CONNECT WITH US  

ಧರೆ ತೊರೆದ ಹಾಕಿಂಗ್‌

ಐನ್‌ಸ್ಟೀನ್‌ ನಂತರ ಜಗತ್ತಿನೆಲ್ಲೆಡೆ ಅತಿ ಹೆಚ್ಚು ಗೌರವಾದರಕ್ಕೆ ಪಾತ್ರರಾದ, ಮನೆಮಾತಾದ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌ ಈಗ ಧರೆ ತೊರೆದು 
ವಿಶ್ವಪರ್ಯಟನೆಗೆ ತೆರಳಿದ್ದಾರೆ. ದೈಹಿಕ ನ್ಯೂನತೆಯನ್ನು ನಗುನಗುತ್ತಲೇ ಎದುರಿಸಿ ಕೋಟ್ಯಂತರ ಜನರಿಗೆ ಸ್ಫೂರ್ತಿಯಾದ ಅಜ್ಜನಿಗೆ ನುಡಿನಮನ...

ಸ್ಟೀಫ‌ನ್‌ ಹಾಕಿಂಗ್‌ ಅವರು ಆಯ್ದುಕೊಂಡ ಸಂಶೋಧನಾ ಕ್ಷೇತ್ರವೇ ಅಂಥದ್ದು. ಜನಸಾಮಾನ್ಯರ ಕಲ್ಪನೆಗೂ ಮಿಗಿಲಾದದ್ದು, ವಿಜ್ಞಾನಿಗಳ ಸಿದ್ಧಾಂತಗಳಿಗೆ ಸಡ್ಡು ಹೊಡೆಯುವಂಥದ್ದು. ಅಷ್ಟೇ ಏಕೆ, ದೇವರ ಅಸ್ತಿತ್ವವನ್ನೇ ಅಲ್ಲಗಳೆಯುವಂಥದ್ದು. ಆ ಮೂಲಕ ನಾಸ್ತಿಕರಿಗೆ
ವಿರುದ್ಧವಾದದ್ದು! ಇಷ್ಟೆಲ್ಲಾ ಏಕೆ ಹೇಳಬೇಕಾಯಿತು ಎಂದರೆ, ವ್ಯೋಮ ವಿಜ್ಞಾನವಿರುವ ಸ್ವರೂಪವೇ ಹಾಗೆ. ಸುಲಭವಾಗಿ ಅರ್ಥೈ ಸುವಂಥದ್ದಲ್ಲ. ಸುಲಭವಾಗಿ ಅರ್ಥವಾಗುವುದೂ ಇಲ್ಲ. ಲೆಕ್ಕವಿಲ್ಲದಷ್ಟು ಜಟಿಲಾತಿ ಜಟಿಲ ವಿಚಾರಗಳನ್ನು ತನ್ನೊಡಲಲ್ಲಿ ಇಟ್ಟುಕೊಂಡಿರುವ ಆ ಮಹಾ
ನಭವನ್ನು ಸ್ಟೀಫ‌ನ್‌ ಅವರು ಕರಾರುವಾಕ್‌ ಆಗಿ ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸಿದ ರೀತಿ ಮಾತ್ರ ಅದ್ಭುತ. ಅವರು ಅರ್ಥೈಸಿದ, ಪ್ರತಿಪಾದಿಸಿದ, ಸಂಶೋಧನಾ ಮಾದರಿಯಾಗಿ ವಿವರಿಸಿದ ಕೆಲ ಸಿದ್ಧಾಂತಗಳನ್ನು ಇಲ್ಲಿ ನಿಮಗಾಗಿ ಕೊಡಲಾಗಿದೆ.

ಕಪ್ಪು ರಂಧ್ರ ಸಿದ್ಧಾಂತ: ಬ್ರಹ್ಮಾಂಡದ ಅಸ್ತಿತ್ವವನ್ನೇ ನುಂಗಿಬಿಡುವಂಥ ಬ್ಲಾಕ್‌ ಹೋಲ್‌ಗ‌ಳ ಅಧ್ಯಯನಕ್ಕೆ ಮುಂದಾದ ಸ್ಟೀಫ‌ನ್‌, ಆ ಕುರಿತಂತೆ ಅನೇಕ ವಿಚಾರಗಳನ್ನು ಪತ್ತೆ ಹಚ್ಚಿದರು. ಪ್ರತಿಯೊಂದು ಕಪ್ಪು ರಂಧ್ರವು ವಿವಿಧ ಶ್ರೇಣಿಯ ವಿಕಿರಣಗಳನ್ನು ಹೊರಸೂಸುತ್ತದೆ. ಎಕ್ಸ್‌-ರೇ ಮಾದರಿಯ ಕಿರಣಗಳಿಂದ ಗಾಮಾ ಮಾದರಿ ಕಿರಣಗಳವರೆಗಿನ ವಿಕಿರಣಗಳು ಇವಾಗಿವೆ. 

ಇನ್ನು, ಕಪ್ಪು ರಂಧ್ರಗಳ ತಮ್ಮ ಎರಡನೇ ಸಂಶೋಧನೆಯಾಗಿ ಅವರು ಹೇಳಿದ್ದು, ಭೌತಶಾಸ್ತ್ರಜ್ಞರಲ್ಲಿ ಭಾರೀ ವಿರೋಧ ತಂದಿತು. ಈ ಸಿದ್ಧಾಂತದಲ್ಲಿ ಅವರು, ಬಾಹ್ಯಾಕಾಶದ ಕಪ್ಪು ರಂಧ್ರಗಳ ವ್ಯಾಪ್ತಿಯು ಯಾವುದೇ ಕಾರಣಕ್ಕೂ ಕಡಿಮೆಯಾಗುವುದಿಲ್ಲ ಎಂದು ಸ್ಟೀಫ‌ನ್‌ ಹೇಳಿದ್ದರಲ್ಲದೆ, ಈ ಕಪ್ಪು ರಂಧ್ರಗಳು ವಿಕಿರಣಗಳನ್ನು ಸೂಸುವುದರಿಂದ ಉಷ್ಣಾಂಶವನ್ನೂ ಕಾಯ್ದುಕೊಳ್ಳುತ್ತವೆ ಎಂದಿದ್ದರು. ಆದರೆ, ಇದು ಭೌತ ಶಾಸ್ತ್ರದ ಮೂಲ ಸಿದ್ಧಾಂತಗಳಿಗೆ ವಿರುದ್ಧವಾದ ನಿಯಮವಾಗಿತ್ತು. ಇದಕ್ಕೆ ಅನೇಕ ಭೌತ  ಶಾಸ್ತ್ರಜ್ಞರು ತಮ್ಮದೇ ಆದ ವಿಶ್ಲೇಷಣೆಗಳ ಮೂಲಕ ಟೀಕೆ ವ್ಯಕ್ತಪ ಡಿಸಿದರು. ಹಾಗಾಗಿ, ಮತ್ತೂಮ್ಮೆ ಸಂಶೋಧನೆಗೆ ಇಳಿದ ಸ್ಟೀಫ‌ನ್‌ ಅದರಲ್ಲಿ ತಿದ್ದುಪಡಿ ತಂದರು. ಇನ್ನು, 1974-75ರಲ್ಲಿ ಕಪ್ಪು ರಂಧ್ರಗಳ ಅವಸಾನದ ಬಗ್ಗೆ ತಾವು ನಡೆಸಿದ ಸಂಶೋಧನೆಗಳನ್ನು ವಿವರಿಸಿದ ಅವರು, ಇದಲ್ಲದೆ, ಕಪ್ಪು ರಂಧ್ರಗಳು ಒಂದಲ್ಲಾ ಒಂದು ದಿನ ಅವಸಾನವಾ ಗಲೇಬೇಕು. ಅವಸಾನವಾಗುತ್ತವೆ ಎಂದು ಪ್ರತಿಪಾದಿಸಿದರು.

ಸ್ಪೇಸ್‌ ಆ್ಯಂಡ್‌ ಟೈಮ್‌: 1915ರಲ್ಲಿ ಅಲ್ಬರ್ಟ್‌ ಐನ್‌ಸ್ಟೈನ್‌ ಮಾಡಿದ್ದ ಸಾಪೇಕ್ಷ ಸಿದ್ಧಾಂತವನ್ನು ಮತ್ತಷ್ಟು ವಿಸ್ತರಿಸಿದ ಅಥವಾ ಅದಕ್ಕೆ ಹೊಸ ಅರ್ಥವನ್ನು ತಂದುಕೊಟ್ಟ ಹೆಗ್ಗಳಿಕೆ ಸ್ಟೀಫ‌ನ್‌ಅವರಿಗೆ ಸಲ್ಲುತ್ತದೆ. ಈ ಕುರಿತಂತೆ ಸುದೀರ್ಘ‌ ಸಂಶೋಧನೆ ನಡೆಸಿದ ಸ್ಟೀಫ‌ನ್‌, ಕಾಲ, ವ್ಯೋಮಗಳಿಗೆ ಯಾವುದೇ ನಿಖರತೆಯಿಲ್ಲ. ಅವು, ಬ್ರಹ್ಮಾಂಡ ಅಸ್ತಿತ್ವಕ್ಕೂ ಮುಂಚಿನಿಂದ ಇರುವಂಥವು ಹಾಗೂ ಬ್ರಹ್ಮಾಂಡದ ನಂತರವೂ ಇರುವಂಥವು ಎಂದ ಐನ್‌ಸ್ಟೈನ್‌ ಸಿದ್ಧಾಂತಗಳನ್ನು ತಮ್ಮ ಬ್ರಹ್ಮಾಂಡ ಸಂಶೋಧನೆಗೆ ಬಳಸಿದ ಅವರು, ಬ್ರಹ್ಮಾಂಡ ಉದಯದ ಹಿಂದಿನ ಕಾರಣ, ಬ್ರಹ್ಮಾಂಡ ಹೇಗೆ ವಿಸ್ತಾರವಾಯಿತು ಎಂಬಿತ್ಯಾದಿ ಮಾಹಿತಿಗಳನ್ನು ಸಂಶೋಧಿಸಿದರು.

ಸಂವಹನ ಹೇಗಿತ್ತು?
ಮೋಟಾರ್‌ ನ್ಯೂರಾನ್‌ ಸಮಸ್ಯೆಯಿಂದ ಬಳಲುತ್ತಿದ್ದ ಹಾಕಿಂಗ್‌ ತಮಗಾಗಿಯೇ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ವೀರ್‌ ಚೇರ್‌ನಲ್ಲಿನ ಸಾಫ್ಟ್ವೇರ್‌ ಮೂಲಕ ಉತ್ತರ ಕೊಡುತ್ತಿದ್ದರು. ಮೊದಲೆಲ್ಲ ಕ್ರಿಯಾಶೀಲವಾಗಿದ್ದ ಎರಡು ಕೈ ಬೆರಳುಗಳ ಮೂಲಕ ಉತ್ತರಿಸುತ್ತಿದ್ದರು. ಆದರೆ, ಆ
ಬೆರಳುಗಳೂ ದುರ್ಬಲವಾದ ನಂತರ ಹಾಕಿಂಗ್‌ರ ಗಲ್ಲದ ಭಾಗದ ಸ್ನಾಯುಗಳಿಂದ ಕಂಪ್ಯೂಟರ್‌ ಕರ್ಸರ್‌ ಚಲಿಸುವಂತೆ ಮಾಡಲಾಯಿತು. ಈ ಸ್ನಾಯುಗಳ ಚಲನೆ ಕಂಪ್ಯೂಟರ್‌ನಲ್ಲಿ ಆಗಲೇ ಫೀಡ್‌ ಆಗಿರುವ ಒಂದೊಂದೇ ಪದಗಳನ್ನು ಹೆಕ್ಕಿ ಹೆಕ್ಕಿ ಜೋಡಿಸುತ್ತದೆ. ಒಂದು ನಿಮಿಷಕ್ಕೆ
ನಾಲ್ಕು ಪದಗಳನ್ನಷ್ಟೇ ಜೋಡಿಸಬಲ್ಲುದು. ಹೀಗಾಗಿ ಮಿದುಳು ಕ್ಷಣಾರ್ಧದಲ್ಲಿ ಸಿದ್ಧಪಡಿಸಿದ ಉತ್ತರವನ್ನು ಜನರಿಗೆ ತಿಳಿಸಲು ಹಲವು ನಿಮಿಷವಾದರೂ ಬೇಕಿತ್ತು.

ಗಣಿತವೇನು ಮಹಾ! 
ಹಾಕಿಂಗ್‌ ಅವರ ತಂದೆಗೆ ತಮ್ಮ ಮಗ ತಮ್ಮಂತೆಯೇ ವೈದ್ಯನಾಗಬೇಕು ಎಂಬ ಬಯಕೆಯಿತ್ತು. ಆದರೆ ಓದುವುದಾದರೆ ಗಣಿತವನ್ನೇ ಓದುವೆ ಎಂಬ ಹಠ ಹಾಕಿಂಗ್‌ರದ್ದು! ಬೇರೇನೂ ಓದಲ್ಲ ಎಂದು ಖಡಕ್ಕಾಗಿ ಹೇಳಿಬಿಟ್ಟರು. ಕೊನೆಗೆ ಅವರ ಹಠವೇ ಗೆದ್ದಿತು. ಅಪ್ಪ ಸೋತುಬಿಟ್ಟರು. ಆದರೆ ಯಾವ ಗಣಿತಕ್ಕಾಗಿ ಹಾಕಿಂಗ್‌ ಅಪ್ಪನೊಂದಿಗೆ ಯುದ್ಧ ಮಾಡಿ ಗೆದ್ದರೋ ಅದೇ ಸಬ್ಜೆಕ್ಟ್ ಅವರಿಗೆ ಬೋರ್‌ ಹೊಡೆಸಲಾರಂಭಿಸಿತು. ಇದನ್ನು
ಮೀರಿ ಏನನ್ನಾದರೂ ಮಾಡಬೇಕೆಂಬ ಚಡಪಡಿಕೆ ಶುರುವಾಯಿತು. ಆಗ ವಿಶ್ವದ ನಿಗೂಢತೆ ಬಗ್ಗೆ ಅಧ್ಯಯನ ಮಾಡುವ ಕಾಸ್ಮೊಲಜಿ (ವಿಶ್ವ ವಿಜ್ಞಾನ) ಅವರ ಕೈ ಜಗ್ಗಿತು!

ಐನ್ ಸ್ಟೀನ್ ಬೆನ್ನತ್ತಿ
ವಿಶ್ವದ ರಹಸ್ಯ ತಿಳಿದುಕೊಳ್ಳಲು ಹಾಕಿಂಗ್‌ ಖ್ಯಾತ ವಿಜ್ಞಾನಿಗಳಾದ ಆಲ್ಬರ್ಟ್‌ ಐನ್ ಸ್ಟೀನ್ ಮತ್ತು ಸರ್‌ ಐಸಾಕ್‌ ನ್ಯೂಟನ್‌ರ  ಅಧ್ಯಯನಕ್ಕಿಳಿದರು. ಗುರುತ್ವಾಕರ್ಷಣ ಬಲದ ಬಗ್ಗೆ ವಿಜ್ಞಾನಿಗಳು ನಂಬಿಕೊಂಡಿದ್ದ ಪರಿಕಲ್ಪನೆಗೆ ಹೊಸ ಆಯಾಮ ಕೊಟ್ಟಿರುವುದು ಐನ್‌
ಸ್ಟೀನ್‌ ಅವರ ಸಾಪೇಕ್ಷ ಸಿದ್ಧಾಂತ. ಎರಡು ಕಾಯಗಳ ನಡುವಿನ ಆಕರ್ಷಣಾ ಬಲವೇ ಗುರುತ್ವ ಎಂದು ಇದಕ್ಕೆ ಮೊದಲು ನ್ಯೂಟನ್‌ ಹೇಳಿದ್ದ. ಎರಡು ವಸ್ತುಗಳ ನಡುವಿನ ಪರಸ್ಪರ ಆಕರ್ಷಣೆಯು ಆ ವಸ್ತುವಿನ ದ್ರವ್ಯರಾಶಿ ಅವಲಂಬಿಸಿದೆ ಎನ್ನುವುದು ನ್ಯೂಟನ್‌ ವ್ಯಾಖ್ಯೆ. ಆದರೆ
ಐನ್ ಸ್ಟೀನ್ ಪ್ರಕಾರ ಗುರುತ್ವ ಎನ್ನುವುದು ಬಲ ಅಲ್ಲ. ನೆಲಕ್ಕೆ ಬೀಳುವ ವಸ್ತುವೊಂದರ ಚಲನೆ ಬರೇ ಆ ವಸ್ತುವಿನ ದ್ರವ್ಯರಾಶಿ ಮತ್ತು ಸಂರಚನೆಯನ್ನು ಅವಲಂಬಿಸಿಲ್ಲ. ಇದು ಆ ವಸ್ತು ಬೀಳುವ ಮಾಧ್ಯಮವನ್ನೂ ಅವಲಂಬಿಸಿದೆ ಎಂಬ ವಾದ ಮಂಡಿಸಿದ್ದ. ಒಟ್ಟಾರೆ ಐನ್‌ಸ್ಟಿàನ್‌
ಸಿದ್ಧಾಂತವನ್ನು ಆಧರಿಸಿಯೇ ವಿಶ್ವಪಯಣ ಮಾಡಬೇಕೆಂದು ಹಾಕಿಂಗ್‌ ನಿಶ್ಚಿಯಿಸಿದ್ದರು

2 ವರ್ಷ ಬದುಕಲಾರ ಎನಿಸಿಕೊಂಡವ
ಹಾಕಿಂಗ್‌ ಅವರಿಗೆ ಎಎಲ್‌ಎಸ್‌ ತಗುಲಿರುವುದನ್ನು ಪತ್ತೆ ಹಚ್ಚಿದ ವೈದ್ಯರು "ನಿಮ್ಮ ಮಗ ಎರಡು ವರ್ಷಕ್ಕಿಂತ ಹೆಚ್ಚಿಗೆ ಬದುಕಿರಲಾರ' ಎಂದವರ ಪೋಷಕರಿಗೆ ಖಡಾಖಡಿ ಹೇಳಿಬಿಟ್ಟರು. ಆದರೆ ವೈದ್ಯರ ಮಾತನ್ನು ಮೌನವಾಗಿಯೇ ಸುಳ್ಳಾಗಿಸಿದ ಹಾಕಿಂಗ್‌ ಅವರು 76 ವರ್ಷ ಬದುಕಿ ತೋರಿಸಿದರು. ಗಮನಿಸಬೇಕಾದ ಸಂಗತಿಯೆಂದರೆ ಮೊದಲು ತಮ್ಮ ಪರಿಸ್ಥಿತಿಯ ಬಗ್ಗೆ ಹಾಕಿಂಗ್‌ ತೀವ್ರ ಖನ್ನತೆಗೆ ಗುರಿಯಾಗಿದ್ದರಂತೆ. ಆದರೆ ಎಷ್ಟೋ ಸಲ ಖನ್ನತೆಗೆ ಗುರಿಯಾದಾಗ ಅಸ್ಪತ್ರೆಯಲ್ಲಿ ತಮ್ಮ ಪಕ್ಕದ ಬೆಡ್‌ನ‌ಲ್ಲಿ ಮಲಗಿದ್ದ ಒಬ್ಬ ಹುಡುಗನ ಸ್ಥಿತಿಯನ್ನು ನೆನಪಿಸಿಕೊಂಡು ಮತ್ತೆ ಉತ್ಸಾಹ ತುಂಬಿಕೊಳ್ಳುತ್ತಿದ್ದರು. ಆ ಹುಡುಗ ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ. ನೋವಿನಿಂದ ನರಳುತ್ತಲೇ ಹಾಕಿಂಗ್‌ ಕಣ್ಣೆದುರೇ ಆತ ಸಾವನ್ನಪ್ಪಿದ್ದ. ಈ ಸಾವಿನ ನೆನಪನ್ನು ಹಾಕಿಂಗ್‌ ಜೀವನಪರ್ಯಂತ ನೆನಪಿನಲ್ಲಿ ಉಳಿಸಿಕೊಂಡಿದ್ದರು. ತಮಗೆ ಮಾನಸಿಕ ಇಕ್ಕಟ್ಟು ಬಂದಾಗಲೆಲ್ಲ, ಆ ಹುಡುಗನ ಮುಂದೆ ನನ್ನದೇನಿದೆ ಸಮಸ್ಯೆ ಎಂದು ಹೇಳಿ ಸಮಾಧಾನಪಟ್ಟುಕೊಳ್ಳುತ್ತಿದ್ದರಂತೆ. 

ಗೆಲಿಲಿಯೋ ಸಾವು, ಐನ್ ಸ್ಟೀನ್  ಹುಟ್ಟು
ಜನವರಿ 8 ಇಡೀ ಮಾನವ ಜಗತ್ತು ಹೆಮ್ಮೆ ಪಡುವ ಡಾ. ಸ್ಟೀಫ‌ನ್‌ ಹಾಕಿಂಗ್‌ ಜನ್ಮ ದಿನ. ಇಟಲಿಯ ವಿಜ್ಞಾನಿ ಗೆಲಿಲಿಯೊ ಗೆಲಿಲಿಯೋ ಮರಣ ಹೊಂದಿದ 300ನೇ ವರ್ಷದಲ್ಲಿ ಇವರು ಜನಸಿದ್ದು. ಇನ್ನು ಹಾಕಿಂಗ್‌ ವಿಧಿವಶರಾದದ್ದು ಮಾರ್ಚ್‌ 14ರಂದು. ಖ್ಯಾತ ವಿಜ್ಞಾನಿ
ಅಲ್ಬರ್ಟ್‌ ಐನ್‌ಸ್ಟಿàನ್‌ ಜನ್ಮದಿನವಿದು!

ಜೀವನದ ಪ್ರಮುಖ ಘಟ್ಟಗಳು
*ಜ. 8, 1942 ಇಂಗ್ಲೆಂಡ್‌ನ‌ ವೈದ್ಯಕೀಯ ಸಂಶೋಧಕ ಫ್ರಾಂಕ್‌ ಹಾಕಿನ್‌ ಹಾಗೂ ಐಸೊಬೆಲ್‌ ಹಾಕಿನ್‌ ದಂಪತಿಯ 
ಮೊದಲ ಮಗನಾಗಿ ಜನನ.

*1959-62
 ತಮ್ಮ 17ನೇ ವಯಸ್ಸಿನಲ್ಲಿ ಭೌತಶಾಸ್ತ್ರ ವ್ಯಾಸಂಗ ಆಕ್ಸ್‌ಫ‌ರ್ಡ್‌ ವಿವಿಗೆ ಸೇರ್ಪಡೆ. 1962ರಲ್ಲಿ ಪದವಿ ಗಳಿಕೆ

1962
ಮೊದಲ ಬಾರಿಗೆ ಅಮಿಯೋಟ್ರೋಫಿಕ್‌ ಲ್ಯಾಟೆರಲ್‌ ಸ್ಲೆರೋಸಿಸ್‌ (ಎಎಲ್‌ಎಸ್‌) ಕಾಯಿಲೆ ಪತ್ತೆ

1963
ಕಾಲೇಜಿನ ಹೊಸ ವರ್ಷದ ಪಾರ್ಟಿಯಲ್ಲಿ ತಮ್ಮ ಭಾವಿ ಪತ್ನಿ ಜೇನ್‌ ವೈಲ್ಡಿ ಭೇಟಿ

1965
ಸ್ಟೀಫ‌ನ್‌ ಮತ್ತು ಜೇನ್‌ ವೈಲ್ಡಿ ವಿವಾಹ

1965
ಬ್ಲಾಕ್‌ ಹೋಲ್‌ಗ‌ಳ ಬಗ್ಗೆ ರೋಜರ್‌ ಪೆನ್ರೊಸ್‌ ಬರೆದಿದ್ದ ಪ್ರಮೇಯದಿಂದ ಪ್ರಭಾವಿತ. ಬ್ಲಾಕ್‌ ಹೋಲ್‌ ಗಳ ಸಂಶೋಧನೆಯತ್ತ ಚಿತ್ತ

1966
ತತ್ವ ಶಾಸ್ತ್ರದಲ್ಲಿ ಪಿಎಚ್‌.ಡಿ ಪದವಿ

1967
ಮೊದಲ ಪುತ್ರ ರಾಬರ್ಟ್‌ ಜನನ

1968
ಸಿಂಗ್ಯೂಲರ್‌ ಪ್ರಮೇಯ ಪ್ರತಿಪಾದನ

1969
ನರವ್ಯೂಹದ ಸಮಸ್ಯೆಯಿಂದಾಗಿ ವ್ಹೀಲ್‌ ಚೇರ್‌ ಆಧಾರ

1970
ಕಪ್ಪು ರಂಧ್ರಗಳ ಬಗ್ಗೆ ಹೊಸ ಸಂಶೋಧನಾ ವರದಿ "ದ ಸೆಕೆಂಡ್‌ ಲಾ ಆಫ್ ಬ್ಲಾಕ್‌ ಹೋಲ್‌ ಡೈನಮಿಕ್ಸ್‌' ಪ್ರಕಟ. 

1970
ಪುತ್ರಿ ಲೂಸಿ ಜನನ

1971
ಹಾಕಿಂಗ್‌ ಅವರ ಬ್ಲಾಕ್‌ ಹೋಲ್‌ ಸಿದ್ಧಾಂತಕ್ಕೆ "ಗ್ರಾವಿಟಿ ಆಫ್ ರಿಸರ್ಚ್‌ ಫೌಂಡೇಷನ್‌' ಪುರಸ್ಕಾರ

1973
ಹಾಕಿಂಗ್‌ ಮೊದಲ ಪುಸ್ತಕ "ದ ಲಾರ್ಜ್‌ ಸ್ಕೇಲ್‌ ಸ್ಟ್ರಕ್ಚರ್‌ ಆಫ್ ಸ್ಪೇಸ್‌-ಟೈಮ್‌' ಪ್ರಕಟ. 

1974
ಕಪ್ಪು ರಂಧ್ರಗಳ ಬಗೆಗಿನ ಎರಡನೇ ಸಿದ್ಧಾಂತವು ಮಾನ್ಯತೆ ಪಡೆಯದಿದ್ದರೂ, ಈ ಕ್ಷೇತ್ರದಲ್ಲಿನ ಸಂಶೋಧನೆ ಹಾಗೂ ಮೊದಲ ಸಿದ್ಧಾಂತದಿಂದಾಗಿ ವಿಶ್ವಮಟ್ಟದಲ್ಲಿ ಪ್ರಸಿದ್ಧಿ. 

1974
ಕ್ಯಾಲಿಫೋರ್ನಿಯಾ ತಾಂತ್ರಿಕ ಕಾಲೇಜಿಗೆ ಅತಿಥಿ ಪ್ರಾಧ್ಯಾಪಕ ಸೇವೆಗೆ ನೇಮಕ

1975
6ನೇ ಪೋಪ್‌ ಪಾಲ್‌ ಅವರಿಂದ "ಪ್ಲಸ್‌ ಇಲೆವೆನ್‌ ಗೋಲ್ಡ್‌ ಮೆಡಲ್‌ ಫಾರ್‌ ಸೈನ್ಸ್‌' ಪದಕ ಪ್ರದಾನ.

1975
ಹಾಕಿನ್ಸ್‌ಗೆ ನಿಮೋನಿಯಾ ಸೋಂಕು

1988
"ಎ ಬ್ರಿಫ್ ಹಿಸ್ಟರಿ ಆಫ್ ಟೈಮ್‌' ಪುಸ್ತಕ ಪ್ರಕಟ

1990
ಸ್ಟೀಫ‌ನ್‌ ಹಾಗೂ ಜೇನ್‌ ವಿಚ್ಛೇದನ. 

1992
ಅಪಾರ ಮನ್ನಣೆ ತಂದುಕೊಟ್ಟ "ದ ಯೂನಿವರ್ಸ್‌ ಇನ್‌ ಎ ನಟ್‌ಶೆಲ್‌' ಪುಸ್ತಕ ಪ್ರಕಟ

2005
ಅವರ ಮಾತುಗಳನ್ನು ಪ್ರತಿಧ್ವನಿಸಲು ವಿಶೇಷ ಧ್ವನಿವರ್ಧಕ ಅಳವಡಿಕೆ

2009
ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರ

2010
ಐ ಬ್ರೇನ್‌ ಸಂಶೋಧನೆಗೆ ಆದ್ಯತೆ ನೀಡುವುದಾಗಿ ಘೋಷಣೆ.

2013
ಲಾರ್ಜ್‌ ಹೆಡ್ರಾನ್‌ ಕೊಲೈಡರ್‌ ಪ್ರಯೋಗದಲ್ಲಿ ದೇವಕಣ ಪತ್ತೆ ಮಾಡಿದ ಪೀಟರ್‌ ಹಿಗ್ಸ್‌ಗೆ ನೋಬೆಲ್‌ ಪಾರಿತೋಷಕವನ್ನು   ಸಂತೋಷದಿಂದಲೇ ಬಿಟ್ಟುಕೊಟ್ಟ ಹಾಕಿಂಗ್‌

2015
ಅನ್ಯಗ್ರಹ ಜೀವಿಗಳ ಇರುವಿಕೆ ಬಗ್ಗೆ ಸಿದ್ಧಾಂತ ಮಂಡಿಸಿದ ಹಾಕಿಂಗ್‌ - ಲಂಡನ್‌ನ ಇಂಪೀರಿಯಲ್‌ ಕಾಲೇಜ್‌ನಿಂದ ಗೌರವ ಡಾಕ್ಟರೇಟ್‌

2018
ವಿಧಿವಶವಾದ ವಿಜ್ಞಾನಿ ಸ್ಟೀಫ‌ನ್‌ ಹಾಕಿಂಗ್‌


Trending videos

Back to Top