CONNECT WITH US  

ನಕ್ಸಲರಿಂದ 250 ಮಂದಿ ಅಪಹರಣ, ಬಿಡುಗಡೆ

ರಾಯಪುರ: ಮಾವೋವಾದಿಗಳ ಭದ್ರಕೋಟೆಯಾಗಿರುವ ಛತ್ತೀಸ್‌ಗಢದ ದಂತೇವಾಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡುವ ಮುನ್ನಾ ದಿನವಾದ ಶುಕ್ರವಾರ ಮಹಿಳೆಯರು, ಮಕ್ಕಳು ಸೇರಿದಂತೆ 250 ಗ್ರಾಮಸ್ಥರನ್ನು ನಕ್ಸಲರು ಅಪಹರಿಸಿದ್ದ ಘಟನೆ ನಡೆದಿದೆ. ಆದರೆ, ಶನಿವಾರ ರಾತ್ರಿ ನಕ್ಸಲೀಯರು "ಜನ ಅದಾಲತ್‌'ನಲ್ಲಿ ಓರ್ವನನ್ನು ಕೊಂದು ಉಳಿದ ಗ್ರಾಮಸ್ಥರನ್ನು ಬಿಡುಗಡೆ ಮಾಡಿದ್ದರೆ.ಇದೇ ವೇಳೆ, ಮೋದಿ ಭೇಟಿ ವಿರೋಧಿಸಿ ಮಾವೋವಾದಿಗಳು ದಂತೇವಾಡದಲ್ಲಿ ಬಂದ್‌ ಆಚರಿಸಿ ರೈಲು ಹಳಿಗಳನ್ನು ಧ್ವಂಸಗೊಳಿಸಿದ್ದಾರೆ.

ದಂತೇವಾಡ ಜಿಲ್ಲೆಯ ಪಕ್ಕದಲ್ಲಿರುವ ಸುಕಾ¾ ಜಿಲ್ಲೆಯಲ್ಲಿ ಸೇತುವೆಯೊಂದರ ನಿರ್ಮಾಣ ವಿರೋಧಿಸಿ ನಕ್ಸಲರು ಶುಕ್ರವಾರ ರಾತ್ರಿ 200ರಿಂದ 250 ಗ್ರಾಮಸ್ಥರನ್ನು ಅಪಹರಿಸಿದ್ದರು. ಅವರನ್ನು ಬಿಡಿಸಿ ಕರೆ ತರಲು ನಾಲ್ಕರಿಂದ ಐವರು ಸ್ಥಳೀಯರು ಮಾತುಕತೆಯಲ್ಲಿ ನಿರತರಾಗಿದ್ದರು ಎಂದು ಛತ್ತೀಸ್‌ಗಢ ಮುಖ್ಯಮಂತ್ರಿ ರಮಣಸಿಂಗ್‌ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳು ಹೇಳಿಕೆ ನೀಡುವ ಮುನ್ನ ಇಬ್ಬರು ಅಧಿಕಾರಿಗಳು ವೈರುಧ್ಯದ ಮಾತುಗಳನ್ನು ನೀಡಿದ್ದರು. ನಕ್ಸಲರು 400ರಿಂದ 500 ಗ್ರಾಮಸ್ಥರನ್ನು ಅರಣ್ಯಕ್ಕೆ ಕರೆದೊಯ್ದಿದ್ದಾರೆ ಎಂದು ಸುಕಾ¾ ಜಿಲ್ಲೆಯ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಹರೀಶ್‌ ರಾಠೊಡ್‌ ಅವರು ತಿಳಿಸಿದ್ದರು. ಆದರೆ ಇದನ್ನು ಅಲ್ಲಗಳೆದಿದ್ದ ಬಸ್ತರ್‌ ವಲಯದ ಪೊಲೀಸ್‌ ಮಹಾನಿರೀಕ್ಷಕ (ಐಜಿಪಿ) ಆರ್‌.ಪಿ. ಕಲ್ಲೂರಿ, 400ರಿಂದ 500 ಜನರನ್ನು ನಕ್ಸಲರು ಕರೆದೊಯ್ದಿರುವುದು ಮಾಧ್ಯಮಗಳು ಸೃಷ್ಟಿಸಿರುವ ಕಟ್ಟು ಕತೆ. ಐದಾರು ಜನರನ್ನಷ್ಟೇ ಅರಣ್ಯದೊಳಕ್ಕೆ ಕರೆದೊಯ್ದಿದ್ದಾರೆ. ಇಂತಹ ಘಟನೆ ಸರ್ವೇ ಸಾಮಾನ್ಯ. ಗ್ರಾಮಸ್ಥರೇ ಕಾಡಿನೊಳಕ್ಕೆ ಹೋಗಿ ನಕ್ಸಲರ ಜತೆ ಮಾತುಕತೆ ನಡೆಸಿ ಹಳ್ಳಿ ಜನರನ್ನು ಬಿಡಿಸಿಕೊಂಡು ಬರುತ್ತಾರೆ ಎಂದು ತಿಳಿಸಿದ್ದರು.

ಮೋದಿ ಭೇಟಿಗೆ ವಿರೋಧ: ಈ ನಡುವೆ, ಮೋದಿ ಭೇಟಿ ವಿರೋಧಿಸಿ ನಕ್ಸಲರು ಕಿರಾಂದುಲ್‌- ವಿಶಾಖಪಟ್ಟಣ ಮಾರ್ಗದ ರೈಲು ಹಳಿಯನ್ನು ಧ್ವಂಸಗೊಳಿಸಿದ್ದಾರೆ. ಮರದ ದಿಮ್ಮಿಗಳನ್ನು ಕೆಡವಿ ಹಲವು ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ.

ಮೋದಿ ಭೇಟಿ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ ದಂಡಕಾರಣ್ಯ ಬಂದ್‌ಗೆ ನಕ್ಸಲರು ಕರೆ ನೀಡಿದ್ದರು. ಬಸ್ತರ್‌ ವಲಯದಲ್ಲಿ ಬಂದ್‌ನಿಂದಾಗಿ ಜನಜೀವನಕ್ಕೆ ತೊಂದರೆಯಾಯಿತು. ನಕ್ಸಲ್‌ ಪೀಡಿತ ಪ್ರದೇಶಗಳಿಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ರೈಲು ಸಂಚಾರವನ್ನು ನಿಲ್ಲಿಸಲಾಗಿತ್ತು. ಈ ಮಧ್ಯೆ, ಮೋದಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜನರಿಗೂ ನಕ್ಸಲರು ಅಡ್ಡಿಪಡಿಸಿದರು ಎಂದು ವರದಿಗಳು ತಿಳಿಸಿವೆ.

Trending videos

Back to Top