CONNECT WITH US  

ದಿಲ್ಲಿ ರಸ್ತೆಯಲ್ಲಿ ಅಪರಿಚಿತರು ನಿಮಗೆ "ನಮಸ್ತೆ' ಎಂದರೆ ಹುಶಾರ್‌ !

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನೀವು ವಾಹನಗಳಲ್ಲಿ ಸಂಚರಿಸುವಾಗ ಅಥವಾ ನಡೆದುಕೊಂಡು ಹೋಗುವಾಗ ಯಾರಾದರೂ ನಿಮ್ಮತ್ತ ಕೈಬೀಸಿ, ನಗು ಮುಖ ತೋರಿ, ನಿಮ್ಮೊಂದಿಗೆ ಸ್ನೇಹ ಇರುವವರಂತೆ ವರ್ತಿಸಿದರೆ ಅಂತಹವರ ಬಗ್ಗೆ ಜಾಗ್ರತೆ ಇರಲಿ - ಏಕೆಂದರೆ ಅವರು ಗೋಮುಖ ವ್ಯಾಘ್ರ ಲೂಟಿ ಕೋರ "ನಮಸ್ತೆ ಗ್ಯಾಂಗ್‌'ನವರು. ಅವರ ಸ್ನೇಹದ ವರ್ತನೆಗೆ ನೀವು ಮರುಳಾಗಿ ನಿಮ್ಮ ವಾಹನವನ್ನು ನಿಲ್ಲಿಸಿದಿರೋ, ಅಥವಾ ಮಾತಿಗಿಳಿದಿರೋ, ನಿಮ್ಮ ಕತೆ ಮುಗಿಯಿತೆಂದೇ ಅರ್ಥ - ಏಕೆಂದರೆ ಅವರು ನಿಮ್ಮನ್ನು ಗನ್‌ ಪಾಯಿಂಟ್‌ನಲ್ಲಿ ಲೂಟಿ ಮಾಡುತ್ತಾರೆ !

ದಿಲ್ಲಿಯಲ್ಲಿ ಈ ತನಕ ಟಕ್‌ ಟಕ್‌ ಗ್ಯಾಂಗ್‌ ಕಾರ್ಯಾಚರಿಸುತ್ತಿತ್ತು. ಕಾರಿನಲ್ಲಿ ಹೋಗುವವರನ್ನು ತಡೆದು ದರೋಡೆ ಮಾಡಲು ಟಕ್‌ ಟಕ್‌ ಗ್ಯಾಂಗಿನವರು ಕಾರಿನ ಗಾಜಿನ ಮೇಲೆ ಟಕ್‌ ಟಕ್‌ ಎಂದು ಬಡಿದು ನಿಮಗೆ ಏನೋ ಹೇಳಲಿಕ್ಕಿದೆ ಎಂಬಂತೆ  ಕಾಣಿಸಿಕೊಳ್ಳುತ್ತಿದ್ದರು. ಇವರ ಟಕ್‌ ಟಕ್‌ಗೆ ಓಗೊಟ್ಟು  ಕಾರಿನ ಚಾಲಕ ಹೊರ ಬಂದನೆಂದರೆ ಇವರು ಒಡನೆಯೇ ಕಾರಿನೊಳಗೆ ನುಗ್ಗಿ  ಅಲ್ಲಿರುವ ಅಮೂಲ್ಯ ವಸ್ತುಗಳನ್ನು ಎಗರಿಸುತ್ತಿದ್ದರು. 

ದಿಲ್ಲಿ ಪೊಲೀಸರು ಟಕ್‌ ಟಕ್‌ ಗ್ಯಾಂಗ್‌ ಅನ್ನು ಬಗ್ಗು ಬಡಿಯುವಲ್ಲಿ ಕೊನೆಗೂ ಸಫ‌ಲರಾದರು. ಈಗ ನಮಸ್ತೇ ಗ್ಯಾಂಗ್‌ ನವರ ಉಪಟಳ ದಿಲ್ಲಿಯಲ್ಲಿ ಜೋರಾಗಿದೆ. ದಿಲ್ಲಿ ಪೊಲೀಸರು ಈಚೆಗೆ ನಮಸ್ತೇ ಗ್ಯಾಂಗಿನ ನಾಲ್ಕು ಸದಸ್ಯರನ್ನು ಸೆರೆ ಹಿಡಿದಾಗ ಅವರು ತಮ್ಮ ಲೂಟಿ-ದರೋಡೆಯ ಕಾರ್ಯವಿಧಾನದ ಬಗ್ಗೆ ಬಾಯಿ ಬಿಟ್ಟರು. 

ಸೆರೆ ಹಿಡಿಯಲ್ಪಟ್ಟ ನಮಸ್ತೇ ಗ್ಯಾಂಗಿನ ನಾಲ್ವರು ಸದಸ್ಯರನ್ನು ನಸೀಮುದ್ದೀನ್‌, ಶಕಾವತ್‌, ಗುಲ್‌ಜಾರ್‌ ಮತ್ತು  ನಯೀಮ್‌ ಎಂದು ಗುರತಿಸಲಾಗಿದೆ. ಇವರು ತಮ್ಮನ್ನು ಬಾಲ್ಯ ಸ್ನೇಹಿತರೆಂದೂ, ಸಣ್ಣಂದಿನಿಂದಲೇ ತಾವು ಹಲವಾರು ಅಪರಾಧಗಳನ್ನು ಎಸಗಿ ಹಲವು ಬಾರಿ ಜೈಲು ಶಿಕ್ಷೆ ಅನುಭವಿಸಿರುವುದಾಗಿಯೂ ತನಿಖಾಧಿಕಾರಿಗಳಲ್ಲಿ ಬಾಯಿ ಬಿಟ್ಟಿದ್ದಾರೆ. 

ನಮಸ್ತೆ ಗ್ಯಾಂಗ್‌ ಸದಸ್ಯರು ಕೇವಲ ಕಾರಿನಲ್ಲಿ ಹೋಗುವವರನ್ನು ಮಾತ್ರವಲ್ಲದೆ ವಯಸ್ಸಾದವರನ್ನು ಕೂಡ ಗುರಿಯಾಗಿರಿಸಿ ಲೂಟಿ, ದರೋಡು ಮಾಡುತ್ತಾರೆ; ಈ ಗ್ಯಾಂಗಿನ ಬಗ್ಗೆ ಜನರು ಎಚ್ಚರದಿಂದರಬೇಕು; ಗುರುತು-ಪರಿಚಯ-ಸ್ನೇಹ ಇರುವವರಂತೆ ನಟಿಸಿ ಲೂಟಿ ಎಸಗುವ ಈ ಗ್ಯಾಂಗ್‌ನವರು ಬಹಳ ಅಪಾಯಕಾರಿಗಳು ಎಂದು ದಿಲ್ಲಿ ಪಶ್ಚಿಮದ ಡಿಸಿಪಿ ವಿಜಯ್‌ ಕುಮಾರ್‌ ತಿಳಿಸಿದ್ದಾರೆ. 

ದಿಲ್ಲಿಯ ರಾಣಿಬಾಗ್‌ ಅಂಡರ್‌ಪಾಸ್‌ ಸಮೀಪ ಈಚೆಗೆ ದಿಲ್ಲಿ ಪೊಲೀಸರು ನಮಸ್ತೇ ಗ್ಯಾಂಗಿನ ನಾಲ್ವರನ್ನು ಸೆರೆ ಹಿಡಿಯುವ ಮೂಲಕ ಈ ಗ್ಯಾಂಗ್‌ ದಿಲ್ಲಿಯಲ್ಲಿ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. 

Trending videos

Back to Top