CONNECT WITH US  

ಬರಪಟ್ಟಿಗೆ ಜಿಲ್ಲೆ ಸೇರಿಸಲು ಪೂರಕ ವರದಿ ಸಲ್ಲಿಸಿ

ರಾಮನಗರ: ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಮುಂದುವರಿದಿದೆ. ಆದರೆ ಸರ್ಕಾರ ಜಿಲ್ಲೆಯ ಕನಕಪುರ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ. ಉಳಿದ ಮೂರು ತಾಲೂಕುಗಳಲ್ಲೂ ಬರ ಪರಿಸ್ಥಿತಿ ಇದ್ದು, ಇಡೀ ಜಿಲ್ಲೆಯನ್ನೇ ಬರ ಪೀಡಿತ ಎಂದು ಸರ್ಕಾರ ಘೋಷಿಸಬೇಕಿತ್ತು ಎಂದು ಜಿಪಂ ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಹೇಳಿದರು.

ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ನಡೆದ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿಗೂ ತೊಂದರೆಯಾಗಿದೆ. ಕನಕಪುರವನ್ನು ಪರಿಗಣಿಸಿ, ಉಳಿದ ಮೂರು ತಾಲೂಕುಗಳನ್ನು ಸರ್ಕಾರ ಕೈಬಿಟ್ಟಿದೆ, ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಮಾಹಿತಿಯನ್ನು ನೀಡಿದ್ದೀರಾ ಎಂದು ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳು, ಜಿಲ್ಲೆಯ ಬರ ಪೀಡಿತ ಸಮಸ್ಯೆ ಬಗ್ಗೆ ಸರಿಯಾದ ಮಾಹಿತಿಯನ್ನೇ ಸರ್ಕಾರಕ್ಕೆ ರವಾನಿಸಲಾಗಿದೆ. ಆದರೆ ಸರ್ಕಾರ ಕೆ.ಎಸ್‌.ಎಂ.ಡಿ.ಸಿ ಮಾಹಿತಿಯನ್ನು ಪರಿಗಣಿಸಿ ಬರ ಪೀಡಿತ ತಾಲೂಕುಗಳ ಪಟ್ಟಿ ಸಿದ್ಧಪಡಿಸಿದೆ ಎಂದರು. ಬರ ಪೀಡಿತ ಜಿಲ್ಲೆಯ ಬಗ್ಗೆ ಪೂರಕ ವರದಿ ಸಿದ್ಧಪಡಿಸಿ ಮತ್ತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಅಧ್ಯಕ್ಷರು ಸೂಚನೆ ನೀಡಿದರು.

ಹಾಸ್ಟೆಲ್‌ಗ‌ಳಲ್ಲಿ ಶುದ್ಧ ನೀರು ಯಂತ್ರ ಸ್ಥಾಪನೆಗೆ ಸೂಚನೆ:
ವಿದ್ಯಾರ್ಥಿ ನಿಲಯಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರಗಳನ್ನು ಸ್ಥಾಪಿಸಲು ಪ್ರಥಮ ಅದ್ಯತೆ ಕೊಡಿ, ವಿದ್ಯಾರ್ಥಿ ನಿಲಯಗಳಲ್ಲಿ ಅನ್ಯರಿಗೆ ಪ್ರವೇಶ ನಿಷೇಧಿಸಿ, ಹಿರಿಯ ಅಧಿಕಾರಿಗಳು ಪದೇ ಪದೇ ಹಾಸ್ಟೆಲ್‌ಗ‌ಳಿಗೆ ಭೇಟಿ ಕೊಟ್ಟು ಪರಿಶೀಲಿಸಿ ಎಂದು ಅವರು, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ಮತ್ತು ಅಲ್ಪ$ಸಂಖ್ಯಾತ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಎಫ್.ಆರ್‌.ಜಮಾದಾರ್‌ ಮಾತನಾಡಿ, ಹಿಂದುಳಿದ ವರ್ಗಗಳ ಮತ್ತು ಅಲ್ಪ$ಸಂಖ್ಯಾತರ ಕಾನೂನು ಪದವೀಧರರಿಗೆ ಇಲಾಖಾ ವತಿಯಿಂದ ಭತ್ಯೆ ನೀಡಲಾಗುತ್ತಿದೆ. ಆದರೆ ಬಹುತೇಕ ವಿದ್ಯಾರ್ಥಿಗಳಿಗೆ ಇದರ ಬಗ್ಗೆ ಅರಿವಿಲ್ಲ. ಈ ವಿಚಾರದಲ್ಲಿ ಹೆಚ್ಚು ಪ್ರಚಾರ ಕೊಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಹಿಂದುಳಿದ ಮತ್ತು ಸಮಾಜ ಕಲ್ಯಾಣಾಧಿಕಾರಿಗಳು ಮಾಹಿತಿ ನೀಡಿ, ವಿದ್ಯಾರ್ಥಿ ವೇತನಕ್ಕಾಗಿ 40 ಸಾವಿರ ಮಕ್ಕಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಆನ್‌ಲೈನ್‌ ಮೂಲಕವೇ ಅವರ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಆಗಲಿದೆ. 2015-16 ನೇ ಸಾಲಿಗೆ ವಿದ್ಯಾಸಿರಿ ಯೋಜನೆಯಡಿ ಎರಡು ಸಾವಿರ ಮಕ್ಕಳಿಗೆ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಕಳೆದ ಸಾಲಿನಲ್ಲಿ 1,200 ಮಕ್ಕಳಿಗೆ ಸೌಲಭ್ಯ ಕಲ್ಪಿಸಲಾಗಿತ್ತು ಎಂದು ವಿವರಿಸಿದರು.

ಸ್ವಂತ ಕಟ್ಟಡಗಳಿಲ್ಲದ ಅಂಗನವಾಡಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡುವ ಸಂಬಂಧ ಇದುವರೆಗೆ 10 ಸಭೆಗಳಲ್ಲಿ ಚರ್ಚೆ ನಡೆದಿದೆ. ಭೂಮಿ ಸಮಸ್ಯೆ ಇರುವೆಡೆ ಜಿಲ್ಲಾ ಪಂಚಾಯತ್‌ ಸದಸ್ಯರ ಸಹಕಾರದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಆದರೂ ಜಿಪಂ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಗಳು ಕಟ್ಟಡ ನಿರ್ಮಿಸಲು ಕಾರಣಗಳನ್ನು ನೀಡುತ್ತಲೆ ಇದ್ದಾರೆ ಎಂದು ಅಧ್ಯಕ್ಷ ಇಕ್ಬಾಲ್‌ ಹುಸೇನ್‌ ಅಸಮಾಧಾನ ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲೂಕು ಪಂಚಾಯತ್‌ ಎಂಜಿನಿಯರ್‌ ಸಭೆಗಳಿಗೆ ನಿರಂತರ ಗೈರಾಗುತ್ತಿದ್ದಾರೆ. ಅವರ ವಿರುದ್ಧ ಇನ್ನು ಕ್ರಮವೇಕೆ ತೆಗೆದುಕೊಂಡಿಲ್ಲ ಎಂದು ಅಧ್ಯಕ್ಷರು, ಜಿಪಂ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಯಾವ ಇಲಾಖೆಯಿಂದ ಎಷ್ಟು ಕಾಮಗಾರಿ ಕೈಗೊಳ್ಳಲು ಪ್ರಸ್ತಾವನೆ ಬಂದಿದೆ, ಯಾವ ಇಲಾಖೆಯಿಂದ ಕೊಳವೆ ಬಾವಿ ಕೊರೆಸಲು ಮನವಿ ಬಂದಿವೆ ಎಂಬ ಸ್ಪಷ್ಟ ಮಾಹಿತಿ ಜಿಪಂ ಇಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳಿಂದ ಬಾರದಿದ್ದಾಗ, ಅಧ್ಯಕ್ಷರು ಮತ್ತೆ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ಆಯೋಜಿಸಲು ಸಿದ್ಧತೆ ನಡೆಸುವಂತೆ ಅಧ್ಯಕ್ಷರು ಯುವಜನ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಿ. ನವಜ್ಯೋತಿ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿ ಧನುಷ್‌ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
 

Trending videos

Back to Top