CONNECT WITH US  

ಕೇಂದ್ರ ಬರ ಪೀಡಿತ ಅದ್ಯಯನ ತಂಡ ಭೇಟಿ, ಪರಿಶೀಲನೆ

ರಾಮನಗರ: ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ನಷ್ಟಕ್ಕೆ 58.21 ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಬರ ಪೀಡಿತ ತಾಲೂಕು ಅಧ್ಯಯನಕ್ಕೆ ಆಗಮಿಸಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡಕ್ಕೆ ಜಿಲ್ಲಾಧಿಕಾರಿ ಎಫ್.ಆರ್‌.ಜಮಾದಾರ್‌ ತಿಳಿಸಿದರು.

ಕನಕಪುರದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಜಿಲ್ಲೆಯ ಅಧಿಕಾರಿಗಳು ಮತ್ತು ಕೇಂದ್ರ ಪರಿಶೀಲನಾ ತಂಡದ ಸದಸ್ಯರ ಜಂಟಿ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆ ಬರಪೀಡಿತವಾಗಿದೆ. ಆದರೆ ರಾಜ್ಯ ಸರ್ಕಾರ ಕನಕಪುರವನ್ನು ಮಾತ್ರ ಬರಪೀಡಿತ ಎಂದು ಘೋಷಿಸಿದೆ ಎಂದು ಅವರು ಕೇಂದ್ರ ತಂಡದ ಗಮನ ಸೆಳೆದರು.

ಜಿಲ್ಲೆಯಲ್ಲಿ ಒಟ್ಟು 2 ಲಕ್ಷ ಹೆಕ್ಟೇರ್‌ ಕೃಷಿ ಯೋಗ್ಯ ಭೂಮಿಯ ಪೈಕಿ 2015-16ನೇ ಸಾಲಿಗೆ 120260 ಹೆಕ್ಟೇರ್‌ನಲ್ಲಿ ಬೇಸಾಯಕ್ಕೆ ಅಂದಾಜಿಸಲಾಗಿತ್ತು. ಈ ಪೈಕಿ ಶೇ.93 ಭೂಮಿ ಮಳೆಯಾಶ್ರಿತವಾಗಿದೆ. ಜೂನ್‌, ಜುಲೈ, ಆಗಸ್ಟ್‌ ತಿಂಗಳಲ್ಲಿ ಕಾರಿಫ್ ಬೆಳೆಗೆ ಬಿತ್ತನೆ ಕಾರ್ಯ ನಡೆಯುತ್ತದೆ. ರಾಗಿ, ಬತ್ತ, ಜೋಳ, ಅವರೆ, ಕಡೆಲೆಕಾಯಿ, ಎಳ್ಳು ಜಿಲ್ಲೆಯ ಪ್ರಮುಖ ಬೆಳೆಗಳು. ಜೂನ್‌ನಿಂದ ಆಗಸ್ಟ್‌ ತಿಂಗಳ ಮೊದಲ ವಾರದವರೆಗೂ ರೈತರು ತಮ್ಮ ಹೊಲ, ಗದ್ದೆಯನ್ನು ಹದ ಮಾಡಿಕೊಳ್ಳುತ್ತಾರೆ. ಆದರೆ ಜುಲೈ ತಿಂಗಳಲ್ಲಿ ಮಳೆ ಆಗಲಿಲ್ಲ. ಹೀಗಾಗಿ ಜುಲೈನಲ್ಲಿ ಕೇವಲ ಶೇ.13 ಬಿತ್ತನೆ ಆಗಿತ್ತು. ಸಕಾಲಕ್ಕೆ ಮಳೆ ಬರದೇ ಬಿತ್ತನೆ ಕಾರ್ಯ ಕುಂಟಿತಗೊಂಡು ಇಡೀ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗೆ ಪೆಟ್ಟು ಬಿದಿದ್ದೆ ಎಂದು ಜಿಲ್ಲಾಧಿಕಾರಿಗಳು ತಂಡಕ್ಕೆ ಮಾಹಿತಿ ನೀಡಿದರು.

ಮಳೆ ಆದರೂ ಉಪಯೋಗವಿಲ್ಲ:
ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ದೀಪಜಾ ಮಾತನಾಡಿ, ಕನಕಪುರ ತಾಲೂಕಿನಲ್ಲಿ 52639 ಹೆಕ್ಟೇರ್‌ ಪೈಕಿ 29253 ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಆಗಿತ್ತು. ಜುಲೈನಲ್ಲಿ ಮುಂಗಾರು ಆಗಮನವಾಯಿತಾದರೂ ತದನಂತರ ಮಳೆ ಕೊರತೆ ಉಂಟಾಗಿದೆ. ಭೂಮಿಯ ಹದ ಮತ್ತು ಬಿತ್ತನೆ ಕಾರ್ಯದ ವೇಳೆ ಮಳೆ ಆಗಲಿಲ್ಲ. ಬಿತ್ತನೆ ಸಮಯ ಮುಗಿದ ನಂತರ ಆಗಸ್ಟ್‌ ತಿಂಗಳಲ್ಲಿ ಶೇ.84 ಮಿ ಮೀ ಮಳೆಯಾಯಿತಾದರೂ, ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿಲ್ಲ. ಕನಕಪುರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಸೆಪ್ಟೆಂಬರ್‌ ಅಂತ್ಯಕ್ಕೆ ಮುಂಗಾರು ಕೃಷಿ ಚಟುವಟಿಕೆ ಕೊನೆಯಾಗುತ್ತದೆ ಎಂದರು.

ಅಂತರ್ಜಲ ಮಟ್ಟವೂ ಕುಸಿದಿದೆ:
ಉಪವಿಭಾಗಾಧಿಕಾರಿ ಡಾ.ಎಂ.ಎನ್‌.ರಾಜೇಂದ್ರ ಪ್ರಸಾದ್‌ ಮಾತನಾಡಿ, ಹಿಂದಿನ ವರ್ಷಗಳ ಮಳೆ ಮಾಹಿತಿ ಪರಿಗಣಿಸಿದಾಗ ಸಕಾಲಕ್ಕೆ ಮಳೆಯಾಗದೆ ಬೆಳೆ ನಷ್ಟವಾಗಿರುವುದು ಸ್ಪಷ್ಟವಾಗಿದೆ ಎಂದರು.

ಮಳೆ ವೈಪರಿತ್ಯದ ಸಂದರ್ಭದಲ್ಲಿ ಜಿಲ್ಲೆಯ ರೈತರು ಪರ್ಯಾಯ ಬೆಳೆ ಬಗ್ಗೆ ತಿಳಿವಳಿಕೆ ಮೂಡಿಸಿಕೊಳ್ಳಲು ಇನ್ನು ಸಾಕಷ್ಟು ಸಮಯ ಬೇಕಾಗಿದೆ ಎಂದು ತಂಡದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

18 ಕೋಟಿ ರೂ. ಕೃಷಿ ಬೆಳೆ ನಷ್ಟ:
ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಆದರೆ ಸರ್ಕಾರ ಕನಕಪುರವನ್ನು ಮಾತ್ರ ಬರ ಪೀಡಿತ ಎಂದು ಘೋಷಿಸಿದೆ. ಹೀಗಾಗಿ ಕನಕಪುರದಲ್ಲಿ ಸಕಾಲಕ್ಕೆ ಮಳೆಯಾಗದೆ ಒಟ್ಟು 18.35 ಕೋಟಿ ರೂ. ನಷ್ಟವನ್ನು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

ತಾಲೂಕಿನಲ್ಲಿ ಮಳೆ ಕೊರತೆ ಹೀಗೆ ಮುಂದುವರೆದರೆ ತೋಟಗಾರಿಕೆ ಬೆಳೆಗಳ ಮೇಲೂ ಪರಿಣಾಮ ಬೀರುತ್ತದೆ. ಇನ್ನೊಂದೆಡೆ ಮಳೆ ಪ್ರಮಾಣ ಹೆಚ್ಚಾದರೂ ತರಕಾರಿ ಮತ್ತು ಬಾಳೆ ಬೆಳೆಗೆ ತೊಂದರೆ ಆಗಲಿದೆ ಎಂದು ತಿಳಿಸಿದರು.

ಕುಡಿಯುವ ನೀರಿಗೂ ತೊಂದರೆ:
ಕನಕಪುರ ಸೇರಿದಂತೆ ಜಿಲ್ಲೆಯಲ್ಲಿ 1000 ಅಡಿ ಕೊಳವೆ ಬಾವಿ ಕೊರೆದರೂ ನೀರು ಲಭ್ಯವಾಗುತ್ತಿಲ್ಲ. ಕನಕಪುರದ ಹಾರೋಹಳ್ಳಿ ಮತ್ತು ಮರಳವಾಡಿಯಲ್ಲಿ 1 ಸಾವಿರಕ್ಕೂ ಹೆಚ್ಚು ಆಳದಲ್ಲಿಯೂ ನೀರು ಲಭ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ಕುಡಿಯುವ ನೀರಿನ ಸರಬರಾಜಿಗಾಗಿ ಕನಕಪುರಕ್ಕೆ ಕನಿಷ್ಠ 3 ಕೋಟಿ ರೂ. ನೆರವಿನ ಅಗತ್ಯವಿದೆ ಎಂದು ಹೇಳಿದರು.

ಕನಕಪುರ ತಾಲೂಕಿನಲ್ಲಿ ಮಳೆ ಕೊರತೆಯಿಂದಾಗಿ ಕೃಷಿ ಬೆಳೆ ನಷ್ಟ 18.35 ಕೋಟಿ ರೂ, ತೋಟಗಾರಿಕೆ ಬೆಳೆ ನಷ್ಟ 2.32 ಕೋಟಿ ರೂ., ಪಶುಸಂಗೋಪನೆ ನಷ್ಟ 65 ಲಕ್ಷ ರೂ., ಕುಡಿಯುವ ನೀರಿಗೆ 3 ಕೋಟಿ ರೂ. ಮತ್ತು ನರೇಗಾ ಅಡಿಯಲ್ಲಿ ಪರಿಹಾರ ಕಾಮಗಾರಿಗಾಗಿ 33.79 ಕೋಟಿ ರೂ, ಒಟ್ಟು 58.21 ಕೋಟಿ ರೂ. ಪರಿಹಾರದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಕೇಂದ್ರ ಸರ್ಕಾರದ ತಂಡಕ್ಕೆ ವರದಿ ನೀಡಿದರು.

ಸಭೆಯ ನಂತರ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡದ ಪಿ.ಕೆ.ಸಕ್ಸೇನಾ, ಎ.ಕೆ.ಶ್ರೀವಾತ್ಸವ, ಕೆ.ಎಂ.ಪರಶಿವಮೂರ್ತಿ ಅವರು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಶಿವನಹಳ್ಳಿ ಗ್ರಾಮದ ರೈತ ಸಾವಂದಯ್ಯ ಅವರ ಗದ್ದೆಗೆ ಭೇಟಿ ಕೊಟ್ಟು ಪರಿಶೀಲಿಸಿದರು. 4 ಎಕರೆ ಪ್ರದೇಶದಲ್ಲಿ ರಾಗಿ ಬಿತ್ತನೆ ಶೇ.50 ನಷ್ಟವಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಅಚ್ಚಲು ಗ್ರಾಮ ಪಂಚಾಯಿತಿಯ ಬೊಮ್ಮನಹಳ್ಳಿ ಗ್ರಾಮದ ರೈತ ರಾಚಯ್ಯ ಅವರ ಭೂಮಿಯಲ್ಲೂ ರಾಗಿ ಬಿತ್ತನೆ ನಷ್ಟವಾಗಿರುವುದನ್ನು ವೀಕ್ಷಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಸ್‌.ಮಂಜುನಾಥ್‌, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜ್‌, ಉಪಕಾರ್ಯದರ್ಶಿ ಆರ್‌.ಲತಾ, ಮಂಡ್ಯ ಜಿಲ್ಲಾ ಕೃಷಿ ಉಪನಿರ್ದೇಶಕ ಡಿ.ಎಚ್‌.ರವಿ ಮುಂತಾದವರು ಹಾಜರಿದ್ದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರಕ್ಕೆ ವರದಿ: ಸಕ್ಸೇನಾ
ಬೆಳೆ ನಷ್ಟವಾಗಿರುವುದನ್ನು ಖುದ್ದು ಭೇಟಿ ಮಾಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸರ್ಕಾರದ ಪರಿಶೀಲನಾ ತಂಡದ ಸದಸ್ಯ ಪಿ.ಕೆ.ಸಕ್ಸೇನಾ, ಸಕಾಲಕ್ಕೆ ಮಳೆ ಆಗದೆ ಬೆಳೆ ನಷ್ಟವಾಗಿರುವುದು ಗೋಚರಿಸುತ್ತಿದೆ. ಸಹಾನುಭೂತಿಯಿಂದ ಕೇಂದ್ರ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು.
 

Trending videos

Back to Top