CONNECT WITH US  

ನಡುರಸ್ತೆಯಲ್ಲಿ 32 ವಾಹನಗಳಿಗೆ ಬೆಂಕಿ ಇಟ್ಟ ನಕ್ಸಲರು

ಗಯಾ: ಬಿಹಾರ ಹಾಗೂ ಜಾರ್ಖಂಡದಲ್ಲಿ ಎರಡು ದಿನಗಳ ಬಂದ್‌ಗೆ ಕರೆ ನೀಡಿರುವ ನಕ್ಸಲರು, ಬಂದ್‌ನ ಮೊದಲ ದಿನವೇ ಡೀಸೆಲ್‌, ಅಡುಗೆ ಅನಿಲ ಟ್ಯಾಂಕರ್‌ ಸೇರಿ 32 ವಾಹನಗಳಿಗೆ ರಸ್ತೆ ಮಧ್ಯೆ ಬೆಂಕಿ ಇಟ್ಟು ಅಟ್ಟಹಾಸಗೈದಿದ್ದಾರೆ. ಅದೃಷ್ಟವಶಾತ್‌ ಈ ಘಟನೆಯಲ್ಲಿ ಯಾರೊಬ್ಬರಿಗೂ ಗಾಯವಾಗಿಲ್ಲ. ಡೀಸೆಲ್‌, ಅನಿಲ ಟ್ಯಾಂಕರ್‌ಗಳ ಚಾಲಕರ ಕ್ಯಾಬಿನ್‌ಗೆ ಬೆಂಕಿ ಹೊತ್ತಿಕೊಂಡಿದೆಯಾದರೂ, ಟ್ಯಾಂಕರ್‌ಗಳು ಸುರಕ್ಷಿತವಾಗಿವೆ. ಇದರಿಂದಾಗಿ ಭಾರೀ ಅನಾಹುತ ತಪ್ಪಿದೆ.

ನವದೆಹಲಿ- ಕೋಲ್ಕತಾ ನಡುವಣ ಗ್ರ್ಯಾಂಡ್‌ ಟ್ರಕ್‌ ರಸ್ತೆಯಲ್ಲಿನ ಗಯಾ ಜಿಲ್ಲೆಯ ಬಿಶುನ್‌ಪುರ ಹಾಗೂ ತಾರಾದಿಹ್‌ ಗ್ರಾಮಗಳ ನಡುವೆ ಸೋಮವಾರ ನಸುಕಿನ ಜಾವ 32 ವಾಹನಗಳನ್ನು 50ಕ್ಕೂ ಹೆಚ್ಚು ಮಂದಿ ಇದ್ದ ನಕ್ಸಲರ ಗುಂಪು ತಡೆದು ನಿಲ್ಲಿಸಿತು. ಆ ಪೈಕಿ ನಾಲ್ಕು ಅಡುಗೆ ಅನಿಲ, ಒಂದು ಡೀಸೆಲ್‌ ಟ್ಯಾಂಕರ್‌, ಪ್ರಯಾಣಿಕರಿದ್ದ ಒಂದು ಕಾರು ಕೂಡ ಇತ್ತು. ಕಾರು ಹಾಗೂ ವಾಹನದಲ್ಲಿದ್ದವರನ್ನು ದೂರ ಸರಿಯಲು ಸೂಚಿಸಿದ ನಕ್ಸಲರು ಎಲ್ಲ ವಾಹನಗಳಿಗೂ ಬೆಂಕಿ ಹಚ್ಚಿದರು.

ನಕ್ಸಲರು ಹಚ್ಚಿದ ಬೆಂಕಿ ಟ್ಯಾಂಕರ್‌ಗಳಿಗೆ ತಗುಲಿಲ್ಲ. ಅಡುಗೆ ಅನಿಲ, ಡೀಸೆಲ್‌ ಟ್ಯಾಂಕರ್‌ನ ಚಾಲಕರ ಕ್ಯಾಬಿನ್‌ ಮಾತ್ರ ಭಸ್ಮವಾಗಿವೆ. ಉಳಿದ ವಾಹನಗಳು ಸುಟ್ಟು ಕರಕಲಾಗಿವೆ.
ಸಿಆರ್‌ಪಿಎಫ್ ಯೋಧರು ಮೇ 16ರಂದು ಎನ್‌ಕೌಂಟರ್‌ ನಡೆಸಿ ಬಿಹಾರ- ಜಾರ್ಖಂಡ- ಛತ್ತೀಸ್‌ಗಢ ವಿಶೇಷ ವಲಯ ಸಮಿತಿ ಸದಸ್ಯೆ ಸರಿತಾ ಅಲಿಯಾಸ್‌ ಊರ್ಮಿಳಾ ಗಂಜೂ ಎಂಬಾಕೆಯನ್ನು ಹತ್ಯೆ ಮಾಡಿದ್ದರು. ಇದನ್ನು ಖಂಡಿಸಿ ನಕ್ಸಲರು 2 ದಿನಗಳ ಬಂದ್‌ಗೆ ಕರೆ ನೀಡಿದ್ದಾರೆ. ಈ ನಡುವೆ ಬಿಹಾರದ ಸರನ್‌ ಜಿಲ್ಲೆಯಲ್ಲಿ ನಕ್ಸಲರು ಬೆಂಕಿ ಹಚ್ಚಿ ಮೊಬೈಲ್‌ ಟವರ್‌ ನಾಶಪಡಿಸಿದ್ದಾರೆ.

Trending videos

Back to Top