CONNECT WITH US  

ನೆರುಗಳ ಸೊಪ್ಪಿನ ವೈವಿಧ್ಯ

ನೆರುಗಳ ಸೊಪ್ಪು ಈ ಗಿಡದ ಪರಿಚಯ ಈಗಿನ ಯುವ ಜನಾಂಗಕ್ಕೆ ಬಹುಶಃ ಇಲ್ಲ. ಈ ಸೊಪ್ಪಿಗೆ ವಿಶಿಷ್ಟವಾದ ಪರಿಮಳವಿದೆ. ಈ ಸೊಪ್ಪು ತಿನ್ನುವುದರಿಂದ ಹಸಿವು ಹೆಚ್ಚುತ್ತದೆ. ಜೀರ್ಣಾಂಗವ್ಯೂಹಗಳಿಗೆ ಉತ್ತಮ. ಇದರ ಸಾರು, ಹುಳಿಮೆಣಸಿನ ಸಾಂಬಾರು, ಚಟ್ನಿಪುಡಿ, ತಂಬುಳಿ ಸೇವನೆ ಆರೋಗ್ಯಕ್ಕೆ ಒಳ್ಳೆಯದು.

ನೆರುಗಳ ಸೊಪ್ಪಿನ ಹುಳಿಮೆಣಸಿನ ಕೊದಿಲು
ಬೇಕಾಗುವ ಸಾಮಗ್ರಿ: 2 ಕಪ್‌ ಹದವಾಗಿ ಬೆಳೆದ ನೆರುಗಳ ಸೊಪ್ಪು , 1 ಕಪ್‌ ತೆಂಗಿನ ತುರಿ, 3-4 ಕೆಂಪು ಮೆಣಸು, ಸಣ್ಣ ತುಂಡು ಬೆಲ್ಲ, ಸಣ್ಣ ತುಂಡು ಹುಳಿ, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ , ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಅರಸಿನ, ಸಣ್ಣ ತುಂಡು ಕೆಂಪು ಮೆಣಸು.

ತಯಾರಿಸುವ ವಿಧಾನ: ತೆಂಗಿನತುರಿ, ಕೆಂಪುಮೆಣಸು, ಹುಳಿ, ಸ್ವಲ್ಪ ನೀರು ಸೇರಿಸಿ ರುಬ್ಬಿ. ನಂತರ ಒಂದು ಪಾತ್ರೆಗೆ ಹಾಕಿ. ಒಲೆಯ ಮೇಲಿಟ್ಟು ಬೇಕಾದಷ್ಟು ನೀರು, ಉಪ್ಪು, ಬೆಲ್ಲ, ಅರಸಿನ, ನೆರುಗಳ ಸೊಪ್ಪು ಹಾಕಿ 5-10 ನಿಮಿಷ ಕುದಿಸಿ. ನಂತರ ಕೆಳಗಿಳಿಸಿ. ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸಿನ ಒಗ್ಗರಣೆ ಮಾಡಿ ಹಾಕಿ. ಈಗ ಆರೋಗ್ಯಕರವಾದ ಹುಳಿಮೆಣಸಿನ ಕೊದಿಲು ಅನ್ನ, ಸಾಂಬಾರಿನಂತೆ ದೋಸೆಗೂ ಸವಿಯಲು ಸಿದ್ಧ.

ನೆರುಗಳ ಸೊಪ್ಪಿನ ಸಾರು
ಬೇಕಾಗುವ ಸಾಮಗ್ರಿ: 1/2 ಕಪ್‌ ತೊಗರಿಬೇಳೆ, 2 ಕಪ್‌ ಹದವಾಗಿ ಬೆಳೆದ ನೆರುಗಳ ಸೊಪ್ಪು , 1 ಚಮಚ ಸಾರಿನಪುಡಿ, 1/2 ಚಮಚ ಬೆಲ್ಲ , 1/2 ಚಮಚ ಹುಳಿ, 1/2 ಚಮಚ ಸಾಸಿವೆ, ಸಣ್ಣ ತುಂಡು ಕೆಂಪುಮೆಣಸು, 1 ಚಮಚ ಎಣ್ಣೆ , ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಗರಿಬೇಳೆ, ಸ್ವಲ್ಪ ನೀರು, 1/4 ಚಮಚ ಎಣ್ಣೆ ಹಾಕಿ ಕುಕ್ಕರಿನಲ್ಲಿ ಬೇಯಿಸಿ. ನಂತರ ಸಾರಿನ ಪುಡಿ, ಹುಳಿ, ಬೆಲ್ಲ, ಬೇಯಿಸಿದ ಬೇಳೆ, ನೆರುಗಳ ಸೊಪ್ಪು , ಸ್ವಲ್ಪ ನೀರು ಹಾಕಿ 5-10 ನಿಮಿಷ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪು ಮೆಣಸು ಒಗ್ಗರಣೆ ಮಾಡಿ ಹಾಕಿ. ಈ ಸೊಪ್ಪಿಗೆ ಅದರದೇ ವಿಶೇಷವಾದ ಪರಿಮಳವಿರುವುದರಿಂದ ಕರಿಬೇವು ಹಾಕುವ ಅಗತ್ಯವಿರುವುದಿಲ್ಲ.

ನೆರುಗಳ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿ: 1 ಕಪ್‌ ನೆರುಗಳ ಸೊಪ್ಪು , 1/2 ಕಪ್‌ ಕಾಯಿತುರಿ, 1-2 ಹಸಿಮೆಣಸು, ಉಪ್ಪು ರುಚಿಗೆ ತಕ್ಕಷ್ಟು , 1 ಕಪ್‌ ಸಿಹಿ ಮಜ್ಜಿಗೆ, 1/2 ಚಮಚ ಸಾಸಿವೆ, 1 ಚಮಚ ಎಣ್ಣೆ , ಕೆಂಪು ಮೆಣಸು.

ತಯಾರಿಸುವ ವಿಧಾನ: ನೆರುಗಳ ಸೊಪ್ಪು ದಂಟಿನಿಂದ ಬೇರ್ಪಡಿಸಿ ತೊಳೆದು, ಕಾಯಿತುರಿ, ಹಸಿಮೆಣಸು, ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿ. ಅದಕ್ಕೆ ಮಜ್ಜಿಗೆ, ಉಪ್ಪು , ಬೇಕಾದಷ್ಟು ನೀರು ಸೇರಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪು ಮೆಣಸಿನ ಒಗ್ಗರಣೆ ಕೊಡಿ.

ನೆರುಗಳ ಸೊಪ್ಪಿನ ಚಟ್ನಿಹುಡಿ
ಬೇಕಾಗುವ ಸಾಮಗ್ರಿ: 2 ಕಪ್‌ ನೆರುಗಳ ಸೊಪ್ಪು , 1 ಕಪ್‌ ಒಣ ತೆಂಗಿನಕಾಯಿ ತುರಿ, 5-6 ಒಣಮೆಣಸು, 5-6 ಎಸಳು ಹುಳಿ ಅಥವಾ 1 ಚಮಚ ಹುಣಸೆಹಣ್ಣು , 2 ಚಮಚ ತೆಂಗಿನೆಣ್ಣೆ , ರುಚಿಗೆ ಬೇಕಾದಷ್ಟು ಉಪ್ಪು .

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತೆಂಗಿನಕಾಯಿ ತುರಿ ಹಾಕಿ ಹಳದಿ ಬಣ್ಣಕ್ಕೆ ಬರುವ ತನಕ ಹುರಿದು ಕೆಳಗಿಳಿಸಿ. ನಂತರ ನೆರುಗಳ ಸೊಪ್ಪು ಮತ್ತು ಎಸಳು ಹುಳಿ ಅಥವಾ ಹುಣಸೆಹಣ್ಣು ಹಾಕಿ ಬೇರೆ ಬೇರೆಯಾಗಿ ಗರಗರ ಆಗುವಷ್ಟು ಹುರಿದು ತೆಗೆದು, ಒಣಮೆಣಸಿಗೆ ಸ್ವಲ್ಪ ಎಣ್ಣೆ ಹುರಿದು ಮಿಕ್ಸಿಗೆ ಹಾಕಿ. ನಂತರ ನೆರುಗಳ ಸೊಪ್ಪು ಎಸಳು ಹುಳಿ ಹಾಕಿ ಸ್ವಲ್ಪ ಪುಡಿ ಮಾಡಿ. ನಂತರ ತೆಂಗಿನತುರಿ ಮತ್ತು ಉಪ್ಪು ಹಾಕಿ ಮಿಕ್ಸಿಯಲ್ಲಿ ಸ್ವಲ್ಪ ತರಿ ತರಿಯಾಗಿ ಪುಡಿ ಮಾಡಿ. ಪರಿಮಳಭರಿತವಾದ, ಆರೋಗ್ಯಕರವಾದ ಈ ಚಟ್ನಿಪುಡಿ ಅನ್ನ, ದೋಸೆಯೊಂದಿಗೆ ಸವಿಯಲು ಚೆನ್ನಾಗಿರುತ್ತದೆ.

ನೆರುಗಳ ಸೊಪ್ಪಿನ ಚಟ್ನಿ
ಬೇಕಾಗುವ ಸಾಮಗ್ರಿ: 1 ಕಪ್‌ ನೆರುಗಳ ಸೊಪ್ಪು , 1 ಚಮಚ ಹುಳಿ, 2 ಹಸಿಮೆಣಸು, 1 ಕಪ್‌ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು , 1/2 ಚಮಚ ಸಾಸಿವೆ, 1 ಚಮಚ ಎಣ್ಣೆ , ಸಣ್ಣ ತುಂಡು ಕೆಂಪು ಮೆಣಸು.

ತಯಾರಿಸುವ ವಿಧಾನ: ನೆರುಗಳ ಸೊಪ್ಪು ಚೆನ್ನಾಗಿ ತೊಳೆದು ಸ್ವಲ್ಪ ಎಣ್ಣೆ ಹಾಕಿ ಹುರಿದು, ನಂತರ ತೆಂಗಿನತುರಿ, ಹುಳಿ, ಹಸಿಮೆಣಸು, ಉಪ್ಪು , ಸ್ವಲ್ಪ ನೀರು ಸೇರಿಸಿ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ಸಾಸಿವೆ, ಒಣಮೆಣಸು ಎಣ್ಣೆಯಲ್ಲಿ ಸಿಡಿಸಿ ಒಗ್ಗರಣೆ ಕೊಡಿ. ಈ ಚಟ್ನಿ ದೋಸೆ, ಇಡ್ಲಿ , ಅನ್ನದ ಜೊತೆ ತಿನ್ನಲು ರುಚಿ. ಹಸಿಮೆಣಸು ಇಷ್ಟವಿಲ್ಲದವರು ಕೆಂಪು ಮೆಣಸು ಹುರಿದು ಹಾಕಬಹುದು.

ಸರಸ್ವತಿ

Trending videos

Back to Top