CONNECT WITH US  

ಜನರು ಕೊಟ್ಟ ಕಬ್ಬಿಣ ಸರ್ದಾರ್‌ ಪ್ರತಿಮೆಗೆ ಬಳಸಲ್ಲ!

ವಡೋದರಾ: ಗುಜರಾತ್‌ನಲ್ಲಿ ನರ್ಮದಾ ಅಣೆಕಟ್ಟೆಗೆ ಅಭಿಮುಖವಾಗಿ ನಿರ್ಮಿಸುತ್ತಿರುವ ವಿಶ್ವದ ಅತ್ಯಂತ ಎತ್ತರದ ಸರ್ದಾರ್‌ ವಲ್ಲಭಬಾಯ್‌ ಪಟೇಲ್‌ ಪ್ರತಿಮೆ ನಿರ್ಮಾಣ ಯೋಜನೆ ಜಾರಿಯಲ್ಲಿ ಸರ್ಕಾರ ಉಲ್ಟಾ ಹೊಡೆದಿದೆ. ಎರಡು ವರ್ಷಗಳ ಹಿಂದೆ ಗುಜರಾತ್‌ ಸರ್ಕಾರ "ಲೋಹ' ಆಂದೋಲನದ ಮೂಲಕ ಇಡೀ ದೇಶದ ಜನರಿಗೆ ಕಬ್ಬಿಣವನ್ನು ದಾನ ರೂಪದಲ್ಲಿ ನೀಡುವಂತೆ ಮನವಿ ಮಾಡಿತ್ತು. ಈ ಕಬ್ಬಿಣ ಬಳಸಿ ಪಟೇಲ್‌ ಅವರ 182 ಮೀಟರ್‌ ಎತ್ತರದ ಪ್ರತಿಮೆ ನಿರ್ಮಿಸುವುದಾಗಿ ಹೇಳಿಕೊಂಡಿತ್ತು.

ಆದರೆ ಸದ್ಯದ ಯೋಜನೆ ಪ್ರಕಾರ, ಜನರಿಂದ ಸಂಗ್ರಹಿಸಿದ ಕಬ್ಬಿಣವನ್ನು ಪಟೇಲ್‌ ಅವರ "ಏಕತೆ' ಪ್ರತಿಮೆಯ ನಿರ್ಮಾಣದಲ್ಲಿ ಬಳಸುತ್ತಿಲ್ಲ. ಕಾರಣ, ಜನರು ನೀಡಿದ ಕಬ್ಬಿಣ ಬೇರೆ ಬೇರೆ ರೀತಿಯದ್ದಾಗಿದೆ. ಇದನ್ನು ಪ್ರತಿಮೆ ನಿರ್ಮಾಣಕ್ಕೆ ಬಳಸಿಕೊಳ್ಳುವುದಾದರೆ ಅದನ್ನು ವಿವಿಧ ರೀತಿಯ ತಾಂತ್ರಿಕ ಪರೀಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಹೀಗಾಗಿ ಜನರಿಂದ ಸಂಗ್ರಹಿಸಿದ ತಲಾ 700 ಗ್ರಾಂ ತೂಕದ 1,69,078 ಕಿಟ್‌ನಲ್ಲಿರುವ ಕಬ್ಬಿಣವನ್ನು ಮೂಲ ಪ್ರತಿಮೆಗೆ ಬಳಸದೇ ಇರಲು ನಿರ್ಧರಿಸಲಾಗಿದೆ.

ಅದರ ಬದಲು, ಜನರಿಂದ ಸಂಗ್ರಹಿಸಿದ ಕಬ್ಬಿಣವನ್ನು ಕರಗಿಸಿ, ಅದನ್ನು ಬಾರ್‌ಗಳಾಗಿ ಪರಿವರ್ತಿಸಿ, ಬಳಿಕ ಪಟೇಲ್‌ ಪ್ರತಿಮೆಯ ಅಡಿಪಾಯ ಮತ್ತು ಪ್ರತಿಮೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಬ್ಬಿಣದ ಕಲಾಕೃತಿಗಳನ್ನು ನಿರ್ಮಿಸಲು ಬಳಸಲು ಉದ್ದೇಶಿಸಲಾಗಿದೆ. ಈ ಮೂಲಕ ಜನರ ಭಾವನಾತ್ಮಕ ನಿಲುವಿಗೆ ಯಾವುದೇ ಧಕ್ಕೆ ಬರದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Trending videos

Back to Top