CONNECT WITH US  

ಜನ ಮಾತಾಡದಿದ್ದರೂ, ಮನಸ್ಸು ಮಾತಾಡಲ್ವ?

ಅಯ್ಯಯ್ಯೋ, ಹಿಂಗಾಗಿಬಿಡ್ತ ಅನ್ನುವುದರೊಳಗೆ ಅಮ್ಮನ ಕಣ್ಣಿಂದ ದಳದಳನೆ ನೀರಿಳಿಯಿತು

"ಆಗಲೇ ಎಂಟು ಗಂಟೆ ಆಗ್ತಾ ಬಂತು. ಇನ್ನೂ ಮಲಗಿದ್ದೀಯಲ್ಲ? ಎದ್ದೇಳು. ಟೀ ಪುಡಿ ಮುಗಿದಿದೆ. ಬೇಗ ಹೋಗಿ ಟೀ ಪುಡಿ ತಗೊಂಡ್ಬಾ' ಅಮ್ಮನ ಮಾತು ಮುಗಿಯುವುದರೊಳಗಾಗಿ ಪಕ್ಕದೂರಿನಲ್ಲಿದ್ದ ಅಂಗಡಿಯ ದಾರಿ ಹಿಡಿದಿದ್ದೆ. ನಾನು ಟೀ ಪುಡಿ ಖರೀದಿಸಿ ಊರಿನ ಕಡೆಗೆ ತಿರುಗಿದ್ದೆನಷ್ಟೆ: ಆಗಲೇ ಬೈಕಿನಲ್ಲಿ ಬಂದ ಇಬ್ಬರು- "ಈಗಷ್ಟೇ ಲಾಯರ್‌ ನಂಜೇಗೌಡರು ಹೋಗಿ ಬಿಟ್ರಂತೆ. ಸ್ನಾನಕ್ಕೆ ಹೋಗಿದ್ದವರಿಗೆ ಬಚ್ಚಲು ಮನೆಯಲ್ಲೇ ಹಾರ್ಟ್‌ ಅಟ್ಯಾಕ್‌ ಆಗಿಬಿಡ್ತಂತೆ...' ಎಂದರು. ಮರುಕ್ಷಣವೇ ನನ್ನನ್ನು ನೋಡಿ- "ಓಹ್‌, ನೀನು ಇಲ್ಲೇ ಇದೀಯ? ನಿಮ್‌ ಚಿಕ್ಕಪ್ಪ ಹೋಗಿಬಿಟ್ರಾ ಕಣೋ... ಓಡು ಬೇಗ...' ಅಂದರು.

ಸಂಬಂಧದ ಪ್ರಕಾರ, ನಂಜೇಗೌಡರು ನನ್ನ ಚಿಕ್ಕಪ್ಪ ಆಗಬೇಕಿತ್ತು. ಆದರೆ, ಈ ಸಂಬಂಧದ ಎಳೆ ಸ್ವಲ್ಪ ದೂರದ್ದಾಗಿತ್ತು. ಬಾದರಾಯಣ ಸಂಬಂಧ ಅನ್ನುತ್ತಾರಲ್ಲ; ಹಾಗೆ! ದೈಹಿಕವಾಗಿ ಕಟ್ಟುಮಸ್ತಾಗಿದ್ದ ಈ ಚಿಕ್ಕಪ್ಪ, ತಂತ್ರಗಾರಿಕೆಗೆ, ನಗುನಗುತ್ತಲೇ ಸುಳ್ಳು ಹೇಳಿ ಜನರಿಗೆ ಮಂಕುಬೂದಿ ಎರಚುವಂಥ ಮಾತುಗಾರಿಕೆಗೆ ಹೆಸರಾಗಿದ್ದರು. ಲಾಯರ್‌ ಆಗಿದ್ದರು ಅಂದಮೇಲೆ ಹೇಳುವುದೇನಿದೆ? ಕಾನೂನಿನ ಅಂಶಗಳನ್ನು ಹೇಗೆ ತನ್ನ ಪರವಾಗಿ ಮಾಡಿಕೊಳ್ಳಬೇಕು? ವಿಚಾರಣೆಯ ಸಂದರ್ಭದಲ್ಲಿ ಕಕ್ಷಿದಾರರಿಂದ ಹೇಗೆಲ್ಲಾ ಸುಳ್ಳು ಹೇಳಿಸಬೇಕು ಎಂಬುದು ಚಿಕ್ಕಪ್ಪನಿಗೆ ಕರತಲಾಮಲಕವಾಗಿತ್ತು. ಈ ತಂತ್ರಗಾರಿಕೆಯ ಬಲದಿಂದಲೇ ಅವರು ಕೇಸ್‌ಗಳನ್ನು ಗೆದ್ದದ್ದು ಮಾತ್ರವಲ್ಲ; ನನ್ನ ತಂದೆಗೆ ಮೋಸ ಮಾಡುವಲ್ಲಿಯೂ ಯಶಸ್ವಿಯಾಗಿದ್ದರು. ಯಾವುದೋ ದಾಖಲೆಗೆ ಸಹಿ ಬೇಕು ಎಂದು ಕೇಳುವ ನೆಪದಲ್ಲಿ "ವಂಶ ಪಾರಂಪರ್ಯವಾಗಿ ಬಂದ ಆಸ್ತಿಯನ್ನೆಲ್ಲ ಸ್ವಇಚ್ಛೆಯಿಂದ ಬರೆದು ಕೊಡುತ್ತಿದ್ದೇನೆ' ಎಂಬ ಒಕ್ಕಣೆಯ ಪತ್ರಕ್ಕೆ ಅಪ್ಪನ ಸಹಿ ಹಾಕಿಸಿ ಕೊಂಡುಬಿಟ್ಟಿದ್ದರು. ನಮ್ಮದು ಬಾದರಾಯಣ ಸಂಬಂಧವೇ ಇರಬಹುದು. ಆದರೆ, ಅವನು ವರಸೆಯಿಂದ ನನಗೆ ತಮ್ಮನಾಗ ಬೇಕು. ಅವನು ಖಂಡಿತ ಕೆಟ್ಟದು ಮಾಡಲಾರ ಎಂದು ಯೋಚಿಸಿದ್ದ ನನ್ನ ಮುಗ್ಧ ತಂದೆ, ಚಿಕ್ಕಪ್ಪ ತೋರಿಸಿದ ಕಡೆಯಲ್ಲೆಲ್ಲ ಸಹಿ ಹಾಕಿಬಿಟ್ಟಿದ್ದರು. ಕಡೆಗೊಂದು ದಿನ ವಿಷಯ ಗೊತ್ತಾದಾಗ, ಆಘಾತ ತಡೆಯಲಾಗದೆ ಹಾರ್ಟ್‌ಅಟ್ಯಾಕ್‌ನಿಂದ ತೀರಿ ಕೊಂಡಿದ್ದರು. ಆ ಕ್ಷಣದಿಂದಲೇ-ಅಮ್ಮನೂ-ನಾನೂ ಅಕ್ಷರಶಃ ತಬ್ಬಲಿಗಳಾಗಿದ್ದೆವು.

ಈ ಸಂದರ್ಭದಲ್ಲಿ ಬೇಗ ಚೇತರಿಸಿಕೊಂಡವಳೇ ಅಮ್ಮ. ವಂಚಿಸಿದ ಜನರ ಮಧ್ಯೆಯೇ ಉಳಿದರೆ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ. ಎಲ್ಲರಿಂದ ದೂರವಿರುವುದೇ ಲೇಸು ಅಂದು ಕೊಂಡವಳು, ಪರಿಚಯದ ಜನರಲ್ಲಿ ಸಹಾಯಕ್ಕೆ ಬೇಡಿಕೊಂಡಳು. ಊರಾಚೆಗಿದ್ದ ಬಯಲಿನಲ್ಲಿ ಪುಟ್ಟದೊಂದು ಮನೆ ಕಟ್ಟಿಕೊಂಡಳು. ಅಮ್ಮನಿಗೆ ಟೈಲರಿಂಗ್‌ ಗೊತ್ತಿತ್ತು. ಹೊಟ್ಟೆ ತುಂಬಿಸಲು ಯಾವ ಕೆಲಸ ಮಾಡಿದ್ರೂ ನಡೆಯುತ್ತೆ ಎಂಬ ಯೋಚನೆ ಅವಳದಾಗಿತ್ತು. ಹಾಗಾಗಿ, ಕೂಲಿ ಮಾಡಲೂ ಆಕೆ ಹಿಂಜರಿಯಲಿಲ್ಲ. ಚೆನ್ನಾಗಿ ಓದಿ ಒಳ್ಳೆಯ ಕೆಲಸಕ್ಕೆ ಸೇರಿಕೊಂಡು ಅಮ್ಮನೊಂದಿಗೆ ಸಿಟಿಗೆ ಹೋಗಿ ಬಿಡಬೇಕು ಎಂಬುದಷ್ಟೇ ನನ್ನ ಯೋಚನೆಯಾಗಿತ್ತು. ಹಾಗಾಗಿ, ನಾನೂ ಹೆಚ್ಚೇನೂ ಯೋಚಿಸಲಿಲ್ಲ. ಆದರೂ ಕೆಲವೊಮ್ಮೆ ಊರ ಜನ- "ನಿಮ್ಮ ಚಿಕ್ಕಪ್ಪ ನಿಮಗೆ ಈ ಥರಾ ಮೋಸ ಮಾಡಬಾರದಿತ್ತು. ಅವರು ನೋಡಿದರೆ ಬಂಗಲೇಲಿ ಇದಾರೆ. ನೀವು ನೋಡಿದ್ರೆ ಊರಾಚೆಗಿನ ಪುಟ್ಟ ಮನೇಲಿ ದ್ದೀರಿ. ನಿಮ್ಮನ್ನು ನೋಡಿದ್ರೆ ಅಯ್ಯೋ ಅನಿಸುತ್ತೆ. ಆ ಮನುಷ್ಯ ಹೆಸರಿಗೆ ತಕ್ಕಂತೆ ಮೈತುಂಬ ನಂಜನ್ನೇ ತುಂಬಿಕೊಂಡಿದಾನೆ...' ಎಂದೆಲ್ಲಾ ಹೇಳುತ್ತಿದ್ದರು. ಆಗೆಲ್ಲಾ ನಮ್ಮ ಪರಿಸ್ಥಿತಿಯ ಬಗ್ಗೆ ಬೇಸರವೂ, ಚಿಕ್ಕಪ್ಪನ ಬಗ್ಗೆ ಜಿಗುಪ್ಸೆಯೂ ಆಗುತ್ತಿತ್ತು.

ಚಿಕ್ಕಪ್ಪನಿಗೆ ನಾಲ್ಕು ಮಕ್ಕಳು, ಮೂರು ಹೆಣ್ಣು, ಒಂದು ಗಂಡು. ಮಕ್ಕಳೆಲ್ಲಾ ನನಗಿಂತ ಏಳೆಂಟು ವರ್ಷ ಚಿಕ್ಕವರು. ಅವರು ಶ್ರೀಮಂತರು, ನಾವು ಬಡವರು. ಅವರು ಶೋಷಕರು, ನಾವು ಶೋಷಿತರು ಎಂಬ ಭಾವವೊಂದು ಮನಸಲ್ಲಿ ಗಟ್ಟಿಯಾಗಿ ಉಳಿದಿದ್ದರಿಂದ ಅವರೊಂದಿಗೆ ನಮಗೆ ಮಧುರ ಬಾಂಧವ್ಯ ಇರಲಿಲ್ಲ. ಗಣ್ಯರ ಸಹವಾಸ ಮತ್ತು ಉತ್ತಮ ಆರೋಗ್ಯ ಹೊಂದಿದ್ದ ಚಿಕ್ಕಪ್ಪ, ತೋರಿಕೆಗಾದರೂ ನಮ್ಮತ್ತ ತಿರುಗಿ ನೋಡುತ್ತಿರಲಿಲ್ಲ. ಹೀಗೆ, ಅವರ್ಯಾರೋ ನಾವ್ಯಾರೋ ಎಂಬಂತೆ ಬದುಕುತ್ತಿದ್ದಾಗಲೇ- ಹಾರ್ಟ್‌ ಅಟ್ಯಾಕ್‌ನಿಂದ ನಂಜೇಗೌಡರು ಹೋಗಿಬಿಟ್ರಾ ಎಂಬ ಸುದ್ದಿ ನನ್ನನ್ನು ತಲುಪಿತ್ತು.

ಇದನ್ನೆಲ್ಲ ಯೋಚಿಸುತ್ತಲೇ ಗಡಿಬಿಡಿಯಿಂದ ಮನೆಗೆ ಬಂದು ಅಮ್ಮನಿಗೆ ವಿಷಯ ತಿಳಿಸಿದೆ. ಆಗಷ್ಟೇ ಸ್ನಾನ ಮುಗಿಸಿಕೊಂಡು ಹೊರಗೆ ಬಂದಿದ್ದ ಅಮ್ಮ, ಸುದ್ದಿ ಕೇಳಿದಾಕ್ಷಣ ನಿಂತಲ್ಲೇ ಕಂಪಿಸಿದಳು. "ಅಯ್ಯಯ್ಯೋ, ಹೀಗಾಗಿಬಿಡ್ತ? ನೀನು ಎಂಟು ಗಂಟೆಯ ತನಕ ಮಲಗಿದ್ದುದನ್ನ ನೋಡಿದಾಗ್ಲೆà ಇದೇನೋ ಅಪಶಕುನ ಅನಿಸಿತ್ತು, ಈಗ ನೋಡಿದ್ರೆ ಹಿಂಗಾಯ್ತಾ?' ಅನ್ನುವುದರೊಳಗೆ ಆಕೆಯ ಕಣ್ಣಿಂದ ದಳದಳನೆ ನೀರಿಳಿಯಿತು. ತಕ್ಷಣವೇ ಸಾವರಿಸಿಕೊಂಡು, "ನೀನು ತಕ್ಷಣ ಅವರ ಮನೆಗೆ ಹೋಗು. ಅಲ್ಲಿ ಏನು ಕೆಲಸ ಇದ್ದರೂ ಮಾಡು. ನಿಮ್ಮ ಚಿಕ್ಕಮ್ಮನಿಗೆ, ಮಕ್ಕಳಿಗೆ ಸಮಾಧಾನ ಹೇಳು. ಸ್ವಲ್ಪ ಹೊತ್ತಲ್ಲೇ ನಾನೂ ಬರ್ತೀನಿ...' ಅಂದಳು.

"ಏನಮ್ಮ ಹೇಳ್ತಿದೀಯ? ನಾವು ಅವರ ಮನೆಗೆ ಹೋಗುವುದಾ?' ಅನುಮಾನ ಮತ್ತು ಅಸಹನೆಯಿಂದ ಕೇಳಿದೆ. "ಹೌದು ಕಣೋ. ಹೋಗ್ಬೇಕು, ಹೋಗ್ಲೆàಬೇಕು. ಯಾರ ಜೊತೇನೇ ಆಗಲಿ, ಬದುಕಿರುವಷ್ಟು ದಿನ ಜಗಳ, ದ್ವೇಷ, ಜಿದ್ದು ಎಲ್ಲಾ ನಡೆಯುತ್ತೆ. ಆ ಮನುಷ್ಯ ಸತ್ತುಹೋದ ಅಂದರೆ, ಆ ಕ್ಷಣ ದಿಂದಲೇ ಹಳೆಯದ್ದನ್ನೆಲ್ಲ ಮರೆತುಬಿಡಬೇಕು' ಅಂದಳು ಅಮ್ಮ.

ನಿಜ ಹೇಳಬೇಕೆಂದರೆ, ಚಿಕ್ಕಪ್ಪನೊಂದಿಗೆ ಅಂಥಾ ಅಟ್ಯಾಚ್‌ಮೆಂಟ್‌ ಇರದಿದ್ದ ಕಾರಣದಿಂದ, ಈ ಹಠಾತ್‌ ಸಾವು ನನಗೆ ಅತಿಯಾದ ದುಃಖವನ್ನಾಗಲಿ, ಆಘಾತವನ್ನಾಗಲಿ ಉಂಟು ಮಾಡಿರಲಿಲ್ಲ. ತಪ್ಪು ಮಾಡಿದ್ದ, ಈಗ ಅನುಭವಿಸಿದ್ದಾನೆ ಎಂಬಂಥ ಭಾವನೆಯಷ್ಟೇ ನನ್ನದಾಗಿತ್ತು. ಅವರ ಮನೆಗೆ ಹೋಗಲು ಇಷ್ಟವೇ ಇರಲಿಲ್ಲ. ಅದನ್ನೇ ಅಮ್ಮನಿಗೂ ಹೇಳಿದೆ. "ಅವರು ನಮಗೆ ಅಷ್ಟೆಲ್ಲ ಮೋಸ ಮಾಡಿದಾರೆ. ಜೊತೆಗೆ ಅವರ್ಯಾರೂ ನಮ್ಮ ಜೊತೆ ಮಾತಾಡೋದಿಲ್ಲ. ಹೀಗಿರುವಾಗ ಅಲ್ಲಿಗೆ ಹೋಗಿ ಏನ್ಮಾಡ್ಲಿ? ಮಾತಾಡಿಸುವ ಜನರೇ ಇಲ್ಲ ಅಂದಮೇಲೆ ಏನು ಕೆಲಸ ಮಾಡಲಿ?' ಅಂದೆ.

ನೋಡೋ, ಅವರು ಮೋಸ ಮಾಡಿದ್ರು ಅಂತಾನೇ ಇಟ್ಕೊ. ಅದರಿಂದ ಏನಾಯ್ತು? ನಮ್ಮ ಶಕ್ತಿ ಏನು ಅಂತ ನಮಗೆ ಗೊತ್ತಾಯ್ತು. ಪಿತ್ರಾರ್ಜಿತ ಆಸ್ತಿ ಇಲ್ಲದಿದ್ರೂ ನೆಮ್ಮದಿಯಾಗಿ ಬದುಕಬಹುದು ಅನ್ನೋದು ಅರ್ಥವಾಯ್ತು. ಹೌದಲ್ವ? ಅಷ್ಟು ಮಾತ್ರ ಅರ್ಥ ಮಾಡ್ಕೊ. ಯಾರೇ ಆಗಿರ್ಲಿ, ಸಾಯೋ ತನಕ ದ್ವೇಷ, ಸತ್ತ ಮೇಲೆ ಎಲ್ಲಾ ಮುಗೀತು. ಯಾವ ಕೋಪಾನೂ ಇಲ್ಲ, ತಾಪಾನೂ ಇಲ್ಲ, ದ್ವೇಷವೂ ಇಲ್ಲ. ಹೊರಡು ಬೇಗ. ಅಲ್ಲಿ ಯಾರೋ ಗುರುತಿಸಬೇಕು, ಯಾರೋ ಮಾತಾಡಿಸಬೇಕು ಅಂತ ಕಾಯಬೇಡ. ಹೋದ ತಕ್ಷಣ ನಿಮ್ಮ ಚಿಕ್ಕಪ್ಪನ ದೇಹಕ್ಕೆ ನಮಸ್ಕಾರ ಮಾಡು. ಮಕ್ಕಳಿಗೆ ಸಮಾಧಾನ ಹೇಳು. ಚಟ್ಟ ಕಟ್ಟುವುದರಿಂದ ಹಿಡಿದು ಹೂಳುವ ಮಾಡುವತನಕ ಯಾವ ಕೆಲಸ ಆದ್ರೂ ಸರಿ, ಮಾಡ್ತಾ ಹೋಗು. ಹುಂ, ಹೊರಡು ಬೇಗ' ಅಂದವಳು, ಸರಸರನೆ ಒಳಗೆ ಹೋಗಿ ಒಂದಷ್ಟು ಹಣ ತಂದು ನನ್ನ ಕೈಗಿಟ್ಟು,  "ಗಂಧದಕಡ್ಡಿ, ಕರ್ಪೂರ, ಪೂಜೆ, ಅಂತೆಲ್ಲಾ ಅಲ್ಲಿ ಏನೇನೋ ಖರ್ಚಿರುತ್ತೆ. ಆಗೆಲ್ಲಾ ಚಿಕ್ಕಪ್ಪನ ಮಕ್ಕಳ ಕಡೆ ನೋಡ ಬೇಡ. ನೀನೇ ಎಲ್ಲವನ್ನೂ ಮ್ಯಾನೇಜ್‌ ಮಾಡಬೇಕು' ಅಂದಳು.

ಪೈಲ್ವಾನ್‌ನಂಥ ದೇಹಾಕೃತಿ ಹೊಂದಿದ್ದ ಚಿಕ್ಕಪ್ಪ, ಸ್ನಾನಗೃಹದಲ್ಲಿ ಬಿದ್ದುಹೋಗಿದ್ದರು. ಇಂಥದೊಂದು ಸಂದರ್ಭವನ್ನು ಕನಸಲ್ಲೂ ಊಹಿಸದಿದ್ದ ಚಿಕ್ಕಮ್ಮ ಮತ್ತು ಮಕ್ಕಳು ಗೋಳಾಡುತ್ತಿ ದ್ದರು. ಅವರನ್ನು ಆ ಸ್ಥಿತಿಯಲ್ಲಿ ನೋಡುತ್ತಿದ್ದಂತೆ, ಅದೇನಾಯೊ ಕಾಣೆ; ಚಿಕ್ಕಪ್ಪಾ...ಅನ್ನುತ್ತಾ ಕುಸಿದು ಕುಳಿತೆ. ಈ ಮಾತು ಕೇಳಿದ್ದೇ ತಡ; ಚಿಕ್ಕಪ್ಪನ ಮಕ್ಕಳೆಲ್ಲ ಓಡಿಬಂದು ತಬ್ಬಿಕೊಂಡರು. ಚಿಕ್ಕಮ್ಮ, ನನ್ನನ್ನೇ ಆದ್ರìಳಾಗಿ ನೋಡುತ್ತ, ಆಕಾಶದೆಡೆಗೆ ಕೈ ಮಾಡಿ ತೋರಿಸುತ್ತ- "ಹೋಗಿಬಿಟ್ರಲ್ಲಪ್ಪಾ...

ಇನ್ನು ನಮಗೆ ಯಾರು ದಿಕ್ಕು?' ಎನ್ನುತ್ತಾ ಹಣೆಹಣೆ ಚಚ್ಚಿಕೊಳ್ಳಲು ಆರಂಭಿಸಿದರು. ಆಗಲೇ ಅಮ್ಮನ ಮಾತುಗಳು ನೆನಪಿಗೆ ಬಂದವು. "ಸಾವಿನ ಮನೆಯಲ್ಲಿ ಸಾವಿರ ಕೆಲಸ ಇರ್ತವೆ. ಯಾರೋ ಕೆಲಸ ಹೇಳಲಿ ಅಂತ ಕಾಯಬಾರದು. ಉಚ್ಚ, ನೀಚ ಅನ್ನದೇ ಎಲ್ಲ ಕೆಲಸ ಮಾಡಿಬಿಡಬೇಕು...'
ನನ್ನನ್ನು ಕಂಡಿದ್ದೇ, ಅಲ್ಲಿದ್ದ ನಾಲ್ಕಾರು ಮಂದಿ ಗುಸುಗುಸು ಮಾತಾಡಿಕೊಂಡರು. ಆಗಲೇ ಯಾರೋ- "ದೇಹವನ್ನ ಹಾಲ್‌ಗೆ ಎತ್ಕೊಂಡು ಹೋಗಬೇಕು' ಅಂದರು. ಅದಕ್ಕೆಂದೇ ಗಟ್ಟಿಮುಟ್ಟಾಗಿದ್ದ ನಾಲ್ಕೆ ದು ಜನರೂ ಬಂದರು. ಅವರೊಂದಿಗೆ ನಾನೂ ಕೈ ಜೋಡಿಸಿದೆ. ಇಷ್ಟು ದಿನದವರೆಗೂ ಕರಿಕೋಟು-ಪ್ಯಾಂಟಿನ ವೇಷದಲ್ಲಿ, ವರ್ಷಕ್ಕೊಮ್ಮೆ ನಡೆಯುತ್ತಿದ್ದ ನಾಟಕದಲ್ಲಿ ಭೀಮ ಸೇನನ ಪಾತ್ರದಲ್ಲಿ, ಊರಿನ ಉತ್ಸವ, ಚುನಾವಣೆಯಂಥ ಸಂದರ್ಭಗಳಲ್ಲಿ- ಅಬ್ಬರದ ಮಾತುಗಳಿಂದ ಮೆರೆಯುತ್ತಿದ್ದ ಚಿಕ್ಕಪ್ಪ, ಇವತ್ತು ನಿಶ್ಶಬ್ದವಾಗಿ ಮಲಗಿದ್ದರು.

ಮುಂದಿನ ಕಾರ್ಯಗಳೆಲ್ಲ ಯಾಂತ್ರಿಕವಾಗಿ ನಡೆದವು. ಅದು ವರೆಗೂ ಚಿಕ್ಕಪ್ಪನ ಎಡಬಲದಲ್ಲಿ ಠಳಾಯಿಸುತ್ತಿದ್ದ ಜನ ಈಗ ಸಂಬಂಧವೇ ಇಲ್ಲದವರಂತೆ ನೆಪಮಾತ್ರಕ್ಕೆ ಒಂದೊಂದು ಹಾರ ಹಾಕಿ ಸರಿದುಹೋದರು. ಸಮಯ ಜಾರುತ್ತಿದ್ದಂತೆ ಅಂತಿಮ ದರ್ಶನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿತು. ಆಗಲೇ ಕೆಲವರು- "ಇಷ್ಟೇ ಕಣಿ ಲೈಫ‌ು. ಇವತ್ತು ಇವರಿಗೆ ಆದದ್ದೇ ನಾಳೆ ನಮಗೂ ಆಗಬಹುದು. ಅದು ಗೊತ್ತಿಲೆª ನಾವು ಕನಸುಗಳ ಅರಮನೆ ಕಟ್ಕೊಂಡು ಮೆರೀತೀವಿ' ಅಂದರು. ಮತ್ತೂಬ್ಬರು- "ಎಷ್ಟು ಆಸ್ತಿ ಮಾಡಿ ಏನುಪಯೋಗ? ಕಡೆಗೆ ಬೇಕಾಗೋದು ಆರಡಿ- ಮೂರಡಿಯ ಜಾಗ, ಅಷ್ಟೆ' ಎಂದು ಪಿಸುಗುಟ್ಟಿದರು. ಮತ್ತೂಬ್ಬರು-ಸಾವು ಬೆನ್ನ ಹಿಂದೇನೇ ಕೂತಿರ್ತದಂತೆ ಕಣ್ರಿ. ಯಾವಾಗ ಅಟ್ಯಾಕ್‌ ಮಾಡುತ್ತೋ ಹೇಳ್ಳೋಕಾಗಲ್ಲ ಎಂದು ನಿಟ್ಟುಸಿರಾದರು. ಅಳು, ಆಕ್ರಂದನ, ಅಸಹನೆ, ಅಸಹಾಯಕತೆ, ಚಡಪಡಿಕೆ ಮತ್ತು ಎಲ್ಲವನ್ನೂ ಕಳೆದುಕೊಂಡ ಅನಾಥಪ್ರಜ್ಞೆ ಯೊಂದಿಗೆ ಅಂತ್ಯಸಂಸ್ಕಾರ ಮುಗಿಯಿತು.

ನನಗೆ ಅಚ್ಚರಿ ಮೂಡಿಸಿದ್ದು ಅಮ್ಮನ ವರ್ತನೆ. ಆಕೆಗೆ, ಜಮೀನು ಕೈಬಿಟ್ಟಿತ್ತು. ಮನೆಯೂ ಕಳೆದುಹೋಗಿತ್ತು. ಬಡತನ ಜೊತೆಯಾ ಗಿತ್ತು. ಮಿಗಿಲಾಗಿ, ಗಂಡನೇ ಹೋಗಿಬಿಟ್ಟಿದ್ದ. ಇಷ್ಟೆಲ್ಲ ಆಗಿದ್ದು ಚಿಕ್ಕಪ್ಪನ ಕೇಡಿಗತನದಿಂದ ಎಂದು ಗೊತ್ತಿದ್ದರೂ, ಅಂಥದೇನೂ ನಡೆದೇ ಇಲ್ಲ ಅನ್ನುವಂತೆ ವರ್ತಿಸಿಬಿಟ್ಟಳು ಅಮ್ಮ. ಶವಸಂಸ್ಕಾರ ಮುಗಿದು, ಮುಂದಿನ ಕೆಲಸಗಳು ಏನೇನಾಗಬೇಕು ಎಂದು ಹಿರಿ ಯರೆಲ್ಲಾ ಅಪ್ಪಣೆ ಕೊಡಿಸಿದಾಗ - "ನಾವು ಮುಂದೆ ನಿಂತ್ಕೊಂಡು ಮಾಡ್ತೀವಿ ಕಣ್ರಪ್ಪ. ನೀವು ದೊಡ್ಡವರು ಜೊತೆಗಿದ್ದು ದಾರಿ ತೋರಿಸಿ' ಅಂದಳು. ಅಷ್ಟೇ ಅಲ್ಲ, ಆನಂತರದ ಮೂರು ದಿನ, ಚಿಕ್ಕಮ್ಮನ ಮನೆಗೆ ಸಮಯಕ್ಕೆ ಸರಿಯಾಗಿ ಕಾಫಿ, ತಿಂಡಿ, ಊಟ ಸರಬರಾಜು ಮಾಡಿದಳು. "ಇದೆಲ್ಲಾ ನಮ್ಮ ಕರ್ತವ್ಯ ಕಣೋ. ಸಾಧ್ಯವಾದಷ್ಟು ಮಟ್ಟಿಗೆ ಆ ಕುಟುಂಬವನ್ನೂ ನೋಡ್ಕೊಬೇಕು ಇನ್ಮೆಲೆ...' ಅಂದಳು.

ಉತ್ತರಕ್ರಿಯೆಗೆ ಇನ್ನೂ ಐದು ದಿನಗಳ ಸಮಯವಿತ್ತು. ಯಾರಿಗೆ ಏನೇನೆಲ್ಲಾ ಕೆಲಸ ಹೇಳಬೇಕು, ಯಾರ್ಯಾರಿಗೆ ಫೋನ್‌ ಮಾಡ ಬೇಕು? ಎಲ್ಲೆಲ್ಲಿಗೆ ಕಾರ್ಡ್‌ ಕೊಡಲು ಹೋಗಬೇಕು ಎಂದೆಲ್ಲಾ ಅಮ್ಮ ಪಟ್ಟಿ ಮಾಡುತ್ತಿದ್ದಳು. ಆಗಲೇ ಯಾರೋ ಬಂದಂತಾಯಿತು. ಎದ್ದು ನೋಡಿದರೆ- ಚಿಕ್ಕಮ್ಮ. "ಬಾಮ್ಮ, ಬಾ ಒಳಗೆ...' ಅಮ್ಮ ಕರೆ ಯುವ ಮೊದಲೇ ಚಿಕ್ಕಮ್ಮ ಬಂದಿದ್ದರು. ಜೊತೆಯಲ್ಲೇ ಮಕ್ಕಳೂ. ಆಕೆಯ ಕೈಯಲ್ಲಿ ಹಳೆಯದೊಂದು ಕಡತವಿತ್ತು. "ಇವೆಲ್ಲಾ ಜಮೀನಿನ ದಾಖಲೆಗಳಂತೆ. ಎಲ್ಲವನ್ನೂ ಹರಿದು ಹಾಕಿದೀನಿ. ಏನೆಲ್ಲಾ ಇದ್ರೂ ಏನ್ಮಾಡೋಕಾಯ್ತು ಅವರಿಗೆ? ನಾವಂತೂ ಒಟ್ಟಾಗಿ ಬದುಕಲಿಲ್ಲ. ನಮ್ಮ ಮಕ್ಕಳಾದ್ರೂ ಜೊತೇಲಿ ಬಾಳಲಿ' ಅಂದರು ಚಿಕ್ಕಮ್ಮ. ಅಂಥದೊಂದು ಮಾತಿಗೇ ಕಾದಿದ್ದವರಂತೆ- ಚಿಕ್ಕಪ್ಪನ ನಾಲ್ಕೂ ಮಕ್ಕಳು ಅವಸರದಿಂದ ನಡೆದುಹೋಗಿ ಅಮ್ಮನನ್ನು ತಬ್ಬಿಕೊಂಡವು. ಮಕ್ಕಳ ತಲೆ ನೇವರಿಸುತ್ತ ಅಮ್ಮನೂ, ಅಮ್ಮನ ಕೈಡಿದುಕೊಂಡು ಚಿಕ್ಕಮ್ಮನೂ ಬಿಕ್ಕಳಿಸತೊಡಗಿದರು...

ಎ.ಆರ್‌. ಮಣಿಕಾಂತ್‌

Trending videos

Back to Top