ಧೈರ್ಯವಿದ್ದರೆ ಕಾರ್ನಾಡ್ ಮಹಾರಾಷ್ಟ್ರಕ್ಕೆ ಬರಲಿ;ರಾಣೆ ಪುತ್ರನ ಧಮ್ಕಿ

ಮುಂಬಯಿ: "ಮೈಸೂರು ಹುಲಿ' ಟಿಪ್ಪು ಸುಲ್ತಾನ್ ಏನಾದರೂ ಹಿಂದು ಆಗಿದ್ದರೆ ಮರಾಠ ದೊರೆ ಶಿವಾಜಿಗೆ ಸರಿಸಮನಾದ ಸ್ಥಾನ ಪಡೆ ಯುತ್ತಿದ್ದ ಎಂದು ಬೆಂಗಳೂರಿನಲ್ಲಿ ಜ್ಞಾನಪೀಠ ಪುರಸ್ಕೃತ ನಾಟಕಕಾರ ಗಿರೀಶ್ ಕಾರ್ನಾಡ್ ನೀಡಿದ್ದ ಹೇಳಿಕೆ ಮಹಾರಾಷ್ಟ್ರದಲ್ಲಿ ಈಗ ಭಾರೀ ವಿವಾ ದಕ್ಕೆ ಕಾರಣವಾಗುತ್ತಿದೆ. "ಕಾರ್ನಾಡ್ಗೆ ಧೈರ್ಯವಿದ್ದರೆ ಬೆಂಗಳೂರಿನಲ್ಲಿ ಆಡಿದ ಮಾತುಗಳನ್ನೇ ಮಹಾರಾಷ್ಟ್ರ ನೆಲದಲ್ಲೂ ಆಡಲಿ. ಬಳಿಕ ವಾಪಸ್ ಹೋಗಲಿ ನೋಡೋಣ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಸವಾಲು ಹಾಕಿದ್ದಾರೆ.
"ಕರ್ನಾಟಕದಲ್ಲಿ ಏನಾಗಿದೆಯೋ, ಏನಾಗುತ್ತಿದೆಯೋ ಅದೆಲ್ಲಾ ಅವ ರಿಗೆ ಬಿಟ್ಟ ವಿಚಾರ. ಆದರೆ ಶಿವಾಜಿ ಮಹಾರಾಜರನ್ನು ಯಾರೊಬ್ಬರ ಜತೆ ಹೋಲಿಕೆ ಮಾಡಲು ಅಥವಾ ಯಾರೊಬ್ಬರಿಗಿಂತ ಕಡಿಮೆ ಎಂದು ಬಿಂಬಿಸಲು ಯಾವುದೇ ಕಾರ್ನಾಡ್ಗೂ ಅವಕಾಶ ನೀಡುವುದಿಲ್ಲ. ಶಿವಾಜಿ ಮಹಾರಾಜರು ಎಲ್ಲರಿಗಿಂತ ದೊಡ್ಡವರು' ಎಂದು ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆ ಪುತ್ರರೂ ಆಗಿರುವ ನಿತೇಶ್ ರಾಣೆ ಟ್ವೀಟ್ ಮಾಡಿದ್ದಾರೆ.
"ಕಾರ್ನಾಡರು ಹಲವು ವರ್ಷಗಳ ಕಾಲ ಬಾಲಿವುಡ್ನಿಂದ ಹಣ ಗಳಿಸಿದ್ದಾರೆ. ಆದಾಗ್ಯೂ ಶಿವಾಜಿ ಮಹಾರಾಜರನ್ನು ಅಪಮಾನ ಮಾಡುವ ಧೈರ್ಯ ತೋರಿದ್ದಾರೆ. ಅವರು ಒಂದೋ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಮರಾಠಿಗರ ಬಿಸಿ ಎದುರಿಸಲು ಸಿದ್ಧರಾಗಬೇಕು. ಕ್ಷಮೆ ಕೇಳದಿದ್ದರೆ ಅವರು ಮಹಾರಾಷ್ಟ್ರ ಪ್ರವೇಶಿಸಲು ಬಿಡುವುದಿಲ್ಲ' ಎಂದು ಎಚ್ಚರಿಕೆ ನೀಡಿದ್ದಾರೆ.
"ಶಿವಾಜಿ ಜತೆ ಟಿಪ್ಪುನನ್ನು ಹೋಲಿಸಲಾಗದು. ಏಕೆಂದರೆ ಶಿವಾಜಿ ವಿವೇಕ, ದಯೆಯುಳ್ಳ ದೊರೆ. ಟಿಪ್ಪು ಆ ರೀತಿ ಇರಲಿಲ್ಲ' ಎಂದು ಗುರುವಾರವಷ್ಟೇ ಕಾರ್ನಾಡ್ ವಿರುದ್ಧ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿತ್ತು.