CONNECT WITH US  

ವೈಶಾಲಿ ರಾಜೀನಾಮೆ ಅಂಗೀಕಾರ?

ರಾಮನಗರ: ವಿಧಾನಸಭಾ ಚುನಾವಣೆ ವೇಳೆ ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಾದ ರಾಜಕೀಯ ಬದಲಾವಣೆಗಳು, ಬಿಡದಿ ಪುರಸಭೆಯ ಮೇಲೂ ಪರಿಣಾಮ ಬೀರಿದ್ದ ಹಿನ್ನೆಲೆಯಲ್ಲಿ ಪುರಸಭೆಯ ಉಪಾಧ್ಯಕ್ಷೆ ವೈಶಾಲಿ ಚೆನ್ನಪ್ಪ ಅವರು ತಮ್ಮ ಸ್ಥಾನಕ್ಕೆ ನೀಡಿದ್ದರು. ಇದೀಗ ರಾಜೀನಾಮೆಗೆ ಜಿಲ್ಲಾಧಿಕಾರಿಗಳ ಅಂಕಿತ ಬಾಕಿ ಇದ್ದು, ತೆರವಾಗುವ ಸ್ಥಾನಕ್ಕೆ ಸ್ಪರ್ಧಾಕಾಂಕ್ಷಿಗಳು ಚುನಾವಣೆ ದಿನಾಂಕ ಗೋಷಣೆ ನಿರೀಕ್ಷಿಸುತ್ತಿದ್ದಾರೆ. 

ಅಂಕಿತ ಬಾಕಿ: ಕಳೆದ ಜುಲೈ 19 ರಂದು ವೈಶಾಲಿ ಚೆನ್ನಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ರಾಜೀನಾಮೆ ಸ್ವೀಕರಿಸಿದ್ದ ಉಪವಿಭಾಗಾಧಿಕಾರಿಗಳು, ಜಿಲ್ಲಾಧಿಕಾರಿಗಳಿಗೆ ರವಾನೆ ಮಾಡಿದ್ದರು. ಜಿಲ್ಲಾಧಿಕಾರಿಗಳು ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದು, ಅಂಕಿತ ಹಾಕಿ ತೆರವಾಗುವ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ ನಿಗದಿಪಡಿಸಬೇಕಾಗಿದೆ. 

ಜೂನ್‌ 20, 2105ರಂದು ಅಸ್ತಿತ್ವಕ್ಕೆ ಬಂದ ಬಿಡದಿ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಅನುಸೂಚಿತ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನವನ್ನು ವೆಂಕಟೇಶಮ್ಮ ಮತ್ತು ಉಪಾಧ್ಯಕ್ಷರಾಗಿ ವೈಶಾಲಿ ಅವರು ಅಧಿಕಾರ ಸ್ವೀಕರಿಸಿದ್ದರು. ನಾಯಕರ ಪಕ್ಷ ಬದಲು: 2018ರ ವಿಧಾನಸಭಾ ಚುನಾವಣೆ ವೇಳೆ ಆಗ ಶಾಸಕರಾಗಿದ್ದ ಎಚ್‌.ಸಿ.ಬಾಲಕೃಷ್ಣ ಮತ್ತು ಜಿಪಂ ಸದಸ್ಯ ಎ.ಮಂಜು ಅವರು ತಾವು ಪ್ರತಿನಿಧಿಸುತ್ತಿದ್ದ ಪಕ್ಷಗಳನ್ನು ಬದಲಾವಣೆ ಮಾಡಿಕೊಂಡಿದ್ದರು. 

ವೈಶಾಲಿ ಅವರು ಎಚ್‌.ಸಿ.ಬಾಲಕೃಷ್ಣ ಅವರ ಪರ ನಿಷ್ಠೆ ವ್ಯಕ್ತಪಡಿಸಿದ್ದರು. ತದ ನಂತರ ಎ.ಮಂಜು ಮಾಗಡಿ ವಿಧಾನಸಭೆಗೆ ಆಯ್ಕೆಗೊಂಡ ನಂತರ ಬಿಡದಿ ಪುರಸಭೆಯಲ್ಲಿ ರಾಜಕೀಯ ಬದಲಾವಣೆಗಳು ಕಂಡು ಬಂದಿದೆ. ಇದೇ ಹಿನ್ನೆಲೆಯಲ್ಲಿ ವೈಶಾಲಿ ಅವರು ಸಹ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂಬುದು ತಿಳಿದುಬಂದಿದೆ.

ಒಳ ಒಪ್ಪಂದ ಕಾರಣ: ತಮ್ಮ ರಾಜೀನಾಮೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವೈಶಾಲಿ, ಜೆಡಿಎಸ್‌ ಜತೆ ಒಳ ಒಪ್ಪಂದದ ಹಿನ್ನೆಲೆಯಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವುದಾಗಿ ತಿಳಿಸಿದರು. ಮಾಗಡಿ ಶಾಸಕರಾಗಿದ್ದ ಬಾಲಕೃಷ್ಣ ಅವರು ಬಿಡದಿಗೆ ಮಂಚನಬೆಲೆಯಿಂದ ಕುಡಿಯುವ ನೀರು ಹಾಗೂ ಪಟ್ಟಣದಲ್ಲಿ ಯು.ಜಿ.ಡಿ ಕಾಮಗಾರಿ ಯೋಜನೆಗೆ ಸರ್ಕಾರದಿಂದ 170 ಕೋಟಿ ರೂ. ಬಿಡಗಡೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಬಿಡದಿ ಪುರಸಭೆಗೆ ನೂತನ ಕಟ್ಟಡಕ್ಕೆ ಸ್ಥಳ ವಿಚಾರದಲ್ಲಿಯೂ ಕೂಡ ಅವರು ಸಿಎಂ  ಸಿದ್ದರಾಮಯ್ಯ ಅವರ ಮೇಲೆ ನಿರಂತರ ಒತ್ತಡ ಹೇರಿ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಪಯುಕ್ತ ಯೋಜನೆಗಳಿಗೆ ಮಾಜಿ ಶಾಸಕರು ಕಾರಣರಾಗಿದ್ದಾರೆ. ಪುರಸಭೆ ಅಸ್ತಿತ್ವಕ್ಕೆ ಬಂದ ಮೂರು ವರ್ಷಗಳಲ್ಲಿ ಅನೇಕ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ. ಹೀಗಾಗಿ ಕೃತಜ್ಞತಾ ಭಾವದಿಂದ ಅವರ ಪರ ಒಲವು ವ್ಯಕ್ತಪಡಿಸಿದ್ದಾಗಿ ತಿಳಿಸಿದ ಅವರು, ತಾವು ಜೆಡಿಎಸ್‌ ತೊರೆದಿಲ್ಲ  ಎಂದು ಸ್ಪಷ್ಟಪಡಿಸಿದರು. 


Trending videos

Back to Top