು ಮೆನೆಮದ್ದುಗಳ ಬಗ್ಗೆ ಮಾಹಿತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರೀಕ್ಷಕಿ ಗಾಯತ್ರಿ ದೇವಿ ಮಾತನಾಡಿ, ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಲೈಂಗಿಕ ಕಾರ್ಯಕರ್ತೆಯರ ಸಂಘದ ಚಿಕ್ಕತಿಮ್ಮಮ್ಮ, ಪ್ರೇರಣ ಸಂಸ್ಥೆಯ ಗೋವಿಂದರಾಜು ಮಾತನಾಡಿದರು. ಸಮರ ಸೊಸೈಟಿಯ ರೋಷನ್‌ ಮತ್ತು ದಿವ್ಯಾ ನಿರೂಪಿಸಿದರು.
 

Trending videos

Back to Top